
ಮಲೆನಾಡು ಮತ್ತು ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನಿನ್ನೆ ಮತ್ತು ಇಂದು ಅಂಗನವಾಡಿ, ಶಾಲೆಗಳು ಮತ್ತು ಪಿಯು ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.
ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಮಳೆಯಿಂದ ಅವಾಂತರ
ಕರಾವಳಿ, ಮಲೆನಾಡು ಭಾಗದಲ್ಲಿ ವರುಣನ ಅಬ್ಬರ ಜೋರಾಗಿದೆ. ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಆಷಾಢ ಮಾಸದ ರೀತಿಯಲ್ಲಿ ಮಳೆ ಸುರಿಯುತ್ತಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯಿಂದ ಸಾಲು ಸಾಲು ಅವಾಂತರಗಳು ಸೃಷ್ಟಿಯಾಗಿವೆ. ಮೂಡಿಗೆರೆ ತಾಲೂಕಿನ ಬಾಳೂರು ಗ್ರಾಮದ ಎಸ್ಟೇಟ್‌ನಲ್ಲಿ ಮಧ್ಯರಾತ್ರಿ ಕಾರ್ಮಿಕರ ಮನೆ ಮೇಲೆ ಭಾರಿ ಗಾತ್ರದ ಮರಬಿದ್ದಿದೆ. ಸುನಂದಾ ಎಂಬುವವರು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. 20 ಕಾರ್ಮಿಕರು ಪವಾಡ ಸದೃಶ್ಯ ಪಾರಾಗಿದ್ದಾರೆ.
ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಮಳೆ ಸುರಿಯುತ್ತಿರುವ ಕಾರಣ, ಕಡಬ ತಾಲೂಕಿನಲ್ಲಿರುವ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನ ಘಟ್ಟ ಮುಳುಗಡೆಯಾಗಿದೆ. ಭಕ್ತಾಧಿಗಳಿಗೆ ಸ್ನಾನಘಟ್ಟಕ್ಕೆ ಇಳಿಯದಂತೆ ನಿರ್ಬಂಧಿಸಲಾಗಿದೆ. ಭಾರಿ ಮಳೆ ಪರಿಣಾಮ ವಾಹನಗಳು ಸ್ಕಿಡ್ ಆಗಿ ಪಲ್ಟಿಯಾಗುತ್ತಿವೆ. ಚಿಕ್ಕಮಗಳೂರಿನಲ್ಲಿ ನಾಲ್ಕೈದು ಅವಘಡಗಳು ಸಂಭವಿಸಿದ್ವು. ಸೋಮವಾರ ಕಳಸದ ಕುದುರೆಮುಖ ಸರ್ಕಲ್ ಬಳಿ ಕಾರೊಂಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿಕ್ಕಮಗಳೂರು, ಶೃಂಗೇರಿ, ಕಳಸ, ಕೊಪ್ಪ, ಮೂಡಿಗೆರೆ, ಎನ್ ಆರ್ ಪುರ ತಾಲೂಕಿನಲ್ಲಿ ಭಾರಿ ಮಳೆಯಾಗ್ತಿದೆ. ತುಂಗಾ, ಭದ್ರಾ, ಹೇಮಾವತಿ ನದಿಗಳ ಒಳ ಹರಿವು ಹೆಚ್ಚಳವಾಗಿದೆ.
ಹಾಸನ ಜಿಲ್ಲೆಯಲ್ಲಿ ಅಲ್ಲಲ್ಲಿ ಗುಡ್ಡ ಕುಸಿತ!
ಹಾಸನ ಜಿಲ್ಲೆಯ ವಿವಿಧಡೆ ಭಾರಿ ಮಳೆಯಾಗುತ್ತಿದೆ. ಸಕಲೇಶಪುರದ ಆನೆಮಹಲ್ ಬಳಿ ಹೆದ್ದಾರಿ ಸಮೀಪ ಮಣ್ಣು ಕುಸಿಯುತ್ತಿದೆ. ವಾಹನ ಸವಾರರು ಆತಂಕದಲ್ಲೇ ಸಂಚರಿಸುತ್ತಿದ್ದಾರೆ. ಸಕಲೇಶಪುರದಲ್ಲಿ ಮಲೆನಾಡ್ ಕೆಫೆ ಹೋಟೆಲ್‌ನ ಗೋಡೆ ಕುಸಿದಿದ್ದು, ನಾಲ್ವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಇನ್ನು, ಸಕಲೇಶಪುರ ತಾಲೂಕಿನ ಶಿರಾಡಿಘಾಟ್ ರಸ್ತೆಯಲ್ಲಿ 2 ಕಡೆ ಭೂಕುಸಿತ ಸಂಭವಿಸಿದೆ.
ಉಡುಪಿ ಜಿಲ್ಲೆಯಲ್ಲೂ ಮಳೆಯಾರ್ಭಟ ತೀವ್ರಗೊಳ್ಳುತ್ತಿದೆ. ಪಡುಕೆರೆ ಸಮುದ್ರ ತೀರದಲ್ಲಿ ಅಲೆಗಳ ಅಬ್ಬರ ಜೋರಾಗಿದೆ. ಬೃಹತ್ ಗಾತ್ರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿವೆ. ತೀರಪ್ರದೇಶದ ಜನ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.
ಕಳೆದ ವರ್ಷ ಉತ್ತರ ಕನ್ನಡ ಜಿಲ್ಲೆಯ ಶಿರೂರಿನಲ್ಲಿ ಭೂಕುಸಿತದಿಂದ ಎಚ್ಚೆತ್ತುಕೊಂಡಿರುವ ಉತ್ತರಕನ್ನಡ ಜಿಲ್ಲಾಡಳಿತ ಸಂಭಾವ್ಯ ಗುಡ್ಡ ಕುಸಿತದ 439 ಸ್ಥಳಗಳನ್ನು ಗುರುತು ಮಾಡಿದೆ. ಈ ಪೈಕಿ 19 ಸೂಕ್ಷ್ಮ ಪ್ರದೇಶಗಳು ಹೆದ್ದಾರಿ ಪಕ್ಕದಲ್ಲಿವೆ. ಹೆದ್ದಾರಿಯ ಈ 19 ಸ್ಥಳಗಳಲ್ಲಿ ವಾಹನ ನಿಲುಗಡೆಯನ್ನು ಜಿಲ್ಲಾಡಳಿತ ನಿರ್ಬಂಧಿಸಿದೆ.
Advertisement