
ಬೆಂಗಳೂರು: ಕಲಬುರಗಿ ಜಿಲ್ಲಾಧಿಕಾರಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಬಿಜೆಪಿ ಎಂಎಲ್‌ಸಿ ಎನ್ ರವಿಕುಮಾರ್ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಂಗಳವಾರ ಹೇಳಿದ್ದಾರೆ.
ಸುದ್ದಿಸಂಸ್ಥೆ ಎಎನ್ಐ ಜೊತೆ ಮಾತನಾಡಿದ ಅವರು, 'ಬೆಳಿಗ್ಗೆಯಿಂದ ಅರ್ಧ ಡಜನ್‌ಗೂ ಹೆಚ್ಚು ಐಎಎಸ್ ಅಧಿಕಾರಿಗಳು ನನ್ನನ್ನು ಭೇಟಿ ಮಾಡಿದ್ದಾರೆ. ಅವರೆಲ್ಲರೂ ತುಂಬಾ ಉದ್ರಿಕ್ತ ಮನಸ್ಥಿತಿಯಲ್ಲಿದ್ದಾರೆ. ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಸರ್ಕಾರ ರವಿಕುಮಾರ್ ವಿರುದ್ಧ ಕ್ರಮ ಕೈಗೊಳ್ಳುತ್ತದೆ' ಎಂದು ತಿಳಿಸಿದರು.
'ಬಿಜೆಪಿ ಅಧ್ಯಕ್ಷರು, ವಿರೋಧ ಪಕ್ಷದ ನಾಯಕರು ಮತ್ತು ಕೇಂದ್ರ ಸಚಿವರು ಇದಕ್ಕೆ ಪ್ರತಿಕ್ರಿಯಿಸಬೇಕೆಂದು ನಾನು ಬಯಸುತ್ತೇನೆ' ಎಂದು ಅವರು ಹೇಳಿದರು.
ಮೇ 24 ರಂದು ಬಿಜೆಪಿಯ 'ಕಲಬುರಗಿ ಚಲೋ' ಪ್ರತಿಭಟನೆ ವೇಳೆ ಆಯೋಜಿಸಲಾದ ಪ್ರತಿಭಟನಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ರವಿಕುಮಾರ್, ಜಿಲ್ಲಾಡಳಿತವು ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಪ್ರಭಾವದಿಂದ ಕಾರ್ಯನಿರ್ವಹಿಸುತ್ತಿದೆ. ಕಲಬುರಗಿ ಡಿಸಿ ಕಚೇರಿಯೂ ತನ್ನ ಸ್ವಾತಂತ್ರ್ಯ ಕಳೆದುಕೊಂಡಿದೆ. ಡಿಸಿ ಮೇಡಂ ಅವರು (ಕಾಂಗ್ರೆಸ್) ಹೇಳುವುದನ್ನು ಸಹ ಕೇಳುತ್ತಿದ್ದಾರೆ. ಡಿಸಿ ಪಾಕಿಸ್ತಾನದಿಂದ ಬಂದಿದ್ದಾರೋ ಅಥವಾ ಇಲ್ಲಿ ಐಎಎಸ್ ಅಧಿಕಾರಿಯೋ ನನಗೆ ತಿಳಿದಿಲ್ಲ' ಎಂದು ರವಿಕುಮಾರ್ ಹೇಳಿದ್ದಾರೆ. ಈ ವೇಳೆ ಜನರ ಚಪ್ಪಾಳೆಗೆ ಪ್ರತಿಕ್ರಿಯಿಸಿ, ನಿಮ್ಮ ಚಪ್ಪಾಳೆ ನೋಡಿದರೆ, 'ಡಿಸಿ ಬಹುಶಃ ಪಾಕಿಸ್ತಾನದಿಂದ ಬಂದಿದ್ದಾರೆ' ಎಂದಿದ್ದಾರೆ.
ರವಿಕುಮಾರ್ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿರುವ ಸಚಿವ ಶರಣ್ ಪ್ರಕಾಶ್ ಪಾಟೀಲ್, ಅವರು ಅನಗತ್ಯವಾಗಿ ಉದ್ವಿಗ್ನತೆ ಉಂಟುಮಾಡುತ್ತಿದ್ದಾರೆ ಮತ್ತು ಜಿಲ್ಲಾಡಳಿತವನ್ನು ರಾಜಕೀಯಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಇದು ಉದ್ದೇಶಪೂರ್ವಕವಾಗಿ ಪ್ರಚೋದಿಸುವ ಮತ್ತು ಕೋಮುವಾದೀಕರಣಗೊಳಿಸುವ ಪ್ರಯತ್ನವಾಗಿದೆ. ಅಧಿಕಾರಿಯ ವಿರುದ್ಧ ಇಂತಹ ಹೇಳಿಕೆಗಳು ಸ್ವೀಕಾರಾರ್ಹವಲ್ಲ' ಎಂದು ಹೇಳಿದ್ದಾರೆ.
Advertisement