ನೆಹರೂ ಹಾಕಿಕೊಟ್ಟ ಅಡಿಪಾಯದಲ್ಲಿ ಭಾರತ ವಿಶ್ವದ 4ನೇ ದೊಡ್ಡ ಆರ್ಥಿಕ ಶಕ್ತಿಯಾಗಿದೆ: ಸಿದ್ದರಾಮಯ್ಯ

ಭಾರತೀಯರ ಕಣ್ಣೀರು ಒರೆಸುವುದು, ನೋವುಗಳಿಗೆ ಪರಿಹಾರ ಒದಗಿಸುವುದು ನಮ್ಮ ಮೊದಲ ಕೆಲಸ ಎಂದು ಆರಂಭದಲ್ಲಿ ಘೋಷಣೆ ಮಾಡಿದ ನೆಹರೂರವರು, ನಂತರ ದೇಶ ನಿರ್ಮಾಣದಲ್ಲಿ ತೊಡಗಿಸಿಕೊಂಡರು.
 Siddaramaiah pays tributes to former PM Jawaharlal Nehru
ನೆಹರೂ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ
Updated on

ಬೆಂಗಳೂರು: ನೆಹರೂರವರು ಹಾಕಿದ ಅಡಿಪಾಯಗಳಿಂದ ಭಾರತ ವಿಶ್ವದ 4ನೇ ದೊಡ್ಡ ಆರ್ಥಿಕ ಶಕ್ತಿಯಾಗಿದೆ. ಅಪಾರ ಶಿಕ್ಷಣ ಮತ್ತು ಜ್ಞಾನ ಹೊಂದಿದ್ದ ನೆಹರೂ ಆಧುನಿಕ‌ ಭಾರತದ ನಿರ್ಮಾಣಕ್ಕೆ ಭದ್ರವಾದ ಅಡಿಪಾಯ ಹಾಕಿದರು ಎಂದು ಸಿಎಂ ಸಿದ್ದರಾಮಯ್ಯ ಶ್ಲಾಘಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಜವಾಹರಲಾಲ್ ನೆಹರೂ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಭಾರತೀಯರ ಕಣ್ಣೀರು ಒರೆಸುವುದು, ನೋವುಗಳಿಗೆ ಪರಿಹಾರ ಒದಗಿಸುವುದು ನಮ್ಮ ಮೊದಲ ಕೆಲಸ ಎಂದು ಆರಂಭದಲ್ಲಿ ಘೋಷಣೆ ಮಾಡಿದ ನೆಹರೂರವರು, ನಂತರ ದೇಶ ನಿರ್ಮಾಣದಲ್ಲಿ ತೊಡಗಿಸಿಕೊಂಡರು.

ಬ್ರಿಟೀಷರು ಲೂಟಿ ಮಾಡಿದ್ದ ದೇಶದಲ್ಲಿ ಯಾವ ಸವಲತ್ತುಗಳೂ ಇರಲಿಲ್ಲ. ಇಂಥ ಹೊತ್ತಲ್ಲಿ ಪ್ರಧಾನಿಯಾಗಿ ದೇಶದ ಚುಕ್ಕಾಣಿ ಹಿಡಿದ ನೆಹರೂ ದೇಶವನ್ನು ದಶ ದಿಕ್ಕುಗಳಿಂದ ಕಟ್ಟಿ ನಿಲ್ಲಿಸಿದ ರೀತಿ ಅವಿಸ್ಮರಣೀಯ. ಅಪಾರ ಶ್ರೀಮಂತ ಕುಟುಂಬಕ್ಕೆ ಸೇರಿದ ನೆಹರೂರವರ ತಮ್ಮ ಕುಟುಂಬದ ಆಸ್ತಿಯನ್ನು ದೇಶಕ್ಕೆ ಒಪ್ಪಿಸಿ ದೇಶದ ಪ್ರತಿಯೊಂದು ಕ್ಷೇತ್ರಗಳೂ ಪ್ರಗತಿ ಪಥದಲ್ಲಿ ಸಾಗುವಂತೆ ಮಾಡಿದರು.

ಆಹಾರ ಕ್ರಾಂತಿ, ಹಸಿರು ಕ್ರಾಂತಿಯ ಜೊತೆಗೆ ವಿಜ್ಞಾನ-ತಂತ್ರಜ್ಞಾನದ ಪ್ರಗತಿಗೆ ಕಾರ್ಯಕ್ರಮಗಳು, ತಾಂತ್ರಿಕ‌ ವಿಶ್ವ ವಿದ್ಯಾನಿಲಯಗಳನ್ನು ಸ್ಥಾಪಿಸಿ ತಾಂತ್ರಿಕ ಕ್ಷೇತ್ರದ ಪ್ರಗತಿಯ ಮೂಲಕ ವೈಜ್ಞಾನಿಕ ಭಾರತದ ನಿರ್ಮಾತೃ ಕೂಡ ಆದರು. ಅವರ ಕೊಡುಗೆಯನ್ನು ಬಿಜೆಪಿ, ಆರ್‌ಎಸ್‌ಎಸ್ ಎಷ್ಟೇ ಅಳಿಸಲು ಹೆಣಗಾಡಿದರೂ ಅದು ಸಾಧ್ಯವಾಗುತ್ತಿಲ್ಲ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದೆ ಬ್ರಿಟೀಷರ ಜೊತೆಗಿದ್ದ ಆರ್‌ಎಸ್‌ಎಸ್ ಮತ್ತು ಬಿಜೆಪಿಯವರು ಈಗ ದೇಶಭಕ್ತಿ ಬಗ್ಗೆ ಬರಿ ಭಾಷಣ ಮಾಡುವುದು ಢೋಂಗಿತನ.

ಪ್ರಜಾಪ್ರಭುತ್ವ, ಸಂಸದೀಯ ವ್ಯವಸ್ಥೆಯಲ್ಲಿ, ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಲ್ಲದ ಬಿಜೆಪಿಯವರು ಸಾಮಾಜಿಕ ನ್ಯಾಯದ ಪರವಾಗಿದ್ದ ಅಂಬೇಡ್ಕರ್, ನೆಹರೂ ಬಗ್ಗೆ ಸಹಸ್ರ ಸಹಸ್ರ ಸುಳ್ಳುಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಕಿಡಿಕಾರಿದರು.

 Siddaramaiah pays tributes to former PM Jawaharlal Nehru
ನೀತಿ ಆಯೋಗದ ಸಭೆಗೆ ಸಿಎಂ ಸಿದ್ದರಾಮಯ್ಯ ಗೈರು: ಕರ್ನಾಟಕಕ್ಕೆ ಅಪಪ್ರಚಾರ- ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಡಾಂಗೆ ಮತ್ತು ಸಾವರ್ಕರ್ ಎಂದು ಸ್ವತಃ ಅಂಬೇಡ್ಕರ್ ಅವರೇ ತಮ್ಮದೇ ಹಸ್ತಾಕ್ಷರದಲ್ಲಿ ಪತ್ರ ಬರೆದಿದ್ದಾರೆ. ಆದರೂ ಬಿಜೆಪಿ, ಆರ್‌ಎಸ್‌ಎಸ್ ಅಂಬೇಡ್ಕರ್ ಸೋಲಿಗೆ ಕಾಂಗ್ರೆಸ್ ಕಾರಣ ಎಂದು ಹಸಿ ಹಸಿ ಸುಳ್ಳುಗಳನ್ನು ಹಂಚುತ್ತಾ ತಿರುಗುತ್ತಿದೆ. ಬಿಜೆಪಿಗೆ ಗೊತ್ತಿರುವುದು ಬರಿ ಹಿಂಸೆ ಮತ್ತು ಸುಳ್ಳು. ದಲಿತರು, ಶೂದ್ರರ ಮೇಲೆ ಕೇಸುಗಳು ಬೀಳುವಂತೆ ಮಾಡುವುದು ಇದೇ ಸಂಘಪರಿವಾರ ಮತ್ತು ಬಿಜೆಪಿ. ಆಮೇಲೆ ಅವರನ್ನು ಜೈಲಿನಿಂದ ಕರೆದುಕೊಂಡು ಬರುವುದೂ ಇವರೇ. ಇದೇ ನಾಟಕ ಆಡಿಕೊಂಡೇ ಅವರು ಕಾಲ‌ಕಳೆಯುತ್ತಿದ್ದಾರೆ ಎಂದರು.

ಇದೇ ವೇಳೆ ಮಾತನಾಡಿದ ಡಿಸಿಎಂ ಶಿವಕುಮಾರ್, ನೆಹರೂ ಇಲ್ಲದೇ ಈ ದೇಶವಿಲ್ಲ. ಉದಾಹರಣೆಗೆ ನಮ್ಮ ರಾಜ್ಯವನ್ನೇ ತೆಗೆದುಕೊಳ್ಳಿ. ಇಲ್ಲಿರುವ ಬಿಹೆಚ್ಇಎಲ್, ಐಟಿಐ, ಹೆಚ್ಎಎಲ್, ಇಸ್ರೋ, ಬೆಮೆಲ್ ಸೇರಿದಂತೆ ಯಾವುದೇ ಸಾರ್ವಜನಿಕ ಸಂಸ್ಥೆ ತೆಗೆದುಕೊಂಡರೂ ಇವುಗಳನ್ನು ಸ್ಥಾಪಿಸಿದವರು ನೆಹರೂ ಅವರು. ಆಗಿನ ಕಾಲದಲ್ಲೇ ಬೆಂಗಳೂರಿನ ಮೇಲೆ ಅಪಾರವಾದ ನಂಬಿಕೆ ಹೊಂದಿದ್ದವರು ನೆಹರೂ. ಇನ್ನು ನಾವು ಸಂವಿಧಾನ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಮಾತನಾಡುತ್ತೇವೆ.

ಅಂಬೇಡ್ಕರ್ ಅವರನ್ನು ಗುರುತಿಸಿ ಅವರನ್ನು ಕಾನೂನು ಸಚಿವರನ್ನಾಗಿ ಮಾಡಿದ್ದು ನೆಹರೂ ಅವರು. ನಹೆರೂ ಅವರ ಜತೆ ಸಮಾಜದ ಎಲ್ಲಾ ವರ್ಗದ ಜನರು ಗುರುತಿಸಿಕೊಂಡಿದ್ದರು. ಈ ದೇಶಕ್ಕೆ ಸಂವಿಧಾನ, ರಾಷ್ಟ್ರಧ್ವಜ, ಅವರ ಪಂಚವಾರ್ಷಿಕ ಯೋಜನೆ ನಮ್ಮ ದೇಶವನ್ನು ನಿರ್ಮಿಸಿದೆ. ಆಹಾರಕ್ಕೆ ಅಭಾವದಿಂದ ಕೂಡಿದ್ದ ದೇಶವನ್ನು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವಂತೆ ಮಾಡಿದ್ದು ನೆಹರೂ ಅವರು. ಹರಿಸು ಕ್ರಾಂತಿ, ಕೈಗಾರಿಕಾ ಕ್ರಾಂತಿ, ಶೈಕ್ಷಣಿಕ ಕ್ರಾಂತಿ ಮಾಡಿದರು” ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com