ದಕ್ಷಿಣ ಕನ್ನಡದಲ್ಲಿ 'ಭಯೋತ್ಪಾದಕ' ವಾತಾವರಣ ಸೃಷ್ಟಿಸಲು ಪ್ರಯತ್ನಗಳು ನಡೆದಿವೆ: ಸಚಿವ ದಿನೇಶ್ ಗುಂಡೂರಾವ್

ಗೃಹ ಸಚಿವ ಜಿ ಪರಮೇಶ್ವರ ಅವರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಈಗ ಒಬ್ಬರು ಸಾವಿಗೀಡಾಗಿದ್ದಾರೆ. ಆದರೆ, ಬಂದಿರುವ ಮಾಹಿತಿಯ ಪ್ರಕಾರ, ಹೆಚ್ಚಿನ ಜನರನ್ನು ಕೊಲ್ಲುವುದು ಯೋಜನೆಯ ಉದ್ದೇಶವಾಗಿತ್ತು' ಎಂದು ಹೇಳಿದರು.
Dinesh Gundurao
ದಿನೇಶ್ ಗುಂಡೂರಾವ್
Updated on

ಬೆಂಗಳೂರು: ದೇಶ ವಿರೋಧಿ ಶಕ್ತಿಗಳು ಮುಸ್ಲಿಮರನ್ನು ಗುರಿಯಾಗಿಸಿಕೊಂಡಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 'ಭಯೋತ್ಪಾದಕ' ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಗುರುವಾರ ಹೇಳಿದ್ದಾರೆ.

'ಈ ಘಟನೆ ನಮಗೆ ನೋವುಂಟು ಮಾಡಿದೆ. ನಾನು ಮುಖ್ಯಮಂತ್ರಿ ಮತ್ತು ಗೃಹ ಸಚಿವರೊಂದಿಗೆ ಚರ್ಚಿಸಿದ್ದೇನೆ. ಜಿಲ್ಲೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗುತ್ತಿದೆ. ಕಾನೂನಿನ ಭಯವಿಲ್ಲದೆ ಏನು ಬೇಕಾದರೂ ಮಾಡಬಹುದು ಎಂಬ ಮನಸ್ಥಿತಿ ಬಂದಿದೆ. ಭಯವನ್ನು ಸೃಷ್ಟಿಸುವ ಗುರಿಯನ್ನು ಇದು ಹೊಂದಿರುವುದರಿಂದ ಇದು ಕಳವಳಕಾರಿಯಾಗಿದೆ. ಇದು ಬಹಳ ಸ್ಪಷ್ಟವಾಗಿ ಗೋಚರಿಸುತ್ತಿದೆ' ಎಂದು ಹೇಳಿದರು.

ಇಲ್ಲಿ ಗೃಹ ಸಚಿವ ಜಿ ಪರಮೇಶ್ವರ ಅವರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಈಗ ಒಬ್ಬರು ಸಾವಿಗೀಡಾಗಿದ್ದಾರೆ. ಆದರೆ, ಬಂದಿರುವ ಮಾಹಿತಿಯ ಪ್ರಕಾರ, ಹೆಚ್ಚಿನ ಜನರನ್ನು ಕೊಲ್ಲುವುದು ಯೋಜನೆಯ ಉದ್ದೇಶವಾಗಿತ್ತು' ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿಯೂ ಆಗಿರುವ ರಾವ್, ಜಿಲ್ಲೆಯಲ್ಲಿ ತೆಗೆದುಕೊಳ್ಳಬೇಕಾದ ಮುಂದಿನ ಕ್ರಮಗಳು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.

Dinesh Gundurao
ಮಂಗಳೂರಿನಲ್ಲಿ ಕೋಮು ದ್ವೇಷ ಅಂತ್ಯಗೊಳ್ಳಲಿ, ಸಾಮರಸ್ಯ ಮೇಲುಗೈ ಸಾಧಿಸಲಿ: ಸಿಎಂ ಸಿದ್ದರಾಮಯ್ಯ

'ಈ ಶಕ್ತಿಗಳು ರಾಷ್ಟ್ರ ವಿರೋಧಿ ಶಕ್ತಿಗಳಾಗಿವೆ. ಏಕೆಂದರೆ, ಅವರು ಸಮಾಜದಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಭಯವನ್ನು ಸೃಷ್ಟಿಸಲು ಬಯಸುತ್ತಾರೆ. ಅವರು (ಮುಸ್ಲಿಮರು) ಏನನ್ನಾದರೂ ಮಾತನಾಡಿದರೆ, ಯಾರೇ ಆಗಿರಲಿ ಅಂತವರನ್ನು ಗುರಿಯಾಗಿಸಲಾಗುತ್ತಿದೆ. ಕರ್ನಲ್ ಸೋಫಿಯಾ ಖುರೇಷಿ, ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನಮ್ ಅವರ ವಿರುದ್ಧ ಬಿಜೆಪಿ ನಾಯಕರು ಬಳಸಿದ ಭಾಷೆಯು ಬಿಜೆಪಿಯ ಉಗ್ರಗಾಮಿ, ಭಯೋತ್ಪಾದಕ ಮನಸ್ಥಿತಿಯನ್ನು ತೋರಿಸುತ್ತದೆ' ಎಂದು ಅವರು ಮಧ್ಯಪ್ರದೇಶ ಸಚಿವ ವಿಜಯ್ ಶಾ ಮತ್ತು ಕರ್ನಾಟಕ ಎಂಎಲ್‌ಸಿ ಎನ್ ರವಿ ಕುಮಾರ್ ಅವರ ಹೇಳಿಕೆಗಳನ್ನು ಎತ್ತಿ ತೋರಿಸಿದರು.

ಕೊಲೆಯಾದ ಅಬ್ದುಲ್ ರಹೀಂ ಮತ್ತು ಆತನ 29 ವರ್ಷದ ಸಹೋದ್ಯೋಗಿ ಕಲಂದರ್ ಶಫಿ ಜಲ್ಲಿಕಲ್ಲು ಇಳಿಸುತ್ತಿದ್ದಾಗ, ಮೋಟಾರ್ ಸೈಕಲ್‌ನಲ್ಲಿ ಬಂದ ಇಬ್ಬರು ಯುವಕರು ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ರಹೀಂ ಸ್ಥಳದಲ್ಲೇ ಸಾವಿಗೀಡಾದರೆ, ಶಫಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೇ 1 ರಂದು ಕೋಮು ಸೂಕ್ಷ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಸುಹಾಸ್ ಶೆಟ್ಟಿ ಹತ್ಯೆಯ ಬೆನ್ನಲ್ಲೇ ರಹೀಂ ಹತ್ಯೆಯೂ ನಡೆದಿದೆ.

ಮುಸ್ಲಿಮರನ್ನು ಪಾಕಿಸ್ತಾನಿಗಳೆಂದು ಬಿಂಬಿಸಲು ಹೇಳಿಕೆಗಳನ್ನು ನೀಡಲಾಗುತ್ತಿದೆ. ಈ ದೇಶವು ಸಂವಿಧಾನದ ಪ್ರಕಾರ ಎಲ್ಲರಿಗೂ ಸೇರಿದ್ದು, ಆದರೆ ಅವರಿಗೆ ಅದರಲ್ಲಿ ನಂಬಿಕೆ ಇಲ್ಲ. ಇಂತಹ ಮನಸ್ಥಿತಿಯು ಯುವಕರ ಮನಸ್ಸನ್ನು ಕಲುಷಿತಗೊಳಿಸಿದೆ ಮತ್ತು ಅವರು ಪ್ರಭಾವಿತರಾಗುತ್ತಿದ್ದಾರೆ. ಇದು ಕೆಟ್ಟ ಬೆಳವಣಿಗೆಯಾಗಿದ್ದು, ಹಿಂಸಾತ್ಮಕ ಘಟನೆಗಳಿಗೆ ಕಾರಣವಾಗುತ್ತಿದೆ. ಹಿಂದೂ, ಮುಸ್ಲಿಂ ಅಥವಾ ಕ್ರಿಶ್ಚಿಯನ್ ಆಗಿರಲಿ, ಯಾರೇ ಅಪರಾಧ ಮಾಡಿದರೂ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಮತ್ತು ಸರ್ಕಾರವು ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಕೊಲೆಯಾದ ವ್ಯಕ್ತಿ ನಿರಪರಾಧಿಯಾಗಿದ್ದು, ಯಾವುದೇ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿಲ್ಲ' ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

'ಈ ಜನರಿಗೆ (ದುಷ್ಕರ್ಮಿಗಳಿಗೆ) ಮಾನವೀಯತೆ ಇಲ್ಲ. ಯಾವ ಧರ್ಮ ಅಂತಹ ಕೆಲಸಗಳನ್ನು (ಕೊಲೆಗಳನ್ನು) ಮಾಡಲು ಹೇಳುತ್ತದೆ? ಹಿಂದೂ ಧರ್ಮ ಅಥವಾ ಭಗವದ್ಗೀತೆ ಅಥವಾ ರಾಮಾಯಣ ಹೇಳುತ್ತದೆಯೇ? ಏನೂ ತಿಳಿಯದ ವ್ಯಕ್ತಿಯನ್ನು ಕೊಲ್ಲಲಾಯಿತು. ಅವರ ಕುಟುಂಬ ಈಗ ಏನು ಮಾಡಬೇಕು?' ಎಂದು ಪ್ರಶ್ನಿಸಿದರು.

'ಶಾಂತಿ ಸ್ಥಾಪಿಸಲು, ತಪ್ಪಿತಸ್ಥರನ್ನು ಶಿಕ್ಷಿಸಲು ಮತ್ತು ಅಂತಹ ಘಟನೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಪೊಲೀಸರು ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ನಾವು ಅದರ ಬಗ್ಗೆ ಚರ್ಚಿಸುತ್ತಿದ್ದೇವೆ. ನಾವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಇದು ಸರ್ಕಾರಕ್ಕೆ ಒಂದು ಸವಾಲು. ಅಂತಹ ಶಕ್ತಿಗಳನ್ನು ಕಾನೂನುಬದ್ಧವಾಗಿ ನಿಗ್ರಹಿಸಬೇಕಾಗಿದೆ ಮತ್ತು ಸಮಾಜದಲ್ಲಿ ಶಾಂತಿ ಸ್ಥಾಪಿಸಬೇಕಾಗಿದೆ' ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com