ಕೋಮುಗಲಭೆಗಳಿಂದ ಕರಾವಳಿ ಭಾಗಕ್ಕೆ ಕೊಡಲಿ ಪೆಟ್ಟು; ಕರ್ನಾಟಕಕ್ಕೆ ನಷ್ಟ: ಡಿ.ಕೆ ಶಿವಕುಮಾರ್
ಬೆಂಗಳೂರು: ಕೋಮುಗಲಭೆಗಳಿಂದ ಕರಾವಳಿ ಭಾಗಕ್ಕೆ ಕೊಡಲಿ ಪೆಟ್ಟು ಬೀಳುತ್ತಿದೆ. ಇದರಿಂದ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕರ್ನಾಟಕ ರಾಜ್ಯಕ್ಕೆ ನಷ್ಟವಾಗುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾವು ಎಲ್ಲಾ ಸಮಾಜ ರಕ್ಷಣೆ ಮಾಡಲು ಕ್ರಮ ಕೈಗೊಂಡಿದ್ದೇವೆ. ಪಕ್ಷದ ವತಿಯಿಂದ ಒಂದು ತಂಡ ಕಳುಹಿಸಿ ವರದಿ ನೀಡಲು ಹೇಳಿದ್ದೇವೆ. ಅಧಿಕಾರಿಗಳು ನೀಡುವ ವರದಿ ಬೇರೆ, ಸಾರ್ವಜನಿಕರ ಜತೆ ಚರ್ಚೆ ಮಾಡಿ ವರದಿ ನೀಡಲು ನಮ್ಮ ಪಕ್ಷದವರಿಗೆ ತಿಳಿಸಿದ್ದೇನೆ. ಕರಾವಳಿ ಭಾಗದಲ್ಲಿ ಶಾಂತಿ ನೆಲೆಸಬೇಕು. ಇದು ಒಂದು ಸಾವು, ಎರಡು ಸಾವಿನ ವಿಚಾರ ಮಾತ್ರವಲ್ಲ. ಇದು ಇಡೀ ಕರಾವಳಿ ಭಾಗಕ್ಕೆ ಬಿದ್ದಿರುವ ಕೊಡಲಿಪೆಟ್ಟು.
ಜನರು ಆಂತಕಕ್ಕೆ ಒಳಗಾಗುವುದು, ಬಂಡವಾಳ ಹೂಡಿಕೆದಾರರು ಅಲ್ಲಿ ಹೂಡಿಕೆ ಮಾಡಲು ಹಿಂಜರಿಯುತ್ತಿರುವುದನ್ನು ಎಲ್ಲರೂ ಅರಿತುಕೊಳ್ಳಬೇಕು. ಈ ಪರಿಸ್ಥಿತಿಯನ್ನು ಅರಿತುಕೊಳ್ಳಬೇಕು ಎಂದು ಬಿಜೆಪಿ ಸ್ನೇಹಿತರು ಹಾಗೂ ಬೇರೆ ಬೇರೆ ಸಂಘಟನೆಗಳಿಗೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.
ನೀವು ಅಧಿಕಾರಿಗಳನ್ನು ವರ್ಗಾವಣೆ ಮಾಡಿದರೂ ಪರಿಸ್ಥಿತಿ ನಿಯಂತ್ರಣವಾಗುತ್ತಿಲ್ಲ ಎಂದು ಕೇಳಿದಾಗ, ಪರಿಸ್ಥಿತಿ ನಿಯಂತ್ರಿಸಲಾಗುತ್ತಿದೆ. ಬಿಜೆಪಿಯವರು ಹಾಗೂ ಅನೇಕ ಸಂಘಟನೆಗಳು ಈ ಭಾಗದಲ್ಲಿ ಕರ್ನಾಟಕ ರಾಜ್ಯದಲ್ಲಿ ಕೋಮು ಪ್ರಚೋದನೆ ಮಾಡುತ್ತಿದ್ದಾರೆ.
ಇದರಿಂದ ನಷ್ಟ ಆಗುವುದು ಕರ್ನಾಟಕ ರಾಜ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಎಂಬುದನ್ನು ಅವರು ಅರಿತುಕೊಳ್ಳಬೇಕು. ಅಲ್ಲಿರುವ ಪ್ರತಿಭಾವಂತ ಯುವಕರು ಈಗಾಗಲೇ ಉದ್ಯೋಗಕ್ಕಾಗಿ ಬೇರೆ ರಾಜ್ಯ ಹಾಗೂ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ನಾವು ಉದ್ಯೋಗ ಸೃಷ್ಟಿಸಲು ಪ್ರಯತ್ನಿಸುತ್ತಿದ್ದೇವೆ” ಎಂದು ತಿಳಿಸಿದರು.
ಅಧಿಕಾರಿಗಳು ಸ್ಥಳೀಯವಾಗಿ ಸ್ಪಂದಿಸುತ್ತಿಲ್ಲ ಎಂದು ಕೇಳಿದಾಗ “ನಮ್ಮ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಅಧಿಕಾರಿಗಳು ಸ್ಪಂದಿಸುತ್ತಾರೆ” ಎಂದರು. ಜೆಡಿಎಸ್ ಮುಖಂಡರು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಜೆಡಿಎಸ್ ಟ್ವೀಟ್ ಮಾಡಿರುವ ಬಗ್ಗೆ ಕೇಳಿದಾಗ, “ಅವರ ಪಕ್ಷದವರು ಯಾಕೆ ಗಾಬರಿಯಾಗಬೇಕು? ಅವರು ಒಂದೇ ಪಕ್ಷ ಅಲ್ಲವಲ್ಲ. ಅವರು ಎರಡು ಪಕ್ಷ ಸೇರಿ ಒಟ್ಟಿಗೆ ಇದ್ದಾರಲ್ಲಾ? ಅವರು ಯಾರ ಜತೆ ಬೇಕಾದರೂ ಬೇರೆಯಬಹುದು. ಜನ, ಕಾರ್ಯಕರ್ತರು, ಮುಖಂಡರು ನಮ್ಮ ಜತೆ ಸೇರಲು ಆಸೆ ಪಡುತ್ತಿದ್ದಾರೆ. ಅವರನ್ನು ಬೇಡ ಎನ್ನಲು ಸಾಧ್ಯವೇ?” ಎಂದು ತಿಳಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ