
ಬೆಳಗಾವಿ: ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ್ ವಿರುದ್ಧ ಲೋಕಾಯುಕ್ತ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿದ್ದಾರೆ.
ಪಾಟೀಲ್ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಶಾಸಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರು ತಿಳಿಸಿದ್ದಾರೆ.
ಈ ನಡುವೆ ಪ್ರಕರಣದ ದೂರುದಾರರಾಗಿರುವ ಖ್ಯಾತ ಸಾಮಾಜಿಕ ಕಾರ್ಯಕರ್ತ ಸುಜಿಲ್ ಮುಲ್ಗುಡ್ ಅವರು ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಭಯ ಪಾಟೀಲ್ ಅವರ ಭ್ರಷ್ಟಾಚಾರ ಹಾಗೂ ಅಕ್ರಮ ಆಸ್ತಿ ಸಂಪಾದನೆ ಸಂಬಂಧ ನಾನು 2012ರಿಂದಲೂ ಹೋರಾಟ ಮಾಡುತ್ತಿದ್ದೇನೆ. ಲೋಕಾಯುಕ್ತ ಅಧಿಕಾರಿಗಳಿಗೆ ದಾಖಲೆ ಸಮೇತ ದೂರು ಕೂಡ ನೀಡಿದ್ದೆ. ಈ ಹಿಂದೆ ಹೈಕೋರ್ಟ್ ಮೊರೆಹೋಗಿದ್ದ ಅಭಯ ಪಾಟೀಲ, ತಮ್ಮ ವಿರುದ್ಧ ಎಫ್‌ಐಆರ್ ದಾಖಲಿಸದಂತೆ ಆದೇಶ ಪಡೆದಿದ್ದರು. ಆಗ ನಮಗೆ ಹಿನ್ನಡೆ ಆಗಿತ್ತು. ಆದರೂ ನಾನು ಸುಪ್ರೀಂಕೋರ್ಟ್‌ಗೆ ಹೋಗಿ ಪ್ರಕರಣ ದಾಖಲಿಸುವಂತೆ ಹೋರಾಟ ಮಾಡಿದ್ದೇನೆ.
‘ಅಭಯ ಪಾಟೀಲ ತಮ್ಮ ಹಾಗೂ ತಮ್ಮ ಕುಟುಂಬದವರ ಹೆಸರಿನಲ್ಲಿ ಮಿತಿಗಿಂತ ಹೆಚ್ಚು ಆಸ್ತಿ ಸಂಪಾದಿಸಿದ್ದಾರೆ. ನಾನು ದೂರು ನೀಡಿದ ನಂತರ ಮೂರು ಬಾರಿ ತನಿಖಾ ವರದಿಗಳು ಸಲ್ಲಿಕೆಯಾಗಿವೆ. ಆದರೂ ಆಗಿನ ಅಧಿಕಾರಿಗಳು ಎಫ್‌ಐಆರ್ ದಾಖಲಿಸಲಿಲ್ಲ. ಶಾಸಕ ಇದನ್ನು ತಡೆದರು. ಆದರೆ, ಈಚೆಗೆ ಸುಪ್ರೀಂಕೋರ್ಟ್ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳನ್ನೇ ಪ್ರಶ್ನೆ ಮಾಡಿದೆ. ಅಂತಿಮವಾಗಿ 8 ತಿಂಗಳ ನಂತರ ಪ್ರಕರಣ ದಾಖಲಾಗಿದೆ.
ಮೇ 21, 2025 ರಂದು ಬೆಳಗಾವಿಯ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಸಲ್ಲಿಸಿದ್ದಾರೆ. ಆದರೆ, ಶಾಸಕರ ವಿರುದ್ಧ ಪ್ರಕರಣ ದಾಖಲಿಸುವಲ್ಲಿ ವಿಳಂಬವೇಕೆ ಮಾಡಲಾಯಿತು ಎಂಬುದು ನನ್ನ ಪ್ರಶ್ನೆ.
ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕಿದ್ದ ಲೋಕಾಯುಕ್ತ ಸಂಸ್ಥೆಯಿಂದಲೇ ತಪ್ಪಾಗಿದೆ. ಇದೀಗ ಜನರು ಲೋಕಾಯುಕ್ತ ವಿಶ್ವಾಸಾರ್ಹತೆಯ ಬಗ್ಗೆ ಅನುಮಾನ ಪಡುವಂತಾಗಿದೆ. ಶಾಸಕರ ಭ್ರಷ್ಟಾಚಾರದ ವಿರುದ್ಧ ಹೋರಾಟ ಮುನ್ನಡೆಸಿದ್ದಕ್ಕಾಗಿ ಇದೀಗ ಅಭಯ್ ಪಾಟೀಲ್ ಅವರ ಬೆಂಬಲಿಗರಿಂದ ನನಗೆ ಬೆದರಿಕೆಗಳು ಬರುತ್ತಿವೆ. ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ನಾನು ಬೆಳಗಾವಿ ಪೊಲೀಸರಿಗೆ ಆ ಬಗ್ಗೆ ದೂರು ನೀಡಿದ್ದರೂ, ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಶಾಸಕ ಅಭಯ್ ಪಾಟೀಲ್ ವಿರುದ್ಧ ದಾಖಲಿಸಿರುವ ಭ್ರಷ್ಟಾಚಾರ ಪ್ರಕರಣವನ್ನು ಹಿಂಪಡೆಯಲು ಒತ್ತಡ ಹೇರಿದ ಪಾಟೀಲ್ ಅವರ ಆಪ್ತ ವಕೀಲರ ಆಡಿಯೋ ರೆಕಾರ್ಡಿಂಗ್ ಕೂಡ ನನ್ನ ಬಳಿ ಇದೆ. ಈ ಆಡಿಯೋವನ್ನು ನ್ಯಾಯಾಲಯದಲ್ಲಿ ಹಾಜರುಪಡಿಸುತ್ತೇನೆಂದು ಹೇಳಿದರು.
ಮತ್ತೊಬ್ಬ ಕಾರ್ಯಕರ್ತ ರಾಜ್‌ಕುಮಾರ್ ಟೋಪಣ್ಣವರ್ ಮಾತನಾಡಿ, ನಾವು ಅಭಯ್ ಪಾಟೀಲ್ ವಿರುದ್ಧ ದೂರು ದಾಖಲಿಸಿದ್ದಲ್ಲದೆ, ನಿಯಮಗಳನ್ನು ಉಲ್ಲಂಘಿಸಿ ಕಾರ್ನರ್ ಸೈಟ್ ಹಂಚಿಕೆ ಬಗ್ಗೆಯೂ ಲೋಕಾಯುಕ್ತಕ್ಕೆ ದೂರುಗಳನ್ನು ಸಲ್ಲಿಸಿದ್ದೇವೆ. ಆದಾಗ್ಯೂ, ಲೋಕಾಯುಕ್ತರು ಆ ವಿಷಯಗಳ ಬಗ್ಗೆಯೂ ಸರಿಯಾದ ತನಿಖೆ ನಡೆಸಿಲ್ಲ ಎಂದು ಹೇಳಿದರು. ಇದೇ ವೇಳೆ ಲೋಕಾಯುಕ್ತರ ತನಿಖಾ ಪ್ರಕ್ರಿಯೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ನಾವು ಸಾಕಷ್ಟು ಸಾಕ್ಷ್ಯಗಳನ್ನು ಸಲ್ಲಿಸಿದ್ದರೂ, ಸರಿಯಾದ ತನಿಖೆ ನಡೆಸಲಾಗುತ್ತಿಲ್ಲ, ಇಷ್ಟೇ ಆದರೂ ನಾವು ಶಾಸಕರ ವಿರುದ್ಧದ ಕಾನೂನು ಹೋರಾಟವನ್ನು ಕೈಬಿಟ್ಟಿಲ್ಲ ಎಂದರು.
Advertisement