ನವೆಂಬರ್ ಪೂರ್ತಿ ಕನ್ನಡ ಧ್ವಜ ಹಾರಿಸುವ ಬಗ್ಗೆ ಸಂಪುಟದಲ್ಲಿ ತೀರ್ಮಾನ: ಮುಂಬೈನ ಮೂಲೆ,‌ ಮೂಲೆಯಲ್ಲಿ ಕಸದ ರಾಶಿ; DCM

ಈಗಾಗಲೇ‌‌ ಸಾಕಷ್ಟು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದರಿಂದ ಎಲ್ಲೆಂದರಲ್ಲಿ ಕಸ ಎಸೆಯುವವರನ್ನು ಗುರುತಿಸಿ ಅವರ ಮನೆ ಮುಂದೆಯೇ ಅದೇ ಕಸ ಸುರಿದು ಬುದ್ದಿವಾದ ಹೇಳುವ ಕೆಲಸ ಮಾಡಲಾಗುತ್ತಿದೆ
DK Shivakumar
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಡಿ.ಕೆ ಶಿವಕುಮಾರ್
Updated on

ಬೆಂಗಳೂರು: ಇಡೀ ನವೆಂಬರ್ ತಿಂಗಳಲ್ಲಿ ಖಾಸಗಿ‌ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಕನ್ನಡದ ಧ್ವಜ ಹಾರಿಸುವ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ಮಾಡಲಾಗುವುದು" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಶಾಲಾ ಮಕ್ಕಳ ಪಥಸಂಚಲನದಲ್ಲಿ ವಂದನೆ ಸ್ವೀಕರಿಸಿ ಹಾಗೂ ಇದಕ್ಕೂ ಮೊದಲು ವಿಧಾನಸೌಧದ ಭುವನೇಶ್ವರಿ ಪ್ರತಿಮೆ ಬಳಿ ಮಾಧ್ಯಮಗಳ ಜತೆ ಮಾತನಾಡಿದರು.

ಕರ್ನಾಟಕ ಕೇವಲ ನಾಡಲ್ಲ, ಸಂಸ್ಕೃತಿಯ ಬೀಡು. ಕನ್ನಡ ಕೇವಲ ನುಡಿಯಲ್ಲ, ನಮ್ಮ ಅಂತರಂಗದ ಮಾತು. ಕಲಿತವರಿಗೆ ಅಮೃತ, ನಡೆದವರಿಗೆ ನೆರಳು, ದಾರಿದೀಪ. ಕನ್ನಡ ಎನ್ನುವುದು ಜೀವನದ ವಿಧಾನ. ಇಂತಹ ಕನ್ನಡವನ್ನು ಇಂಗ್ಲಿಷ್ ಹಾಗೂ ಹಿಂದಿ ಭಾಷೆಯ ದಾಳಿಯಿಂದ ನಾವೆಲ್ಲರೂ ಕಾಪಾಡಿಕೊಳ್ಳಬೇಕು" ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

"ನಮ್ಮ ಉಸಿರು‌ ಕನ್ನಡ, ನಮ್ಮ ಕಸುವು ಕನ್ನಡ, ನಮ್ಮ ಹೆಸರು ಕನ್ನಡ, ನಮ್ಮ ಕಸುಬು ಕನ್ನಡ, ಕನ್ನಡವಿದು ಕನ್ನಡ, ಬನ್ನಿ ನಮ್ಮ ಸಂಗಡ" ಎಂದು ಗೋಪಾಲಕೃಷ್ಣ ಅಡಿಗರ ಕವನವನ್ನು ವಾಚಿಸಿದರು. ಆದಿಕವಿ ಪಂಪನಿಂದ ಹಿಡಿದು ಬಸವಣ್ಣ, ಅಲ್ಲಮಪ್ರಭು, ಕನಕದಾಸರು, ಪುರಂದರದಾಸರು, ಕುವೆಂಪು,‌ ಬೇಂದ್ರೆ, ಮಾಸ್ತಿ ಹೀಗೆ ಸಾಹಿತ್ಯದ ದೊಡ್ಡ ಪರಂಪರೆಯನ್ನು ನಾವು ಹೊಂದಿದ್ದೇವೆ. ಈ ಎಲ್ಲಾ ಸಾಹಿತ್ಯ ಭಂಡಾರವನ್ನು ಮಕ್ಕಳು ಬಾಚಿಕೊಳ್ಳಬೇಕು" ಎಂದು ಕರೆ ‌ನೀಡಿದರು.

DK Shivakumar
70ನೇ ಕನ್ನಡ ರಾಜ್ಯೋತ್ಸವ ಸಂಭ್ರಮ: ಎಲ್ಲೆಡೆ ಹರಡಿದ ಕನ್ನಡದ ಕಂಪು, ಕಂಠೀರವ ಸ್ಟೇಡಿಯಂನಲ್ಲಿ ಸಕಲ ಸಿದ್ಧತೆ

ರಸ್ತೆಬದಿ ಕಸ ಎಸೆದರೆ ಮತ್ತೆ ಅದು ಮರಳಿ ನಿಮ್ಮ ಮನೆಗೇ ಬರುತ್ತದೆ ಎನ್ನುವ ಎಚ್ಚರಿಕೆ ನೀಡುವುದರ ಜೊತೆಗೆ, ಇನ್ನೂ ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸ್ ಇಲಾಖೆ‌ ಹಾಗೂ ಪಾಲಿಕೆ ನೆರವಿನಿಂದ ಅಳವಡಿಸಲಾಗುವುದು" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ನಗರದಾದ್ಯಂತ ಎಲ್ಲೆಂದರಲ್ಲಿ ಕಸದ ರಾಶಿ ಇರುವ ಸಮಸ್ಯೆ ಕುರಿತು ಟೀಕೆ ವ್ಯಕ್ತವಾಗುತ್ತಿರುವ ಬಗ್ಗೆ ಕೇಳಿದಾಗ, "ಈಗಾಗಲೇ‌‌ ಸಾಕಷ್ಟು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದರಿಂದ ಎಲ್ಲೆಂದರಲ್ಲಿ ಕಸ ಎಸೆಯುವವರನ್ನು ಗುರುತಿಸಿ ಅವರ ಮನೆ ಮುಂದೆಯೇ ಅದೇ ಕಸ ಸುರಿದು ಬುದ್ದಿವಾದ ಹೇಳುವ ಕೆಲಸ ಮಾಡಲಾಗುತ್ತಿದೆ. ಕಸ ಎಸೆಯುವವರಿಗೆ ದಂಡ ವಿಧಿಸುವ ಕೆಲಸವೂ ನಡೆಯುತ್ತಿದೆ. ಈಗಾಗಲೇ ಲಕ್ಷಾಂತರ ರೂಪಾಯಿ ದಂಡ ಸಂಗ್ರಹಿಸಲಾಗಿದೆ" ಎಂದರು.

"ಶುಕ್ರವಾರದಂದು ಮುಂಬೈಗೆ ತೆರಳಿದ್ದೆ. ಅಲ್ಲಿಯೂ ಸಹ ಮೂಲೆ,‌ ಮೂಲೆಯಲ್ಲಿ ಕಸ ರಾಶಿ ಬಿದ್ದಿತ್ತು. ಬೇರೆ, ಬೇರೆ ಕಡೆಯಲ್ಲಿಯೂ ಬಿದ್ದಿರಬಹುದು. ಜನರು ತಮಗೆ ಇರುವ ಅವಕಾಶವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ನಿಲ್ಲಿಸಬೇಕು. ಜನರು ಸ್ವಚ್ಚ ಬೆಂಗಳೂರಿಗೆ ಹೆಚ್ಚು ಸಹಕಾರ ನೀಡಬೇಕು" ಎಂದರು.

"ಮುಂಬೈ ನಗರದಲ್ಲಿ ಪ್ರಮುಖ ರಸ್ತೆಗಳ ಕಾಮಗಾರಿ ಹಾಗೂ ನಿರ್ವಹಣೆ ನಡೆಸಿದವರಿಗೆ ಆ ರಸ್ತೆ ಬದಿಗಳ ಕಸ ವಿಲೇವಾರಿ ಮಾಡುವ ಜವಾಬ್ದಾರಿಯನ್ನು ನೀಡಲಾಗಿದೆ ಎನ್ನುವ ಮಾಹಿತಿಯಿದೆ. ಬೆಂಗಳೂರಿನಲ್ಲೂ ಈ ಮಾದರಿ ಜಾರಿ ಮಾಡುವ ಕುರಿತು ಚರ್ಚೆ ಮತ್ತು ಆಲೋಚನೆ ನಡೆಸಲಾಗುತ್ತಿದೆ" ಎಂದರು.

DK Shivakumar
ನವೆಂಬರ್ ಕ್ರಾಂತಿ ಬಿಜೆಪಿಯ ಊಹೆಯಷ್ಟೆ: ಡಿಕೆ ಶಿವಕುಮಾರ್ ದೇಹದಲ್ಲಿ ಹರಿಯುತ್ತಿರುವುದು ಕಾಂಗ್ರೆಸ್ ರಕ್ತ; ಜಮೀರ್ ಅಹ್ಮದ್ ಖಾನ್

ಡಬ್ಬಗಳನ್ನು ಇಟ್ಟುಕೊಂಡು ಮನೆಯ ಕಸವನ್ನು ಅದರಲ್ಲಿ ಸಂಗ್ರಹಿಸಿ. ಅವುಗಳನ್ನು ಕಡ್ಡಾಯವಾಗಿ ಕಸ ಸಂಗ್ರಹ ವಾಹನಗಳಿಗೆ ನೀಡಿ ಎಂದು ಮನವಿ ಮಾಡುತ್ತೇನೆ. ನಮ್ಮ ಅಧಿಕಾರಿಗಳು ಶುಕ್ರವಾರ ತಡರಾತ್ರಿವರೆಗೂ ನನಗೆ ಕಸ ವಿಲೇವಾರಿ ಸೇರಿದಂತೆ ಇದರ ಬಗ್ಗೆ ಮಾಹಿತಿ ನೀಡುತ್ತಿದ್ದರು" ಎಂದರು.

ಕಸ ಸಂಗ್ರಹಣೆಗೆ ಸರಿಯಾದ ವ್ಯವಸ್ಥೆಯಿಲ್ಲ ಎನ್ನುವ ನಾಗರಿಕರ ಆರೋಪದ ಬಗ್ಗೆ ಕೇಳಿದಾಗ, "ಇದೆಲ್ಲವೂ ಸುಳ್ಳು. ಪ್ರತಿದಿನವೂ ಮನೆಗಳಲ್ಲಿ ಕಸ ಸಂಗ್ರಹ ನಡೆಯುತ್ತಿದೆ. ಸಮಸ್ಯೆ ಎದುರಾಗಿದ್ದರೆ ಸೂಚಿತ ದೂರವಾಣಿ ಸಂಖ್ಯೆಗೆ ದೂರು ನೀಡಲಿ. ಇಡೀ ದೇಶದಲ್ಲಿಯೇ ಅತ್ಯುತ್ತಮ ವ್ಯವಸ್ಥೆ ರೂಪಿಸಿದ್ದೇವೆ. ಎಲ್ಲಾದರೂ ಕಸ, ರಸ್ತೆಗುಂಡಿ ಕಂಡರೆ ನಮಗೆ ಪೋಟೊ ಹಾಗೂ ಜಾಗ ಕಳಿಸಿ ಎನ್ನುವ ಅವಕಾಶ ನೀಡಿದ್ದೇವೆ. ಮಾಧ್ಯಮಗಳು ಪ್ರತಿದಿನ ಒಂದೊಂದು ರಸ್ತೆಗುಂಡಿ ಹಾಕುತ್ತಲೇ ಇರುತ್ತಾರೆ. ಎಷ್ಟೇ ಕೆಲಸ ಮಾಡಿದರೂ ರಸ್ತೆಗುಂಡಿ ಇದ್ದೇ ಇರುತ್ತದೆ. ವಾಹನಗಳು ಜರ್ಕ್ ಹೊಡೆದರೆ ರಸ್ತೆಗುಂಡಿ ಉಂಟಾಗುತ್ತದೆ. ಆದ ಕಾರಣಕ್ಕೆ ನಾವು ಈ ಸಮಸ್ಯೆ ನಿವಾರಣೆಗೆ ಏನೇನೊ ಪ್ರಯತ್ನ ಮಾಡುತ್ತಿದ್ದೇವೆ.

"ಕನಿಷ್ಠ ಹತ್ತು ವರ್ಷ ಬಾಳಿಕೆ ಬರುವ ಡಾಂಬರ್ ರಸ್ತೆ ತಂತ್ರಜ್ಞಾನ ಬಳಸಿ ರಸ್ತೆ ನಿರ್ಮಾಣವು ಹೈದರಾಬಾದ್ ಸೇರಿದಂತೆ ಇತರೆಡೆ ಮಾಡಲಾಗುತ್ತಿದೆಯಂತೆ. ಇದರ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಕಾಮಗಾರಿ ನಡೆಸುವ ಯಂತ್ರಗಳು ಸಾಕಷ್ಟು ದುಬಾರಿಯಾದ‌ ಕಾರಣಕ್ಕೆ ಕನಿಷ್ಠ ಹತ್ತು ಕಿಲೋಮೀಟರ್ ಕಾಮಗಾರಿಗೆ ಅವಕಾಶ ನೀಡಬೇಕು ಎಂದು ಈ ತಂತ್ರಜ್ಞಾನ ಹೊಂದಿರುವವರು ತಿಳಿಸಿದ್ದಾರೆ. ಇದರ ಬಗ್ಗೆ ಚಿಂತನೆ ಮಾಡಲಾಗುತ್ತಿದೆ" ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com