

ಬೆಂಗಳೂರು: ಒಳ ಮೀಸಲಾತಿ ಮತ್ತು ಇತರ ಕಲ್ಯಾಣ ಕ್ರಮಗಳಲ್ಲಿ ಅಲೆಮಾರಿಗಳಿಗೆ ಶೇ.1 ರಷ್ಟು ಮೀಸಲಾತಿ ನೀಡುವ ಕುರಿತು ಕಾನೂನು ಇಲಾಖೆಯೊಂದಿಗೆ ಸಮಾಲೋಚಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಅಲೆಮಾರಿ ಸಮುದಾಯದ ಸದಸ್ಯರು ಮುಷ್ಕರ ಕೈಬಿಟ್ಟಿದ್ದಾರೆ.
ಒಳಮೀಸಲಾತಿ ಕುರಿತು ಅಲೆಮಾರಿ ಒಕ್ಕೂಟದ ಪದಾಧಿಕಾರಿಗಳ ನಿಯೋಗ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿತು.
ಈ ವೇಳೆ ಸಮುದಾಯದ ಬೇಡಿಕೆಗಳಿಗೆ ಸ್ಪಂದಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸುಧಾರಣೆಗೆ ಎಸ್ ಸಿ ಪಿ /ಟಿ ಎಸ್ ಪಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದೇ ನಮ್ಮ ಸರಕಾರ. ಪ್ರತಿಯೊಬ್ಬರಿಗೂ ಪರಿಹಾರ ಸಿಗಲಿ ಎನ್ನುವುದೇ ನಮ್ಮ ಉದ್ದೇಶ. ಯಾವುದೇ ಜಾತಿಯೊಳಗೆ ಇನ್ನೊಂದನ್ನು ಸೇರಿಸುವ, ಯಾವುದೇ ಸಮುದಾಯಕ್ಕೆ ಅನ್ಯಾಯ ಮಾಡುವ ಉದ್ದೇಶ ಸರ್ಕಾರಕ್ಕಿಲ್ಲ. ಇದಕ್ಕೊಂದು ಪರಿಹಾರ ಹುಡುಕಿ, ನ್ಯಾಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಒಳಮೀಸಲಾತಿ ಕಲ್ಪಿಸಲು ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಈಗ ಉಂಟಾಗಿರುವ ಗೊಂದಲಗಳಿಗೂ ಆದ್ಯತೆ ಮೇರೆಗೆ ಪರಿಹಾರ ಕಂಡುಕೊಳ್ಳಲು ಸರಕಾರ ಬದ್ಧವಾಗಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರ ಭರವಸೆ ಹಿನ್ನೆಲೆಯಲ್ಲಿ ಸಮುದಾಯದ ನಾಯಕರು ಫ್ರೀಡಂ ಪಾರ್ಕ್‌ನಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಧರಣಿಯನ್ನು ಹಿಂತೆಗೆದುಕೊಂಡರು.
ನಾವು ಸರ್ಕಾರದ ನಿರ್ಧಾರವನ್ನು ಸಕಾರಾತ್ಮಕವಾಗಿ ಪರಿಗಣಿಸುತ್ತೇವೆ. ಆದರೆ, ನಿರ್ದಿಷ್ಟ ಆದೇಶ ಬರಬೇಕು. ಅಲ್ಲಿಯವರೆಗೆ ನೇಮಕಾತಿಗಳನ್ನು ನಿಲ್ಲಿಸಬೇಕು ಎಂದು ಒಕ್ಕೂಟದ ನಾಯಕ ಶೇಷಪ್ಪ ಅವರು ಆಗ್ರಹಿಸಿದ್ದಾರೆ.
ಏತನ್ಮಧ್ಯೆ ಸಭೆಗೆ ಹಾಜರಾಗಲು ವಿಧಾನಸೌಧ ಪೊಲೀಸರು ಬಿಡದ ಹಿನ್ನೆಲೆಯಲ್ಲಿ ಬಿಜೆಪಿ ವಕ್ತಾರ ಲೋಹಿತ್ ಬಿಆರ್ ಸೇರಿದಂತೆ ಇತರರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು.
Advertisement