

ಬೆಂಗಳೂರು: ರಾಜ್ಯದಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಹಾಗೂ ಸರ್ಕಾರಿ ಸಭೆ ಸಮಾರಂಭಗಳಲ್ಲಿ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲಿ ಬಳಕೆಯನ್ನು ನಿಷೇಧಿಸಲಾಗಿದೆ.
ಈ ಸಂಬಂಧ ಮುಖ್ಯಮಂತ್ರಿಗಳು ಆದೇಶ ಹೊರಡಿಸಿದ್ದಾರೆ. ರಾಜ್ಯದಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಹಾಗೂ ಸರ್ಕಾರಿ ಸಭೆ ಸಮಾರಂಭಗಳಲ್ಲಿ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲ್‌ಗಳ ಬದಲಾಗಿ ಪರಿಸರ ಸ್ನೇಹಿ ವಸ್ತುಗಳಿಂದ ತಯಾರಿಸಿದ ಪರಿಕರಗಳನ್ನು ಬಳಕೆ ಮಾಡುವಂತೆ ಹಿಂದೆಯೇ ಸೂಚನೆಗಳನ್ನು ನೀಡಲಾಗಿತ್ತು. ಈ ಕ್ರಮವನ್ನು ಕಟ್ಟುನಿಟ್ಟಾಗಿ ಪಾಲಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇದಲ್ಲದೆ, ಮುಖ್ಯಮಂತ್ರಿ ಮತ್ತು ಇಲಾಖಾ ಸಚಿವರುಗಳ ಸಭೆಗಳಲ್ಲಿ, ಸಚಿವಾಲಯವೂ ಸೇರಿದಂತೆ ರಾಜ್ಯದಾದ್ಯಂತ ನಡೆಯುವ ಎಲ್ಲಾ ಸರ್ಕಾರಿ ಸಭೆ–ಕಾರ್ಯಕ್ರಮಗಳಲ್ಲಿ ಸರ್ಕಾರಿ ಸ್ವಾಮ್ಯದ ಕೆಎಂಎಫ್‌ನ 'ನಂದಿನಿ' ತಿನಿಸುಗಳನ್ನು ಕಡ್ಡಾಯವಾಗಿ ಬಳಸುವಂತೆಯೂ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.
ವಿವಿಗಳಿಗೆ ಬಸವಣ್ಣ, ನಾಲ್ವಡಿ, ದೇವರಾಜ ಅರಸು ಹೆಸರಿಡಲು ಚಿಂತನೆ
ಏತನ್ಮಧ್ಯೆ ವಿಶ್ವಗುರು, ಸಾಂಸ್ಕೃತಿಕ ನಾಯಕ ಬಸವಣ್ಣ, ನಾಲ್ವಡಿ ಕೃಷ್ಣರಾಜ ಒಡೆಯರ್, ಡಿ. ದೇವರಾಜ ಅರಸು ಸೇರಿದಂತೆ ಹಲವು ಗಣ್ಯಮಾನ್ಯರ ಹೆಸರನ್ನ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಗೆ ನಾಮಕರಣ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಈ ಕುರಿತು ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರು ಅಧಿಕೃತ ಸುತ್ತೋಲೆ ಹೊರಡಿಸಿದ್ದಾರೆ. ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಗೆ ಆದಿ ಕವಿ ಮಹರ್ಷಿ ವಾಲ್ಮೀಕಿ, ಅಕ್ಕಮಹಾದೇವಿ, ರಾಣಿ ಚನ್ನಮ್ಮ, ಕೃಷ್ಣದೇವರಾಯ, ಕುವೆಂಪು, ವಿಶ್ವೇಶ್ವರಯ್ಯ, ಗಂಗೂಬಾಯಿ ಹಾನಗಲ್, ರಾಜೀವ್ ಗಾಂಧಿ ಹಾಗೂ ಮನಮೋಹನ್ ಸಿಂಗ್ ಅವರ ಹೆಸರುಗಳನ್ನ ಈಗಾಗಲೇ ನಾಮಕರಣ ಮಾಡಲಾಗಿದೆ.
ಅದರಂತೆ ವಿಶ್ವಗುರು-ಸಾಂಸ್ಕತಿಕ ನಾಯಕ ಬಸವಣ್ಣ, ಶೂದ್ರ ಸಿದ್ಧಾಂತದ ಹರಿಕಾರ ಕನಕದಾಸರು, ಹಿಂದುಳಿದ ಸಮುದಾಯಗಳಿಗೆ ಚೈತನ್ಯ ನೀಡಿದ ರಾಜ್ಯದ ಅಭಿವೃದ್ಧಿಗೆ ಚಲನಶೀಲತೆ ತಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಡಿ.ದೇವರಾಜ ಅರಸು ಅವರ ಹೆಸರನ್ನ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಗೆ ನಾಮಕರಣ ಮಾಡುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ಪರಿಶೀಲಿಸಿ, ಸೂಕ್ತ ಪ್ರಸ್ತಾವನೆಯನ್ನ ಮುಂದಿನ ಸಚಿವ ಸಂಪುಟದ ಮುಂದೆ ತರಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
Advertisement