

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ, ವಿಧಾನಪರಿಷತ್ ಸದಸ್ಯ ಯತೀಂದ್ರ ಲಂಚ ಪಡೆದುಕೊಂಡ ಕೆಲಸ ಮಾಡಿಕೊಡುತ್ತಿದ್ದಾರೆ. ಸಿಎಂ ಮನೆಯನ್ನೇ ಭ್ರಷ್ಟಾಚಾರ ಅವರ ಮೂಗಿನ ನೇರಕ್ಕೆ ನಡೆಯುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಗಳ ಶವ ಪರೀಕ್ಷೆಗೂ ಲಂಚ ಪಡೆದ ಪ್ರಕರಣದಿಂದ ಕರ್ನಾಟಕದ ಮಾನ ರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗಿದೆ. ರಾಜ್ಯದಲ್ಲಿ ಲಂಚಾವತಾರ ತಾಂಡವವಾಡುತ್ತಿದೆ. ಅಧಿಕಾರಿಗಳು ಹಣ ಕೊಟ್ಟು ಪೋಸ್ಟಿಂಗ್ ಮಾಡಿಕೊಳ್ಳುತ್ತಿದ್ದಾರೆ. ಲಂಚವಿಲ್ಲದೆ ಈ ಸರ್ಕಾರದಲ್ಲಿ ಏನೂ ನಡೆಯುವುದಿಲ್ಲ ಎಂದು ದೂರಿದರು.
ರಾಜ್ಯದಲ್ಲಿ ಮಹಿಳೆರಿಗೆ ರಕ್ಷಣೆ ಇಲ್ಲವಾಗಿದೆ. ನೀವು ಯಾರನ್ನಾದರೂ ಮುಖ್ಯಮಂತ್ರಿ ಮಾಡಿ, ಆದರೆ, ಮಹಿಳಾ ರಕ್ಷಣೆ ನಿಮ್ಮ ಆದ್ಯತೆಯಾಗಿರಲಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಒತ್ತಾಯಿಸಿದರು. ಕರ್ನಾಟಕದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ, ಮಹಿಳೆಯರ ಕೊಲೆ, ಬಾಲಕಿಯರ ಮೇಲಿನ ಅತ್ಯಾಚಾರ ನಿರಂತರವಾಗಿ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಕಳೆದ 2 ವರ್ಷಗಳಲ್ಲಿ 1800ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ದೌರ್ಜನ್ಯ ಆಗಿದೆ. ಮುಖ್ಯಮಂತ್ರಿಗಳ ಜಿಲ್ಲೆಯಲ್ಲೇ ಬಲೂನ್ ಮಾರಾಟಕ್ಕೆ ಬಂದ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ ಆಗಿದೆ. ಹುಬ್ಬಳ್ಳಿಯಲ್ಲಿ ನೇಹಾ ಕೊಲೆ ನಡೆಯಿತು.
ಸರಕಾರ ಬಂದೊಡನೆ, ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದ್ದಾಗ ಬೆಳಗಾವಿ ನಗರದಲ್ಲೇ ಮಹಿಳೆಯನ್ನು ವಿವಸ್ತ್ರಗೊಳಿಸಿ ದೌರ್ನನ್ಯ ನಡೆದಿತ್ತು ಎಂದು ಗಮನ ಸೆಳೆದರು. ಗೃಹ ಸಚಿವರು ಕೆಲಸ ಮಾಡುತ್ತಿದ್ದಾರೆಯೇ, ಜಿಲ್ಲೆಗಳಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದಾರೆಯೇ ಅಥವಾ ಬೆಂಗಳೂರು ಮತ್ತು ತುಮಕೂರು ಹೊರತುಪಡಿಸಿ ಯಾವುದೇ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದಾರೆಯೇ ಎಂಬುದು ಅವರಿಗೆ ತಿಳಿದಿಲ್ಲ ಎಂದು ಹೇಳಿದರು.
ಬೆಂಗಳೂರಿನಲ್ಲಿ ಉಪನ್ಯಾಸಕರು, ಅತಿಥಿ ಉಪನ್ಯಾಸಕರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಮೂಡಬಿದಿರೆಯ ಉಪನ್ಯಾಸಕರು ಬೆಂಗಳೂರಿಗೆ ವಿದ್ಯಾರ್ಥಿನಿಯನ್ನು ಕರೆದುಕೊಂಡು ಬಂದು ಅತ್ಯಾಚಾರ ಮಾಡುತ್ತಾರೆ. ಮಲತಂದೆ ತನ್ನ ಮಗಳ ಮೇಲೆ ಮಾಡುತ್ತಾನೆ. ಕೆಲಸ ಹುಡುಕಿಕೊಂಡು ಬಂದ ಬಿಹಾರದ ಕುಟುಂಬ, ಒಡಿಶಾದ ಕುಟುಂಬದ ಮಕ್ಕಳು ಓಡಾಡುತ್ತಿದ್ದರೆ ಅವರನ್ನು ಎತ್ತಿಕೊಂಡು ಹೋಗಿ ಅತ್ಯಾಚಾರ ಮಾಡುತ್ತಿದ್ದಾರೆ. ಕರ್ನಾಟಕ, ಬೆಂಗಳೂರಿನಲ್ಲಿ ಈ ಧೈರ್ಯ ಹೇಗೆ ಬಂತು? ಇದಕ್ಕೆಲ್ಲ ಸರಕಾರ ಸತ್ತಿರುವುದೇ ಇದಕ್ಕೆ ಕಾರಣ ಎಂದು ವಿಶ್ಲೇಷಿಸಿದರು.
ಗೃಹ ಸಚಿವರು ಏನು ಕೆಲಸ ಮಾಡುತ್ತಿದ್ದಾರೆ ಎಂದು ಗೊತ್ತಿಲ್ಲ? ರಾಜ್ಯದ ಸಚಿವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಸಭೆ ನಡೆಸುತ್ತಾರೋ ಎಂಬುದೂ ಗೊತ್ತಿಲ್ಲ. ಗೃಹ ಸಚಿವರು ವಿವಿಧ ಜಿಲ್ಲೆಗಳಲ್ಲಿ ಎಸ್ಪಿ ಮತ್ತು ಪೊಲೀಸ್ ಅಧಿಕಾರಿಗಳ ಸಭೆ ನಡೆಸಬೇಕು; ಕಾನೂನು- ಸುವ್ಯವಸ್ಥೆಯ ಪರಿಶೀಲನೆ ಮಾಡಬೇಕು. ಆದರೆ, ಇವರು ಬೆಂಗಳೂರು ಬಿಟ್ಟು ಹೊರಟರೆ ತುಮಕೂರು ಎಂಬಂತಿದೆ ಎಂದು ಆಕ್ಷೇಪಿಸಿದರು.
ಮುಖ್ಯಮಂತ್ರಿಗಳು ಕಾರ್ಯಕ್ರಮದ ಶಿಲಾನ್ಯಾಸಕ್ಕೆ ಹೆಲಿಕಾಪ್ಟರ್‌ನಲ್ಲೇ ಹೋಗುತ್ತಿದ್ದು, ಅವರಿಗೆ ಭೂಮಿಯಲ್ಲಿ ಏನು ನಡೆಯುತ್ತದೆ ಎಂದು ಗೊತ್ತಿಲ್ಲ. ಡಿ.ಕೆ.ಶಿವಕುಮಾರ್ ಅವರ ರಾಜಕಾರಣ ಬೆಂಗಳೂರಿಗೆ ಮತ್ತು ವಿಧಾನಸೌಧದ ಸುತ್ತ ತಿರುಗುತ್ತಿದೆ. ಬೇಗ ಸಿಎಂ ಆಗಬೇಕೆಂಬುದು ಬಿಟ್ಟರೆ ತಲೆಯಲ್ಲಿ ಇನ್ನೇನೂ ಇಲ್ಲ ಎಂದು ಟೀಕಿಸಿದರು.
Advertisement