

ಬೆಂಗಳೂರು: ಮೈಸೂರು ರೇಷ್ಮೆಗೆ ಜಾಗತಿಕ ಬೇಡಿಕೆ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ರೇಷ್ಮೆ ಉತ್ಪಾದನೆಯನ್ನು ಸುಧಾರಿಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಶುಕ್ರವಾರ ಹೇಳಿದರು.
ಶುಕ್ರವಾರ ಕೇಂದ್ರ ರೇಷ್ಮೆ ಮಂಡಳಿ ರಾಷ್ಟ್ರೀಯ ರೇಷ್ಮೆಹುಳು ಬೀಜ ಸಂಸ್ಥೆಯ ಸುವರ್ಣ ಮಹೋತ್ಸವ ಉದ್ಘಾಟಿಸಿ, ರಾಷ್ಟ್ರೀಯ ರೇಷ್ಮೆಹುಳು ಬೀಜ ಸಂಸ್ಥೆಯ ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಿ ಮಾತನಾಡಿದರು.
ಹಲವು ಕ್ಷೇತ್ರಗಳಲ್ಲಿ ಭಾರತ ಸ್ವಾವಲಂಬಿಯಾಗಿದ್ದರೂ, ನಾವು ರೇಷ್ಮೆ, ದ್ವಿದಳ ಧಾನ್ಯಗಳು ಮತ್ತು ಖಾದ್ಯ ತೈಲಗಳನ್ನು ಆಮದು ಮಾಡಿಕೊಳ್ಳುತ್ತಲೇ ಇದ್ದೇವೆ. ರೇಷ್ಮೆ ಬಟ್ಟೆಯ ಬೇಡಿಕೆ 45,000 ಮೆಟ್ರಿಕ್ ಟನ್ ಇದೆ. ಆದರೆ ಭಾರತದಲ್ಲಿ ಕೇವಲ 41,000 ಮೆಟ್ರಿಕ್ ಟನ್ ರೇಷ್ಮೆ ಉತ್ಪಾದಿಸಲಾಗುತ್ತದೆ. ಉಳಿದದ್ದನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಇದನ್ನು ಕಡಿಮೆ ಮಾಡಬೇಕಾಗಿದೆ. ಚೀನಾ ಭಾರತದಿಂದ ಕೋಕೂನ್‌ಗಳು ಮತ್ತು ಇತರ ಕಚ್ಚಾ ವಸ್ತುಗಳನ್ನು ತೆಗೆದುಕೊಳ್ಳುತ್ತದೆ. ರೈತರು ಮತ್ತು ಉದ್ಯಮಿಗಳು ಈ ಸರಪಳಿಯನ್ನು ಮುರಿದು ಸ್ವಾವಲಂಬಿಗಳಾಗಬೇಕು ಎಂದು ಹೇಳಿದರು.
ಸಂಸದ ಡಾ. ಸಿ. ಎನ್. ಮಂಜುನಾಥ್ ಅವರು ಮಾತನಾಡಿ, ರಾಮನಗರ, ಬಿಡದಿ ಮತ್ತು ಆನೇಕಲ್ ಸೇರಿದಂತೆ ರೇಷ್ಮೆ ಉತ್ಪಾದನೆ ಹೆಚ್ಚಿರುವ ಪ್ರದೇಶಗಳಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ನಾವು ಚೀನಾದ ಅಭಿವೃದ್ಧಿ ಮಾದರಿಯನ್ನು ಅಳವಡಿಸಿಕೊಳ್ಳಬೇಕು, ಅಲ್ಲಿ ಸಣ್ಣ ಭೂಪ್ರದೇಶಗಳಲ್ಲಿ ದೊಡ್ಡ ಬೆಳವಣಿಗೆಗೆ ಒತ್ತು ನೀಡಲಾಗುತ್ತದೆ. ಉಳಿದ ಪ್ರದೇಶವನ್ನು ಕೃಷಿಗೆ ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಇಂದು ಸಾಕಷ್ಟು ಜನರು ಮೂರು ತಿಂಗಳಿಗೊಮ್ಮೆ ವೇತನ ಪಡೆಯುತ್ತಿದ್ದಾರೆ. ಬೆಳೆ ನಷ್ಟದಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಆದರೆ. ರೇಷ್ಮೆ ಕೃಷಿ ಲಾಭವನ್ನು ತೋರಿಸುತ್ತಿದೆ. ರೈತರಿಗೆ ರೇಷ್ಮೆ ಚಿನ್ನವಾಗಿದ್ದು, ಸ್ಥಿರವಾದ ಮಾಸಿಕ ಆದಾಯವನ್ನು ಖಾತಪಡಿಸುತ್ತದೆ. ರೇಷ್ಮೆಯ ತ್ಯಾಜ್ಯದ ಶೇ.60ನ್ನು ರಫ್ತು ಮಾಡಲಾಗುತ್ತದೆ. ಉಪ-ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದರು.
ಸಿಎಸ್‌ಬಿ-ಎನ್‌ಎಸ್‌ಎಸ್‌ಒ ನಿರ್ದೇಶಕಿ ಡಾ. ಎಸ್. ಮನಿತ್ರ ಮೂರ್ತಿ ಅವರು ಮಾತನಾಡಿ, ರೇಷ್ಮೆ ಬಟ್ಟೆಯನ್ನು ಪ್ರದರ್ಶಿಸುವ ರಾಷ್ಟ್ರೀಯ ರೇಷ್ಮೆ ವಸ್ತುಸಂಗ್ರಹಾಲಯವನ್ನು ಮೈಸೂರಿನಲ್ಲಿ ಸ್ಥಾಪಿಸಲು ಯೋಜಿಸಲಾಗಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರವು ಮೀಸಲಾದ ರೇಷ್ಮೆ ಸರಪಳಿ ಕಾರಿಡಾರ್ ಅನ್ನು ಸಹ ಯೋಜಿಸಿದೆ. ರಾಷ್ಟ್ರೀಯ ರೇಷ್ಮೆ ಹುಳು ಬೀಜ ಯೋಜನೆಯಡಿಯಲ್ಲಿ 10,000 ಮೆಟ್ರಿಕ್ ಟನ್‌ಗಳಷ್ಟು ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಬಿವೋಲ್ಟೈನ್ ರೇಷ್ಮೆಯ ಆಮದನ್ನು ಮಿತಿಗೊಳಿಸಲು ಸಿಎಸ್‌ಬಿ ಕೆಲಸ ಮಾಡುತ್ತಿದೆ ಎಂದು ಮಾಹಿತಿ ನೀಡಿದರು.
Advertisement