

ಬೆಂಗಳೂರು: ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ವಿಚಾರ ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದ್ದು, ಈ ನಡುವೆ ಈ ಬಗ್ಗೆ ನಾನು ಹಾಗೂ ಸಿದ್ದರಾಮಯ್ಯ ಅವರ ಹೇಳಿದರಷ್ಟೇ ಬೆಲೆ ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಶನಿವಾರ ಹೇಳಿದ್ದಾರೆ.
ಕಂಠೀರವ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ನಾನು ಹಾಗೂ ಸಿಎಂ ಹೇಳಿಕೆ ನೀಡಿದಷ್ಟೇ ಅದಕ್ಕೆ ಬೆಲೆ. ಇತರರ ಮಾತು ಮುಖ್ಯವಲ್ಲ. ಮಾಧ್ಯಮ ಹಾಗೂ ನಾಯಕರು ಸೇರಿದಂತೆ ಯಾರೂ ಇದರ ಬಗ್ಗೆ ಮಾತನಾಡಿ ಶಕ್ತಿ ಹಾಳುಮಾಡಿಕೊಳ್ಳಬಾರದು ಎಂದು ಹೇಳಿದರು.
ಸಿದ್ದರಾಮಯ್ಯ ಹಾಗೂ ನಿಮ್ಮ ನಡುವೆ ಒಮ್ಮತವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಚುನಾವಣೆಯಲ್ಲಿ ನಾವು 136 ವಿಧಾನಸಭಾ ಸ್ಥಾನಗಳನ್ನು ಗೆದ್ದಿದ್ದೇವೆ. ಒಮ್ಮತದ ಕಾರಣದಿಂದಾಗಿ ನಮ್ಮ ಬಲವನ್ನು 140 ಕ್ಕೆ ಹೆಚ್ಚಿಸಿದ್ದೇವೆಂದು ತಿಳಿಸಿದರು.
ಏತನ್ಮಧ್ಯೆ ಸರ್ಕಾರದ ಎರಡೂವರೆ ವರ್ಷಗಳ ಅವಧಿಯ ನಂತರ ಅಧಿಕಾರ ವರ್ಗಾವಣೆ ಒಪ್ಪಂದದ ಬಗ್ಗೆ ಮತ್ತು ನವೆಂಬರ್‌ನಲ್ಲಿ ಹೈಕಮಾಂಡ್ ಯಾವ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂಬುದರ ಬಗ್ಗೆ ಡಿಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರಿಗೆ ಮಾತ್ರ ತಿಳಿದಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.
ಡಿಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ಹಾಗೂ ಅವರ ಆಪ್ತ ಬಣವನ್ನು ಪರಿಣಾಮಕಾರಿಯಾಗಿ ವಿಫಲಗೊಳ್ಳುವಂತೆ ಮಾಡಿದ್ದರು. ಈ ಮೂಲಕ ಮುಖ್ಯಮಂತ್ರಿ ಹುದ್ದೆಗಾಗಿ ಎದುರಾಗುತ್ತಿರುವ ಹೋರಾಟವನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದ್ದರು.
ಇತ್ತೀಚೆಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸಿಎಂ ಸಲಹೆಯ ಮೇರೆಗೆ ಕರೆದಿದ್ದ ಎಸ್‌ಸಿ/ಎಸ್‌ಟಿ ಶಾಸಕರ ಸಭೆಗೆ ಅಡ್ಡಿಪಡಿಸಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕರ್ನಾಟಕ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲಾ ಮೂಲಕ ಸೂಚನೆ ಕೊಡಿಸಿ ಸಭೆ ನಿಲ್ಲಿಸಿದ್ದರು.
ಏತನ್ಮಧ್ಯೆ ಶನಿವಾರ ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು, ದಲಿತ ರ್ಯಾಲಿಯನ್ನು ಸೂಕ್ತ ಸಮಯದಲ್ಲಿ ನಡೆಸಲಾಗುವುದು ಎಂದು ಹೇಳಿದರು. ಇದೇ ವೇಳೆ ಹೈಕಮಾಂಡ್ ನಾಯಕರು ಸಭೆ ನಡೆಸದಂತೆ ಸೂಚನೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಸಚಿವ ಮಧು ಬಂಗಾರಪ್ಪ ಅವರು ಮಾತನಾಡಿ, ನಾಯಕತ್ವ ಬದಲಾವಣೆ ಅಥವಾ ಸಂಪುಟ ಪುನರ್ರಚನೆ ಕುರಿತು ಹೇಳಿಕೆಗಳನ್ನು ನೀಡದಂತೆ ಸೂಚನೆ ನೀಡಲಾಗಿದೆ. ಹೀಗಾಗಿ ಈ ಬಗ್ಗೆ ಯಾವುದೇ ಹೇಳಿಕೆಗಳನ್ನು ನೀಡುವುದಿಲ್ಲ ಎಂದು ಹೇಳಿದ್ದಾರೆ.
ಮೂಲಗಳ ಪ್ರಕಾರ, ಶಿವಕುಮಾರ್ ಅವರು, ಮೂಲ ಕಾಂಗ್ರೆಸ್ ನಾಯಕರು' ಸೇರಿದಂತೆ ಕೆಲವು ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದು, ಸಿಎಂ ಹುದ್ದೆ ಗಿಟ್ಟಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
Advertisement