

ಬೆಂಗಳೂರು: ತನ್ನ ಅಭಿಮಾನಿ ಚಿತ್ರದುರ್ಗದ ರೇಣುಕಸ್ವಾಮಿಯನ್ನು ಅಪಹರಿಸಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 64ನೇ ಸೆಷನ್ಸ್ ನ್ಯಾಯಾಲಯ ಸೋಮವಾರ ನಟ ದರ್ಶನ್, ಪವಿತ್ರಾ ಗೌಡ ಮತ್ತು ಇತರ 15 ಜನರ ವಿರುದ್ಧ ಹತ್ಯೆ, ಕ್ರಿಮಿನಲ್ ಪಿತೂರಿ, ಅಪಹರಣ ಮತ್ತು ಕಾನೂನುಬಾಹಿರ ಸಭೆ ಆರೋಪಗಳನ್ನು ಹೊರಿಸಿದೆ. ಆದರೆ ಎಲ್ಲಾ 17 ಆರೋಪಿಗಳು ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ. ಹೀಗಾಗಿ ಕೋರ್ಟ್ ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಎಲ್ಲಾ ಆರೋಪಿಗಳನ್ನು ಇಂದು ಕೋರ್ಟ್ ಗೆ ಹಾಜರುಪಡಿಸಲಾಯಿತು. ಕೋರ್ಟ್ ಹಾಲ್ನಲ್ಲಿ ಅನೇಕ ವಕೀಲರು ಹಾಗೂ ಜನ ಕಿಕ್ಕಿರಿದಿದ್ದರು. ಜನದಟ್ಟಣೆಯನ್ನು ನೋಡಿ ನಕ್ಕ ನ್ಯಾಯಾಧೀಶ ಐಪಿ ನಾಯಕ್ ಅವರು, ಕೇಸ್ಗೆ ಸಂಬಂಧ ಇರದ ಎಲ್ಲರೂ ಹೊರಗೆ ಹೋಗುವಂತೆ ಸೂಚಿಸಿದರು.
"ಇಲ್ಲಿ ಇಷ್ಟೊಂದು ಜನರ ನಡುವೆ ಆರೋಪಗಳನ್ನು ಹೊರಿಸಲು ಹೇಗೆ ಸಾಧ್ಯ?" ಪ್ರಕರಣಕ್ಕೆ ಸಂಬಂಧಿಸದ ವಕೀಲರು ಹೊರಗೆ ಹೋಗಬೇಕು ಸೂಚಿಸಿದರು. ಇಲ್ಲದಿದ್ದರೆ ವಿಚಾರಣೆಯನ್ನು ಮುಂದೂಡಲಾಗುವುದು ಎಂದು ಎಚ್ಚರಿಸಿದರು. ಆದರೂ ಕೂಡ ಗದ್ದಲ ನಿಲ್ಲಲಿಲ್ಲ. ಬಳಿಕ ಮುಚ್ಚಿದ ಕೊಠಡಿಯಲ್ಲಿ ವಿಚಾರಣೆ ನಡೆಸಲಾಯಿತು.
ಪ್ರಮುಖ ಆರೋಪಿ ಪವಿತ್ರಾ ಗೌಡಗೆ ನ್ಯಾಯಾಧೀಶರು ಒಂದಷ್ಟು ಪ್ರಶ್ನೆಗಳನ್ನು ಕೇಳಿದರು. ಕೊಲೆ, ಅಪಹರಣ, ಸಾಕ್ಷಿನಾಶ, ಅಕ್ರಮ ಕೂಟ, ಕ್ರಿಮಿನಲ್ ಒಳಸಂಚು ಸೇರಿದಂತೆ ಹಲವು ಆರೋಪಗಳನ್ನು ದರ್ಶನ್ ಮೇಲೆ ಹೊರಿಸಲಾಗಿದೆ. ನ್ಯಾಯಾಧೀಶರು ಎಲ್ಲ ಆರೋಪಿಗಳ ಎದುರು ದೋಷಾರೋಪಗಳನ್ನು ಓದಿ ಹೇಳಿದರು.
ಆರೋಪಿಗಳು ತಮ್ಮ ವಿರುದ್ಧದ ಆರೋಪಗಳನ್ನು ಒಪ್ಪಿಕೊಳ್ಳದ ಕಾರಣ ಸಾಕ್ಷ್ಯಗಳ ವಿಚಾರಣೆಗೆ ಕೋರ್ಟ್ ದಿನಾಂಕ ನಿಗದಿ ಮಾಡಿದೆ.
ನ್ಯಾಯಾಧೀಶರು ಮೊದಲ ಆರೋಪಿ ಪವಿತ್ರಾ ಗೌಡ ವಿರುದ್ಧದ ಆರೋಪಗಳನ್ನು ಓದಲು ಪ್ರಾರಂಭಿಸಿದರು. ರೇಣುಕಸ್ವಾಮಿ, ಆರೋಪಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾರೆಂದು ಹೇಳಲಾಗಿದ್ದು, ನಂತರ ಅವರನ್ನು ಅಪಹರಿಸಿ, ಬೆಂಗಳೂರಿನ ಶೆಡ್‌ಗೆ ಕರೆದೊಯ್ದು ಹಲ್ಲೆ ಮಾಡಲಾಗಿದೆ ಎಂದು ಹೇಳಿದರು.
"ಆರೋಪಿ ಚಪ್ಪಲಿ ಮತ್ತು ಮರದ ಹಲಗೆಯಿಂದ ಹೊಡೆದು ಮಾರಣಾಂತಿಕ ಗಾಯಗಳನ್ನು ಮಾಡಿದರು" ಎಂದು ನ್ಯಾಯಾಧೀಶರು ಗಟ್ಟಿಯಾಗಿ ಓದಿದರು.
"ದೋಷಾರೋಪಗಳ ಪ್ರಕಾರ, ಪವಿತ್ರ ರೇಣುಕಸ್ವಾಮಿಗೆ ಚಪ್ಪಲಿಯಿಂದ ಹೊಡೆದರೆ, ದರ್ಶನ್, ರೇಣುಕಾಸ್ವಾಮಿಯ ಪ್ಯಾಂಟ್ ತೆಗೆದು ಖಾಸಗಿ ಭಾಗಕ್ಕೆ ಒದ್ದರು. ಗಂಭೀರ ಹಲ್ಲೆಯಿಂದ ರೇಣುಕಾಸ್ವಾಮಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ.
ಎಲ್ಲಾ 17 ಆರೋಪಿಗಳು ತಪ್ಪೊಪ್ಪಿಕೊಳ್ಳಲು ನಿರಾಕರಿಸಿದರು. ಹೀಗಾಗಿ ನ್ಯಾಯಾಲಯವು ನವೆಂಬರ್ 10 ರಂದು ಆರೋಪಗಳನ್ನು ದೃಢೀಕರಿಸುವ ಪ್ರಕ್ರಿಯೆ ಆರಂಭಿಸುವುದಾಗಿ ಹೇಳಿದೆ. ಇದರ ನಂತರ, ದರ್ಶನ್, ಪವಿತ್ರಾ ಮತ್ತು ಇತರ ಏಳು ಜನರನ್ನು ಮತ್ತೆ ಜೈಲಿಗೆ ಸ್ಥಳಾಂತರಿಸಲಾಯಿತು.
Advertisement