

ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿರುವ ಖಾಸಗಿ ವಾಕ್ ಮತ್ತು ಶ್ರವಣ ಶಾಲೆಯೊಂದರಲ್ಲಿ ವಿಶೇಷ ಚೇತನ ಮಕ್ಕಳ ಮೇಲೆ ಶಿಕ್ಷಕರೊಬ್ಬರು ಕಳೆದ 13 ವರ್ಷಗಳಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದ ಆಘಾತಕಾರಿ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ,
ಮಕ್ಕಳಿಗೆ ಮಾತನಾಡಲು ಸಾಧ್ಯವಾಗದ ಕಾರಣ, ಆರೋಪಿ ಅವರ ಸ್ಥಿತಿಯನ್ನೇ ಲಾಭವಾಗಿ ಬಳಸಿಕೊಂಡಿದ್ದು, ಕಳೆದ 13 ವರ್ಷಗಳಿಂಗ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.
ಈ ವಿಚಾರವನ್ನು ಶಿಕ್ಷಣ ಸಂಸ್ಥೆಗೆ ಸೇರಿದ ವ್ಯಕ್ತಿಯೊಬ್ಬರು ರತ್ನ ಕುಮಾರ್ ಸತ್ಯವಾಸಿ ಎಂಬುವವರೊಂದಿಗೆ ಹಂಚಿಕೊಂಡಿದ್ದಾರೆ. ಬಳಿಕ ರತ್ನಕುಮಾರ್ ಅವರು ಚಾಮರಾಜನಗರ ಎಸ್ಪಿ ಡಾ. ಬಿ.ಟಿ. ಕವಿತಾ ಅವರಿಗೆ ದೂರು ನೀಡಿ, ಲೈಂಗಿಕ ದೌರ್ಜನ್ಯಕ್ಕೊಳಗಾದ ವಿದ್ಯಾರ್ಥಿಗಳ ವಿಡಿಯೋ ಹೇಳಿಕೆಗಳನ್ನು ಸಂಕೇತ ಭಾಷೆಯಲ್ಲಿ ಸಲ್ಲಿಸಿದ್ದಾರೆ.
ದೂರಿನ ಆಧಾರದ ಮೇಲೆ ಪೊಲೀಸರು ಶಾಲೆಗೆ ಭೇಟಿ ನೀಡಿ, ತನಿಖೆ ಆರಂಭಿಸಿದ್ದಾರೆ. ವಿದ್ಯಾರ್ಥಿಗಳನ್ನೂ ಪ್ರಶ್ನಿಸಿದ್ದಾರೆಂದು ಕವಿತಾ ಅವರು ಹೇಳಿದ್ದಾರೆ.
ಈ ನಡುವೆ ತನಿಖೆಯ ಆರಂಭದಲ್ಲಿ ಅಧಿಕಾರಿಗಳಿಗೆ ಯಾವುದೇ ಸಾಕ್ಷಿಗಳು ಸಿಕ್ಕಿಲ್ಲ. ಆದರೆ. ಸಂಸ್ಥೆ ನಡೆಸಿದ ಆಂತರಿಕ ವಿಚಾರಣೆಯಲ್ಲಿ ಶಾಲೆಯಲ್ಲಿ ಈ ಹಿಂದೆ ಓದುತ್ತಿದ್ದ ಅಪ್ರಾಪ್ತ ವಯಸ್ಸನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ತಿಳಿದುಬಂದಿದೆ. ಆಕೆಯ ಹೇಳಿಕೆಯ ಆಧಾರದ ಮೇಲೆ, ಅಕ್ಟೋಬರ್ 30 ರಂದು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಲಾಗಿಲ್ಲ, ತನಿಖೆ ಪ್ರಗತಿಯಲ್ಲಿದೆ ಎಂದು ಎಸ್ಪಿ ತಿಳಿಸಿದ್ದಾರೆ.
29 ವರ್ಷದ ಸಂತ್ರಸ್ತೆ 16 ವರ್ಷದವಳಿದ್ದಾಗ ಶಿಕ್ಷಕನಿಂದ ಲೈಂಗಿಕ ಕಿರುಕುಳ ಎದುರಿಸಿದ್ದಾಳೆ. ನಂತರ ಶಿಕ್ಷಕನನ್ನು ವಿವಾಹವಾಗಿದ್ದಾಳೆ. ಇದೀಗ ಇತರ ಮಕ್ಕಳ ಮೇಲೆ ನಡೆದಿರುವ ದೌರ್ಜನ್ಯ ಕುರಿತು ಪರಿಶೀಲಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿರುವ ಕುರಿತು ಈ ಹಿಂದೆಯೇ ಸಂಸ್ಥೆಗೆ ದೂರು ನೀಡಲಾಗಿತ್ತು. 12 ವರ್ಷಗಳಿಗೂ ಹೆಚ್ಚು ಕಾಲದಿಂದ ಶಾಲೆಯಲ್ಲಿ ಅನೇಕ ಬಾಲಕರು ಹಾಗೂ ಬಾಲಕಿಯರ ಮೇಲೆ ಲೈಂಗಿಕ ದೌಜನ್ಯ ನಡೆದಿದೆ. ಇನ್ನೂ ನಡೆಯುತ್ತಿದೆ. ಮಕ್ಕಳು ಭಯಭೀತರಾಗಿದ್ದಾರೆ, ಕೇವಲ ಶಿಕ್ಷಕನಷ್ಟೇ ಅಲ್ಲ, ಸಂಸ್ಥೆಯ ಕೆಲವು ಸಿಬ್ಬಂದಿಗಳೂ ಕೂಡ ಇದರಲ್ಲಿ ಭಾಗಿಯಾಗಿದ್ದಾರೆಂದು ರತ್ನಕುಮಾರ್ ಅವರು ಆರೋಪಿಸಿದ್ದಾರೆ.
Advertisement