

ರಾಮನಗರ: ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಬೊಂಬೆನಗರಿ ಚನ್ನಪಟ್ಟಣ ಸಾಕ್ಷಿಯಾಗಿದೆ. ಇಲ್ಲಿನ ಮಂಗಳವಾರಪೇಟೆಯಲ್ಲಿರುವ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಬಸವೇಶ್ವರ ದೇವಾಲಯವನ್ನು ಮುಸ್ಲಿಂ ಉದ್ಯಮಿಯೊಬ್ಬರು ಕೋಟ್ಯಂತರ ರೂ. ವೆಚ್ಚ ಮಾಡಿ ಕಟ್ಟಿಸಿಕೊಟ್ಟಿದ್ದಾರೆ.
ಶಿಥಿಲಗೊಂಡಿದ್ದ ದೇವಾಲಯ ಪುನರ್ ನಿರ್ಮಾಣಕ್ಕೆ ರೂ. 3 ಕೋಟಿ ಹಣವನ್ನ ದೇಣಿಗೆ ನೀಡಿರುವ ಎಸ್. ಕೆ. ಬೀಡಿ ಮಾಲೀಕ ಸೈಯದ್ ಸದಾತ್ ವುಲ್ಲಾ ಸಖಾಫ್ , ನೂತನ ದೇಗುಲದ ಉದ್ಘಾಟನೆ ಹಿನ್ನಲೆ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿಯೂ ಭಾಗಿಯಾಗುವ ಮೂಲಕ ಮಾದರಿಯಾಗಿದ್ದಾರೆ.
ಸೈಯದ್ ಸದಾತ್ ವುಲ್ಲಾ ಸಖಾಫ್ ಅವರನ್ನು ಹಿಂದೂ ಮುಖಂಡರು ಸನ್ಮಾನಿಸಿದ್ದು, ಬೆಳ್ಳಿ ಕಿರೀಟ ತೊಡಿಸಿ, ಹೂವಿನ ಮಳೆ ಸುರಿಸಿ ಜೈಕಾರ ಹಾಕಲಾಗಿದೆ.
ದೇವಾಲಯ ನಿರ್ಮಾಣಕ್ಕೆ ಇದೇ ಗ್ರಾಮದ ಕೆಂಪಮ್ಮ ಹಾಗೂ ಮೋಟೇಗೌಡರು ತಮ್ಮ ಸ್ವಂತ ಜಾಗ ಬಿಟ್ಟುಕೊಟ್ಟಿದ್ದು, ನಂತರ ಸೈಯದ್ ಉಲ್ಲಾ ಸಖಾಫ್ ಅವರು ಸುಮಾರು 3 ಕೋಟಿಗೂ ಅಧಿಕ ವೆಚ್ಚದಲ್ಲಿ ಕಲ್ಲಿನ ದೇವಸ್ಥಾನ ಕಟ್ಟಿಸಿಕೊಡುವ ಮೂಲಕ ಮಾದರಿಯಾಗಿದ್ದಾರೆ.
ಲೋಕಾರ್ಪಣೆಗೊಂಡ ದೇವಸ್ಥಾನ ರಾಷ್ಟ್ರವಾಸಿಗಳಿಗೆ ಶಾಂತಿ, ಸೌಹಾರ್ದತೆ ಹಾಗೂ ಭಾವೈಕ್ಯತೆಯ ಸಹಬಾಳ್ವೆ ಸಂದೇಶವನ್ನು ಸಾರುತ್ತಿದೆ. ಅದರಲ್ಲೂ ಹಿಂದೂ-ಮುಸ್ಲಿಂ ಒಗ್ಗಟ್ಟಾಗಿರಬೇಕೆಂಬ ಸಂದೇಶ ನೀಡುತ್ತಿರುವುದು ವಿಶೇಷ.
ಈ ಹಿಂದೆಯೂ ಸಂತೇ ಮೊಗೇನಹಳ್ಳಿಯಲ್ಲಿ ಸ್ವಂತ ಹಣದಲ್ಲಿ ವೀರಭದ್ರೇಶ್ವರ ದೇಗುಲವನ್ನು ನಿರ್ಮಾಣ ಮಾಡುವ ಮೂಲಕ ಸೈಯದ್ ಉಲ್ಲಾ ಭಾವೈಕ್ಯತೆ ಮರೆದಿದ್ದರು. ಹಿಂದೂ ದೇವಾಲಯ ಹಾಗೂ ಮುಸ್ಲಿಂ ಗೋರಿಯನ್ನು ಒಂದೇ ಕಾಂಪೌಂಡಿನೊಳಗೆ ನಿರ್ಮಾಣ ಮಾಡುವ ಮೂಲಕ ಮಾದರಿಯಾಗಿದ್ದು, ಇದೀಗ ಮತ್ತೊಂದು ದೇವಸ್ಥಾನ ಕಟ್ಟಿಸಿ ಸೈಯದ್ ಉಲ್ಲಾ ಸಖಾಫ್ ತಮ್ಮ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.
Advertisement