
ಪ್ರತಿ ಟನ್ ಕಬ್ಬಿಗೆ 3,500 ರೂಪಾಯಿ ಕನಿಷ್ಠ ಬೆಂಬಲ ಬೆಲೆಗೆ ಆಗ್ರಹಿಸಿ ಬೆಳಗಾವಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಹಸಿರು ಸೇನೆ ರೈತ ಸಂಘದ ಅಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಪ್ರತಿ ಟನ್‌ಗೆ 3,200 ರೂ ನೀಡುವ ಸಕ್ಕರೆ ಕಾರ್ಖಾನೆಗಳ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದಾರೆ. ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ಕಳೆದ 5 ದಿನಗಳಿಂದ ರೈತರು ಬಿರುಸಿನ ಗಾಳಿಯಲ್ಲೂ, ಚಳಿಯಲ್ಲೂ ಅಹೋರಾತ್ರಿ ಕುಳಿತು ಹೋರಾಟ ನಡೆಸುತ್ತಿದ್ದಾರೆ. ಕೆಲವರು ಸ್ಥಳದಲ್ಲೇ ಅಡುಗೆ, ಊಟ, ನಿದ್ದೆ ಮಾಡುತ್ತಾ ಧರಣಿ ನಡೆಸುತ್ತಿರುವ ಕಬ್ಬು ಬೆಳೆಗಾರರು, ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಕಿಡಿಕಾರಿದ್ದಾರೆ. ನೆರೆಯ ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳು ಟನ್‌ಗೆ 3,600 ರೂ. ಪಾವತಿಸುತ್ತಿದ್ದರೂ, ಕರ್ನಾಟಕ ಸರ್ಕಾರ ಮಾತ್ರ ನ್ಯಾಯಯುತ ಬೆಲೆ ನಿಗದಿಪಡಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ. ಇಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿವೈ ವಿಜಯೇಂದ್ರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ರೈತರಿಗೆ ತಮ್ಮ ಪಕ್ಷದ ಬೆಂಬಲವನ್ನು ನೀಡಿದರು.
ಮಾಜಿ ಸಚಿವ, ಬಾಗಲಕೋಟೆ ಕ್ಷೇತ್ರದ ಹಾಲಿ ಶಾಸಕ ಹೆಚ್.ವೈ ಮೇಟಿ ಇಂದು ನಿಧನರಾಗಿದ್ದಾರೆ. ಹುಲ್ಲಪ್ಪ ಯಮನಪ್ಪ ಮೇಟಿ ಅವರಿಗೆ 79 ವರ್ಷ ವಯಸ್ಸಾಗಿತ್ತು. ತೀವ್ರ ಅನಾರೋಗ್ಯದ ಕಾರಣ ಕೆಲ ದಿನಗಳಿಂದ ಬೆಂಗಳೂರಿನ ಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. 1989ರಲ್ಲಿ ಗುಳೇದಗುಡ್ಡ ಕ್ಷೇತ್ರದಿಂದ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 2023ರ ವಿಧಾನಸಭೆ ಚುನಾವಣೆಯಲ್ಲಿ ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ವೀರಣ್ಣ ಚರಂತಿಮಠರನ್ನು ಸೋಲಿಸಿ ಮತ್ತೆ ವಿಧಾನಸಭೆಗೆ ಆಯ್ಕೆಯಾಗಿದ್ದರು. 2013 ರಿಂದ 2016ರವರೆಗಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಹೆಚ್.ವೈ ಮೇಟಿ ಅಬಕಾರಿ ಖಾತೆ ಸಚಿವರಾಗಿದ್ದರು. ಅಂದು ಲೈಂಗಿಕ ಹಗರಣದಲ್ಲಿ ಸಿಲುಕಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಾಗಲಕೋಟೆಯ ತಿಮ್ಮಾಪುರದಲ್ಲಿ ನಾಳೆ ಸಕಲ ಸರ್ಕಾರಿ ಗೌರವದೊಂದಿಗೆ ಮೇಟಿ ಅವರ ಅಂತ್ಯಕ್ರಿಯೆ ನಡೆಯಲಿದ್ದು ಸಿಎಂ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ಪಕ್ಷದ ಪ್ರಮುಖರು ಭಾಗಿಯಾಗಲಿದ್ದಾರೆ.
ನವೆಂಬರ್ 6 ಮತ್ತು 11ರಂದು ಬಿಹಾರ ವಿಧಾನಸಭಾ ಚುನಾವಣೆ ನಡೆಯಲಿದ್ದು, ಬಿಹಾರದ ಕಾರ್ಮಿಕರು ತಮ್ಮ ಊರಿಗೆ ಪ್ರಯಾಣಿಸಲು ಮತ್ತು ಮತ ಚಲಾಯಿಸಲು ಸಾಧ್ಯವಾಗುವಂತೆ ರಾಜ್ಯದಲ್ಲಿರುವ ಎಲ್ಲ ಕಂಪನಿಗಳು ಮತ್ತು ವ್ಯಾಪಾರ ಸಂಸ್ಥೆಗಳು ವೇತನ ಸಹಿತ ರಜೆ ನೀಡಬೇಕೆಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಒತ್ತಾಯಿಸಿದ್ದಾರೆ. ಬಿಹಾರದ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರು ಮತ್ತು ಕರ್ನಾಟಕದ ವಿವಿಧ ಭಾಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ, ಎಲ್ಲ ಕಂಪನಿಗಳು, ವಾಣಿಜ್ಯ ಉದ್ಯಮಿಗಳು, ಹೋಟೆಲ್‌ಗಳು, ಗುತ್ತಿಗೆದಾರರು, ಬಿಲ್ಡರ್‌ಗಳು ಬಿಹಾರಿಗರು ಮತ ಚಲಾಯಿಸಲು ಸಾಧ್ಯವಾಗುವಂತೆ ಕನಿಷ್ಠ ಮೂರು ದಿನಗಳ 'ವೇತನ ಸಹಿತ ರಜೆ' ನೀಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಜೆಡಿಎಸ್, ಕಾಂಗ್ರೆಸ್ ಹೈಕಮಾಂಡ್ ಆಜ್ಞೆ ಮೇರೆಗೆ ಕಾಂಗ್ರೆಸ್ ಪರವಾಗಿ ಮತಚಲಾಯಿಸಲು ಕರ್ನಾಟಕದಲ್ಲಿರುವ ಬಿಹಾರಿಗಳಿಗೆ ವೇತನ ಸಹಿತ 3 ದಿನಗಳ ರಜೆ ಕೊಡಿಸುತ್ತಿದ್ದಾರೆ ಎಂದು ಆರೋಪಿಸಿದೆ.
ಹೆದ್ದಾರಿ ಪಕ್ಕ ಕೆಟ್ಟು ನಿಂತಿದ್ದ ಕಾರಿಗೆ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಡ್ಯಾನ್ಸರ್ ಸುಧೀಂದ್ರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನೆಲಮಂಗಲದ ಪೆಮ್ಮನಹಳ್ಳಿ ಬಳಿ ನಡೆದಿದೆ. ಸೋಮವಾರವಷ್ಟೇ ಹೊಸ ಮಾರುತಿ ಸುಜುಕಿ ಇಕೋ ಕಾರು ಡೆಲಿವರಿ ಪಡೆದಿದ್ದರು. ರಸ್ತೆ ಮಧ್ಯೆ ಕಾರು ಕೆಟ್ಟು ನಿಂತಿದ್ದರಿಂದ ಪರೀಕ್ಷಿಸಲು ಸುಧೀಂದ್ರ ಕಾರಿನಿಂದ ಕೆಳಗಿಳಿದ ವೇಳೆ ಕ್ಯಾಂಟರ್ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಸ್ಥಳದಲ್ಲೇ ಸುಧೀಂದ್ರ ಮೃತಪಟ್ಟಿದ್ದಾರೆ. ಡ್ಯಾನ್ಸರ್ ಸುದೀಂಧ್ರ ವಿವಿಧ ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿದ್ದರು. ಡಾಬಸ್ ಪೇಟೆಯಲ್ಲಿ ಡ್ಯಾನ್ಸ್ ಕ್ಲಾಸ್ ನಡೆಸಿ ಯುವಕ, ಯುವತಿಯರಿಗೆ ಮಕ್ಕಳಿಗೆ ಟ್ರೈನಿಂಗ್ ನೀಡುತ್ತಿದ್ದರು.
ಸರ್ಕಾರಿ ಸ್ವಾಮ್ಯದ ಸ್ಥಳಗಳಲ್ಲಿ ಯಾವುದೇ ಚಟುವಟಿಕೆಗಳನ್ನು ನಡೆಸುವ ಮೊದಲು ಖಾಸಗಿ ಸಂಸ್ಥೆಗಳು ಪೂರ್ವಾನುಮತಿ ಪಡೆಯುವುದನ್ನು ಕಡ್ಡಾಯಗೊಳಿಸುವ ಸರ್ಕಾರಿ ಆದೇಶಕ್ಕೆ ತಡೆ ನೀಡಿದ ಏಕಸದಸ್ಯ ನ್ಯಾಯಾಧೀಶರ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ತೀರ್ಪನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ಕಾಯ್ದಿರಿಸಿದೆ. ಅಕ್ಟೋಬರ್ 28 ರಂದು ಹೊರಡಿಸಲಾದ ಮಧ್ಯಂತರ ಆದೇಶದಲ್ಲಿ, ಸರ್ಕಾರಿ ಆದೇಶ ಪ್ರಾಥಮಿಕವಾಗಿ ನಾಗರಿಕರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಏಕಸದಸ್ಯ ನ್ಯಾಯಾಧೀಶರು ಗಮನಿಸಿದ್ದರು. ಸರ್ಕಾರಿ ಆದೇಶದ ಪ್ರಕಾರ, ಸರ್ಕಾರಿ ಆದೇಶವನ್ನು ಉಲ್ಲಂಘಿಸಿ ನಡೆಯುವ ಯಾವುದೇ ಕಾರ್ಯಕ್ರಮ ಅಥವಾ ಮೆರವಣಿಗೆಯನ್ನು ಭಾರತೀಯ ನ್ಯಾಯ ಸಂಹಿತಾ ನಿಬಂಧನೆಗಳ ಅಡಿಯಲ್ಲಿ "ಕಾನೂನುಬಾಹಿರ ಸಭೆ" ಎಂದು ಪರಿಗಣಿಸಲಾಗುತ್ತದೆ. ಸರ್ಕಾರಿ ಆದೇಶವು ನಿರ್ದಿಷ್ಟವಾಗಿ RSS ಅನ್ನು ಹೆಸರಿಸದಿದ್ದರೂ, ಆದೇಶದ ನಿಬಂಧನೆಗಳು ಹಿಂದೂ ಬಲಪಂಥೀಯ ಸಂಘಟನೆಯ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವ ಗುರಿಯನ್ನು ಹೊಂದಿವೆ ಎಂದು ಹೇಳಲಾಗುತ್ತದೆ, ಅದರಲ್ಲಿ ಅದರ ರೂಟ್ ಮಾರ್ಚ್‌ಗಳು ಸೇರಿವೆ.
Advertisement