
ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರಗೊಂಡಿದ್ದು ಪ್ರತಿ ಟನ್ ಕಬ್ಬಿಗೆ 3,500 ರೂ. ಕನಿಷ್ಠ ಬೆಂಬಲ ದರ ನೀಡಬೇಕೆಂದು ರೈತರು ಆಗ್ರಹಿಸಿ, ಬೆಳಗಾವಿ ಜಿಲ್ಲೆಯಾದ್ಯಂತ ಮತ್ತು ಹಲವಾರು ಪಟ್ಟಣಗಳನ್ನು ಸಂಪೂರ್ಣ ಬಂದ್ ಮಾಡಿ ಅಹೋರಾತ್ರಿ ಧರಣಿ ನಡೆಸಲಾಗಿದೆ. ಕನ್ನಡ ಸಂಘಟನೆಗಳ ಬೆಂಬಲದೊಂದಿಗೆ ರೈತರು ಅಥಣಿಯಲ್ಲಿ ಬಂದ್‌ಗೆ ಕರೆ ನೀಡಿದ್ದರು. ಪ್ರತಿಭಟನೆಯ ಕಿಚ್ಚು ಚಿಕ್ಕೋಡಿ, ಗುರ್ಲಾಪುರ, ಜಂಬೋಟಿ ಮತ್ತು ಗೋಕಾಕ್‌ಗೆ ವ್ಯಾಪಿಸಿ, ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ. ರೈತರು ಇಂದು ಗೋಕಾಕ್-ಅಥಣಿ ರಸ್ತೆ ಮತ್ತು ದರೂರ್-ಹಲ್ಯಾಲ್ ಸೇತುವೆ ಸೇರಿದಂತೆ ಪ್ರಮುಖ ಹೆದ್ದಾರಿಗಳನ್ನು ತಡೆದಿದ್ದರು. ಹುಕ್ಕೇರಿಯಲ್ಲಿ, ಕಬ್ಬಿಗೆ ಪರಿಷ್ಕೃತ ಕನಿಷ್ಠ ಬೆಲೆ ನೀಡುವಂತೆ ಒತ್ತಾಯಿಸಿ ರೈತ ಸಂಘಗಳು ಸಂಪೂರ್ಣ ಬಂದ್ ನಡೆಸಿವೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, ಗುರ್ಲಾಪುರ ಕ್ರಾಸ್‌ನಲ್ಲಿನ ನಡೆಯುತ್ತಿರುವ ಅಹೋರಾತ್ರಿ ಧರಣಿಯಲ್ಲಿ ಭಾಗವಹಿಸುವ ಮೂಲಕ ಹೋರಾಟಕ್ಕೆ ರಾಜಕೀಯ ಬಲ ನೀಡಿದ್ದಾರೆ. 'ಇದು ಕಬ್ಬಿನ ಬೆಲೆಯ ಪ್ರಶ್ನೆ ಮಾತ್ರವಲ್ಲ, ರೈತರ ಬದುಕಿನ ಹಕ್ಕಿನ ಪ್ರಶ್ನೆ,'ರೈತರ ಸಂಕಷ್ಟವನ್ನು ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಆರೋಪಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣ ಮಧ್ಯಪ್ರವೇಶಿಸಿ ಕಬ್ಬು ಬೆಳೆಗಾರರು ಬೇಡಿಕೆ ಇಟ್ಟಿರುವಂತೆ ಪ್ರತಿ ಟನ್ ಕಬ್ಬಿಗೆ 3,500 ರೂ. ದರ ನಿಗದಿಯಾಗುವಂತೆ ನೋಡಿಕೊಳ್ಳಬೇಕೆಂದು ಸಂಸದ ಬಸವರಾಜ್ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಬೆಂಕಿ ಹಚ್ಚಿಕೊಂಡಿದ್ದ 55 ವರ್ಷದ ರೈತ ಬುಧವಾರ ಬೆಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಆರ್ ಪೇಟೆ ತಾಲ್ಲೂಕಿನ ಮೂಡನಹಳ್ಳಿಯ ರೈತ ಎಂಡಿ ಮಂಜೇಗೌಡ ಅವರು ಹಲವಾರು ವರ್ಷಗಳಿಂದ ಭೂಸ್ವಾಧೀನ ಪ್ರಕರಣದಲ್ಲಿ ಪರಿಹಾರವನ್ನು ಪಡೆಯದ ಕಾರಣ ನೊಂದು ಬೆಂಕಿ ಹಚ್ಚಿಕೊಂಡಿದ್ದರು. ಸ್ಥಳೀಯ ಜನರು ಆತನ ರಕ್ಷಣೆಗೆ ಧಾವಿಸಿ ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (MIMS) ಕರೆದೊಯ್ದಿದ್ದರು. ಶೇ 60ಕ್ಕೂ ಹೆಚ್ಚು ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅವರು ಬುಧವಾರ ಮೃತಪಟ್ಟಿದ್ದಾರೆ.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ನೀಲಮ್ಮನಳ್ಳಿ ತಾಂಡಾ ಬಳಿ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಕಾರು ಮತ್ತು ಕೊರಿಯರ್ ವಾಹನ ಮುಖಾಮುಖಿ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಐದು ಜನರರಿದ್ದ ಕಾರು ಹುಮ್ನಾಬಾದ್ ಮೂಲಕ ಬೀದರ್-ಕಲಬುರಗಿ ಹೆದ್ದಾರಿಯ ಕಡೆಗೆ ತಿರುವು ಪಡೆದು ಕೊರಿಯರ್ ಸೇವೆಗಾಗಿ ಕಾರ್ಯನಿರ್ವಹಿಸುತ್ತಿದ್ದ ವಾಹನಕ್ಕೆ ಮುಖಾಮುಖಿ ಡಿಕ್ಕಿ ಹೊಡೆದಾಗ ಅಪಘಾತ ಸಂಭವಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಲಬುರಗಿ ಜಿಲ್ಲೆಯ ಗಾಣಗಾಪುರ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಹಿಂತಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಜಿಎಸ್ ಟಿ ಇಳಿಕೆ ಖುಷಿಯಲ್ಲಿದ್ದ ರಾಜ್ಯದ ಗ್ರಾಹಕರಿಗೆ ಕೆಎಂಎಫ್ ಶಾಕ್ ನೀಡಿದ್ದು, ನಂದಿನಿ ತುಪ್ಪದ ದರ ಪ್ರತಿ ಲೀಟರ್ಗೆ 90 ರೂಪಾಯಿ ಏರಿಕೆ ಮಾಡಿದೆ. ಇಂದಿನಿಂದಲೇ ಪರಿಷೃತ ದರ ಜಾರಿಯಾಗಿದೆ. ಇತ್ತೀಚಿಗಷ್ಟೇ ಜಿಎಸ್ಟಿ ದರ ಇಳಿಕೆಯಾದ ನಂತರ ಕೆಎಂಎಫ್ ಹಾಲು ಉತ್ಪನ್ನಗಳ ದರ ಇಳಿಕೆ ಮಾಡಿತ್ತು. ನಂದಿನಿ ತುಪ್ಪದ ಬೆಲೆ 40 ರೂಪಾಯಿ ಇಳಿಕೆಯಾಗಿತ್ತು. ಈ ಮಧ್ಯೆ, ರಾಜ್ಯದಲ್ಲಿ ಮತ್ತೆ ನಂದಿನಿ ಹಾಲಿನ ದರ ಏರಿಕೆಯಾಗುವ ಸಾಧ್ಯತೆ ಇದ್ದು ಈ ಬಗ್ಗೆ ಸ್ವತಃ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಮಾಹಿತಿ ನೀಡಿದ್ದಾರೆ.
ಪರಿಸರ ಹಾಗೂ ಮತ್ಸ್ಯ ಸಂಕುಲದ ಮೇಲೆ ಗಂಭೀರ ಪರಿಣಾಮ ಬೀರುವಂತಹ ಹೊನ್ನಾವರ ಬಂದರು ಯೋಜನೆಯನ್ನು ರಾಜ್ಯ ಸರ್ಕಾರ ಕೈ ಬಿಡಬೇಕು. ಅಲ್ಲದೇ, ಹೋರಾಟಗಾರರ ಮೇಲಿನ ಸುಳ್ಳು ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಒತ್ತಾಯಿಸಿದ್ದಾರೆ. ಬೆಂಗಳೂರಿನ ಪ್ರೆಸ್ಕ್ಲ್ಬ್ನೆಲ್ಲಿ ಹೊನ್ನಾವರ ಬಂದರು ಯೋಜನೆ ಕುರಿತ ಸತ್ಯಶೋಧನಾ ವರದಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದ ಅವರು, ಶರಾವತಿ ನದಿಯು ಹಲವು ಕಡೆಗಳಿಂದ ಹಲವಾರು ಬೆದರಿಕೆಗಳನ್ನು ಎದುರಿಸುತ್ತಿದೆ. ಈ ಸಮಸ್ಯೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗಿದ್ದು, ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಮೇಧಾ ಪಾಟ್ಕರ್ ತಿಳಿಸಿದ್ದಾರೆ.
Advertisement