
ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಇಂದು 8ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿ ಟನ್ ಕಬ್ಬಿಗೆ 3,500 ರೂಪಾಯಿ ನಿಗದಿಮಾಡಬೇಕೆಂದು ಪಟ್ಟು ಹಿಡಿದಿರುವ ಕಬ್ಬು ಬೆಳೆಗಾರರು ಬೆಳಗಾವಿಯ ಗುರ್ಲಾಪುರದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬುಧವಾರ ರೈತರ ಜೊತೆ ಸಚಿವ ಹೆಚ್ ಕೆ ಪಾಟೀಲ್ ಸಂಧಾನ ಯತ್ನ ವಿಫಲವಾಗಿದೆ. ಹೀಗಾಗಿ ಇಂದು ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಬ್ಬು ಬೆಳೆಗಾರರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಬೆಳಗಾವಿಯಲ್ಲಿ ರೈತರ ಪ್ರತಿಭಟನೆ ಬಗ್ಗೆ ಸುದೀರ್ಘವಾಗಿ ಚರ್ಚೆ ಆಗಿದೆ. ಸಂಪುಟ ಸಭೆಗೂ ಮೊದಲು ಎಂಬಿ ಪಾಟೀಲ್ ಹಾಗೂ ಎಚ್ ಕೆ ಪಾಟೀಲ್ ರೈತರ ಜೊತೆಗೆ ಮಾತುಕತೆ ನಡೆಸಿದ್ದರು. ಕಬ್ಬಿಗೆ FRP ನಿಗದಿ ಮಾಡುವುದು ಕೇಂದ್ರ ಸರ್ಕಾರ. ಕಳೆದ ಮೇ 6ರಂದು FRP ನಿಗದಿ ಮಾಡಲಾಗಿದ್ದು 10.25 ಇಳುವರಿಗೆ ಪ್ರತಿ ಟನ್ ಗೆ 3550 ರೂ. ನಿಗದಿ ಮಾಡಲಾಗಿದೆ. ಇದರಲ್ಲಿ ಸಾರಿಗೆ, ಕಟಾವು ಒಳಗೊಂಡಿದೆ. ಇಳುವರಿ 9.5ಕ್ಕಿಂತ ಕಡಿಮೆ ಇದ್ದರೆ 3,290 ಕೊಡಬೇಕು ಎಂದಿದೆ. ಶುಕ್ರವಾರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಎಲ್ಲಾ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಬೆಂಗಳೂರಿನಲ್ಲಿ ಸಭೆ ಕರೆದಿದ್ದೇನೆ. ಅಲ್ಲಿ ರೈತರ ಆಂದೋಲನ ಮತ್ತು ಹೆಚ್ಚಿನ ಎಫ್‌ಆರ್‌ಪಿ ಬೇಡಿಕೆಯ ಕುರಿತು ಚರ್ಚಿಸುತ್ತೇನೆ. ನಂತರ ಮಧ್ಯಾಹ್ನ 1.30ಕ್ಕೆ ರೈತ ಮುಖಂಡರ ಸಭೆಯನ್ನು ಕರೆಯಲಾಗಿದೆ. ಅಲ್ಲದೆ, FRP ನಿಗದಿ ಬಗ್ಗೆ ಚರ್ಚಿಸಲು ಪ್ರಧಾನಿ ಮೋದಿಗೆ ಪತ್ರ ಬರೆದು ಭೇಟಿಗೆ ಸಮಯ ಕೇಳುತ್ತೇನೆ ಎಂದು ಸಿಎಂ ತಿಳಿಸಿದರು.
ಸಾರ್ವಜನಿಕ ಸ್ಥಳಗಳಲ್ಲಿ 10ಕ್ಕೂ ಹೆಚ್ಚು ಜನರು ಗುಂಪು ಸೇರುವುದನ್ನು ನಿರ್ಬಂಧಿಸುವ ರಾಜ್ಯ ಸರ್ಕಾರದ ಆದೇಶಕ್ಕೆ ಏಕಸದಸ್ಯ ಪೀಠ ನೀಡಿದ್ದ ತಡೆಯಾಜ್ಞೆಯನ್ನು ತೆಗೆದುಹಾಕಲು ಹೈಕೋರ್ಟ್‌ನ ವಿಭಾಗೀಯ ಪೀಠ ನಿರಾಕರಿಸಿದೆ. ನ್ಯಾಯಮೂರ್ತಿಗಳಾದ ಎಸ್‌ಜಿ ಪಂಡಿತ್ ಮತ್ತು ಗೀತಾ ಕೆಬಿ ನೇತೃತ್ವದ ವಿಭಾಗೀಯ ಪೀಠವು, ಹೈಕೋರ್ಟ್ ನ ಏಕಸದಸ್ಯ ಪೀಠ ನೀಡಿದ್ದ ತಡೆಯಾಜ್ಞೆಯಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿದ್ದು ತಡೆಯಾಜ್ಞೆಯನ್ನು ತೆಗೆದುಹಾಕಲು ಏಕಪೀಠವನ್ನು ಸಂಪರ್ಕಿಸುವಂತೆ ಸೂಚಿಸಿದೆ. ಏಕ ಸದಸ್ಯ ಪೀಠದ ಆದೇಶ ಸಂವಿಧಾನ ಹಾಗೂ ಕಾನೂನಿನ ಅಡಿಯಲ್ಲಿದೆ ಎಂದು ಹೈಕೋರ್ಟ್ ಹೇಳಿದೆ. RSS ಅನ್ನು ಗುರಿಯಾಗಿಸಿ ಅದರ ಚಟುವಟಿಕೆಗಳನ್ನು ನಿರ್ಬಂಧಿಸುವ ಸಿದ್ದರಾಮಯ್ಯ ಸರ್ಕಾರದ ಉದ್ದೇಶಕ್ಕೆ 2ನೇ ಬಾರಿ ಕಾನೂನು ಹೋರಾಟದಲ್ಲಿ ಹಿನ್ನಡೆಯಂತಾಗಿದೆ.
ನಿಷೇಧದ ನಡುವೆಯೂ ಕನ್ನಡ ರಾಜ್ಯೋತ್ಸವ ದಿನದಂದು ಬೆಳಗಾವಿಯಲ್ಲಿ ಕರಾಳ ದಿನ ಆಚರಿಸಿ ಎಂಇಎಸ್ ಮುಖಂಡರು ಪುಂಡಾಟ ನಡೆಸಿದ್ದರು. ಈ ವೇಳೆ ಮಾಳಮಾರುತಿ ಠಾಣೆ ಸಿಪಿಐ ಜೆ.ಎಂ ಕಾಲಿಮಿರ್ಚಿ, ಎಂಇಎಸ್ ಮುಖಂಡ ಶುಭಂ ಸೆಳಕೆ ಜೊತೆ ಸೆಲ್ಫಿ ಪೋಟೊ ತೆಗೆದುಕೊಂಡಿದ್ದರು. ಇದಕ್ಕೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದು ಸಿಪಿಐ ವಿರುದ್ಧ ಕಠಿಣ ಕ್ರಮ ಜರಗಿಸುವಂತೆ ಆಗ್ರಸಿದ್ದರು. ಇದೀಗ ಸಿಪಿಐ ಕಾಲಿಮಿರ್ಚಿಯನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಯಾವುದೇ ಸ್ಥಳ ನಿಯೋಜನೆ ಮಾಡದೇ ಅವರನ್ನು ಎತ್ತಂಗಡಿ ಮಾಡಲಾಗಿದ್ದು ಅವರ ಜಾಗಕ್ಕೆ ಸಿಪಿಐ ಬಿ.ಆರ್ ಗಡೇಕರ್ ಅವರನ್ನು ನೇಮಕ ಮಾಡಿದೆ.
ಕೆಜಿಎಫ್ ಖ್ಯಾತಿಯ ಹಿರಿಯ ನಟ ಹರೀಶ್ ರಾಯ್ ಥೈರಾಯ್ಡ್ ಕ್ಯಾನ್ಸರ್‌ನಿಂದಾಗಿ ನಿಧನರಾಗಿದ್ದಾರೆ. ಓಂ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಅವರು, ಕೆಜಿಎಫ್ ಸೇರಿದಂತೆ ಹಲವು ಹಿಟ್ ಚಿತ್ರಗಳಲ್ಲಿ ಖಳನಟನಾಗಿ ನಟಿಸಿದ್ದರು. 55 ವರ್ಷದ ಹರೀಶ್ ರಾಯ್ ಅವರು ಕಳೆದ ಕೆಲ ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಚಿಕಿತ್ಸೆಗೆ 70 ಲಕ್ಷ ರೂ. ಅಗತ್ಯವಿದೆ ಎಂದು ನಟ ಹೇಳಿಕೊಂಡಿದ್ದರು. ಹೀಗಾಗಿ ಚಿಕಿತ್ಸೆಗೆ ನಟ ಯಶ್ ಸೇರಿದಂತೆ ಅನೇಕರು ಆರ್ಥಿಕ ಸಹಾಯ ಮಾಡಿದ್ದರು. ನಟ ಹರೀಶ್ ರಾಯ್ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ.
ಬಾಯ್ ಫ್ರೆಂಡ್ ಪ್ರೀತಿ ನಿರಾಕರಿಸಿದ ಎಂಬ ಕಾರಣಕ್ಕೆ ಮಹಿಳಾ ಟೆಕ್ಕಿಯೊಬ್ಬರು ಬೆಂಗಳೂರು ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ ವಿಲಕ್ಷಣ ಘಟನೆ ವರದಿಯಾಗಿದೆ. ಬೆಂಗಳೂರಿನ ಹಲವು ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದ ಪ್ರಕರಣದಲ್ಲಿ ಗುಜರಾತ್ ಮೂಲದ ಟೆಕ್ಕಿ ರೆನೆ ಜೋಶಿಲ್ದಾ ಎಂಬಾಕೆಯನ್ನು ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಗೇಟ್ ಕೋಡ್ ಎಂಬ ಅಪ್ಲಿಕೇಷನ್ ಮೂಲಕ ವರ್ಚುವಲ್ ಮೊಬೈಲ್ ನಂಬರ್ ಪಡೆದು ಜೋಶಿಲ್ದಾ ಈ ಕೃತ್ಯ ಎಸಗಿರುವುದು ಪತ್ತೆಯಾಗಿದೆ.
Advertisement