

ಮೈಸೂರು: ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದ್ದ ಮೈಸೂರಿನ ಚೆಲುವಾಂಬ ಆಸ್ಪತ್ರೆ ಇದೀಗ ಅವ್ಯವಸ್ಥೆಗಳ ಆಗರವಾಗಿದೆ. ಆಸ್ಪತ್ರೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಮಕ್ಕಳ ಆರೈಕೆ ಕೇಂದ್ರ ಬಹುತೇಕ ನಿಷ್ಕ್ರಿಯಗೊಂಡಿದೆ.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (KSCPCR) ಅಧ್ಯಕ್ಷ ಶಶಿಧರ್ ಕೊಸಂಬೆ ಅವರು ಗುರುವಾರ ದಿಢೀರ್ ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ವೇಳೆ ಮಕ್ಕಳ ಆರೈಕೆ ಕೇಂದ್ರ ಒಂದು ಮಗುವೂ ದಾಖಲಾಗದ ವಿಚಾರ ತಿಳಿದು ಅಧಿಕಾರಿಗಳ ವಿರುದ್ದ ಗರಂ ಆದರು.
ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಅಡಿಯಲ್ಲಿ ಅಪೌಷ್ಟಿಕ ಮಕ್ಕಳಿಗೆ ಪೌಷ್ಟಿಕ ಆಹಾರ ಮತ್ತು ವೈದ್ಯಕೀಯ ಆರೈಕೆಯನ್ನು ಒದಗಿಸಲು ಆಸ್ಪತ್ರೆಯಲ್ಲಿ ಮಕ್ಕಳ ಆರೈಕೆ ಕೇಂದ್ರವನ್ನು ಸ್ಥಾಪಿಸಲಾಗಿತ್ತು. ಆದರೆ, ಈ ಉದ್ದೇಶ ವಿಫಲಗೊಂಡಂತಾಗಿದೆ.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ತಿಪ್ಪೇಸ್ವಾಮಿ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕುಮಾರಸ್ವಾಮಿ ಅವರನ್ನೊಳಗೊಂಡ ತಪಾಸಣಾ ತಂಡವು ಆಸ್ಪತ್ರೆಯ ಮಕ್ಕಳ ಆರೈಕೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಈ ವೇಳೆ ಆರೈಕೆ ಕೇಂದ್ರದ ಅಡುಗೆಮನೆ ಸಂಪೂರ್ಣ ಬಳಕೆಯಾಗದಿರುವುದು ಕಂಡು ಬಂದಿತು. ವಾರ್ಡ್‌ನಲ್ಲಿ ಯಾವುದೇ ಚಟುವಟಿಕೆಗಳು ಕಂಡು ಬಂದಿಲ್ಲ, OPD ಯ ಇಬ್ಬರು ರೋಗಿಗಳನ್ನು ಅಲ್ಲಿ ವಿಶ್ರಾಂತಿ ಪಡೆಯುವಂತೆ ಮಾಡಲಾಗಿರುವುದು ಕಂಡು ಬಂದಿದೆ.
ಈ ನಡುವೆ ಶಶಿಧರ್ ಕೊಸಂಬೆ ಅರೊಂದಿಗೆ ಬಂದ ಈ ವಿಭಾಗದ ಮುಖ್ಯಸ್ಥರು ಮತ್ತು ಆಸ್ಪತ್ರೆಯ ಸೂಪರಿಂಟೆಂಡೆಂಟ್ ಸೇರಿದಂತೆ ಇತರೆ ಅಧಿಕಾರಿಗಳು ಕಾರ್ಯನಿರ್ವಹಿಸದ ಸೌಲಭ್ಯದ ಬಗ್ಗೆ ಪ್ರಶ್ನಿಸಿದಾಗ ಮುಜುಗರಕ್ಕೊಳಗಾದರು.
ಏತನ್ಮಧ್ಯೆ ಇದೇ ಆಸ್ಪತ್ರೆಯಲ್ಲಿರುವ ನವಜಾತ ಶಿಶುಗಳ ತೀವ್ರ ನಿಗಾ ಘಟಕ (NICU) ಕಿಕ್ಕಿರಿದು ತುಂಬಿದ್ದು, ಬಹುತೇಕ ಎಲ್ಲಾ ವಾರ್ಮರ್‌ಗಳಲ್ಲಿ ಮಕ್ಕಳಿರುವುದು ಹಾಗೂ ಒಂದೇ ವಾರ್ಮರ್ ನಲ್ಲಿ ಎರಡು ನವಜಾತ ಶಿಶುಗಳನ್ನು ಇರಿಸಿರುವುದು ಕಂಡು ಬಂದಿತ್ತು, ಇದು ಸುರಕ್ಷತೆ ಮತ್ತು ಸೋಂಕು ನಿಯಂತ್ರಣದ ಕಳವಳಗಳನ್ನು ಹುಟ್ಟುಹಾಕಿದೆ. ಈ ಎಲ್ಲಾ ಬೆಳವಣಿಗೆಗಳನ್ನು ಕಂಡು ಆಸ್ಪತ್ರೆಯ ಅಧಿಕಾರಿಗಳ ವಿರುದ್ಧ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷರು ಗರಂ ಆದರು.
ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ಪರಿಹರಿಸಲು ಸರ್ಕಾರ ಹಲವಾರು ಯೋಜನೆಗಳನ್ನು ಪ್ರಾರಂಭಿಸಿದೆ. ಈ ಪ್ರಯೋಜನಗಳು ಅರ್ಹ ಮಕ್ಕಳಿಗೆ ತಲುಪುತ್ತವೆ ಎಂದು ಖಚಿತಪಡಿಸಿಕೊಳ್ಳುವುದು ಅಧಿಕಾರಿಗಳ ಕರ್ತವ್ಯ ದು ಕೊಸಂಬೆ ಅವರು ಹೇಳಿದರು.
ಜಿಲ್ಲೆಯಲ್ಲಿ 91 ಮಕ್ಕಳನ್ನು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆಂದು ಗುರುತಿಸಲಾಗಿದೆ, ಆದರೆ, ಆಸ್ಪತ್ರೆಯ ಭೇಟಿಯ ಸಮಯದಲ್ಲಿ ಒಂದು ಮಗುವೂ ಚಿಕಿತ್ಸೆಗೆ ದಾಖಲಾಗಿತ್ತು. ಇದು ಸರ್ಕಾರದ ಸವಲತ್ತುಗಳು ನಿಜವಾಗಿಯೂ ಅಗತ್ಯವಿರುವವರಿಗೆ ತಲುಪುತ್ತಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ತಿಳಿಸಿದರು.
Advertisement