

ಆನೇಕಲ್ : ಲಗ್ನ ಪತ್ರಿಕೆ ಕೊಡುವ ನೆಪದಲ್ಲಿ ಮನೆ ಒಳಗೆ ಬಂದ ಅಪರಿಚಿತ ಮೂವರು ದುಷ್ಕರ್ಮಿಗಳ ತಂಡವೊಂದು ಮನೆಯಲ್ಲಿದ್ದ ಒಂಟಿ ಮಹಿಳೆಯ ಕೈ-ಕಾಲುಗಳನ್ನು ಕಟ್ಟಿಹಾಕಿ ಚಿನ್ನಾಭರಣ ದರೋಡೆ ಮಾಡಿರುವ ಘಟನೆ ಅತ್ತಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯ ನೆರಳೂರಿನಲ್ಲಿ ಹಾಡಹಗಲೇ ನಡೆದಿದೆ.
ನೆರಳೂರು ನಿವಾಸಿ ರವಿಕುಮಾರ್ ಹಾಗೂ ನಾಗವೇಣಿ ದಂಪತಿ ಮನೆಗೆ ಬುಧವಾರ ಮಧ್ಯಾಹ್ನ 2.30ರ ಸುಮಾರಿಗೆ ನುಗ್ಗಿದ್ದ ಖತರ್ನಾಕ್ ಗ್ಯಾಂಗ್ 200 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದೆ. ಈ ಸಂಬಂಧ ನಾಗವೇಣಿ ಅವರು ಅತ್ತಿಬೆಲೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ರವಿಕುಮಾರ್ ಖಾಸಗಿ ಕಂಪನಿಯಲ್ಲಿನ ಉದ್ಯೋಗಿಯಾಗಿದ್ದು, ಮನೆಯಲ್ಲಿ ನಾಗವೇಣಿ ಅವರು ಒಬ್ಬರೇ ಇರುವುದನ್ನು ಗಮನಿಸಿದ ದುಷ್ಕರ್ಮಿಗಳು ದರೋಡೆಗೆ ಯೋಜನೆ ರೂಪಿಸಿದ್ದಾರೆ. ಬಂದವರು ಪರಿಚಿತರಿರಬಹುದು ಎಂದು ನಾಗವೇಣಿ ಮನೆ ಬಾಗಿಲು ತೆಗೆದಿದ್ದಾರೆ. ಈ ವೇಳೆ ಮಹಿಳೆಯೊಬ್ಬರು ಕುಡಿಯಲು ನೀರು ಕೇಳಿದ್ದಾರೆ.
ನಾಗವೇಣಿ ಅಡುಗೆ ಮನೆಗೆ ಹೋದಾಗ ಇಬ್ಬರು ಪುರುಷರಲ್ಲಿ ಒಬ್ಬ ಅಡುಗೆ ಮನೆಗೆ ಒಳಗೆ ನುಗ್ಗಿ ನಾಗವೇಣಿ ಅವರ ಕೈಕಾಲು ಕಟ್ಟಿ ಹಾಕಿದ್ದಾರೆ. ಕತ್ತಿಗೆ ಚಾಕು ಇಟ್ಟು ಹೆದರಿಸಿ, ಬೀರುವಿನ ಲಾಕರ್ ಕೀ ಪಡೆದು 200 ಗ್ರಾಂ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿದ್ದಾರೆ.
ದರೋಡೆ ಬಳಿಕ ನಾಗವೇಣಿ ಅವರನ್ನು ಕೊಠಡಿಯಲ್ಲಿ ಕೂಡಿ ಹಾಕಿ ಮನೆ ಬಾಗಿಲು ಮುಂದೆ ಮಾಡಿಕೊಂಡು ಪರಾರಿಯಾಗಿದ್ದಾರೆ. ಕೆಲ ಹೊತ್ತಿನ ನಂತರ ನಾಗವೇಣಿ ಅವರು ಕಾಲಿನಿಂದ ಸಮೀಪದಲ್ಲಿದ್ದ ಮೊಬೈಲ್ ಎಳೆದುಕೊಂಡು ನೆರೆಮನೆಯವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಆಗಮಿಸಿದ ಅಕ್ಕಪಕ್ಕದ ಮನೆಯವರು ಬಾಗಿಲು ತೆರೆದು ನಾಗವೇಣಿಯವರ ಕೈಗೆ ಕಟ್ಟಿದ್ದ ಹಗ್ಗವನ್ನು ಬಿಡಿಸಿದ್ದಾರೆ. ಆ ಬಳಿಕ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಎಎಸ್ಪಿ ವೆಂಕಟೇಶ್ ಪ್ರಸನ್ನ, ಡಿವೈಎಸ್ಪಿ ಮೋಹನ್ ಕುಮಾರ್, ಇನ್‌ಸ್ಪೆಕ್ಟರ್ ಮಂಜುನಾಥ್ ಮನೆಯಲ್ಲಿ ಪರಿಶೀಲನೆ ನಡೆಸಿದ್ದು, ಶ್ವಾನದಳ, ಬೆರಳಚ್ಚು ತಜ್ಞರು ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲದೇ ಮನೆ ಸಮೀಪದ ಶಾಲೆಯ ಬಳಿ ಇರುವ ಸಿಸಿಟಿವಿ ಕ್ಯಾಮೆರಾದಲ್ಲಿ ಮೂವರ ಚಹರೆ ಪತ್ತೆಯಾಗಿದೆ.
Advertisement