

ಬೆಂಗಳೂರು: ವೃದ್ಧೆ ಕೊಲೆ ಮಾಡಿ ಚಿನ್ನಾಭರಣ ದೋಚಿದ್ದ ದಂಪತಿಯನ್ನು ಬಂಧಿಸಲಾಗಿದೆ. ಬೆಂಗಳೂರಿನ ಉತ್ತರಹಳ್ಳಿಯಲ್ಲಿ ನಿನ್ನೆ ವೃದ್ಧೆ ಕೊಲೆ ಮಾಡಿದ್ದರು. ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಾಡಿಗೆದಾರ ದಂಪತಿಯನ್ನು ಬಂಧಿಸಿದ್ದಾರೆ.
ಮಹಾರಾಷ್ಟ್ರ ಮೂಲದ ಪ್ರಸಾದ್ ಶ್ರೀಶೈಲ(26), ಸಾಕ್ಷಿ(23) ಅವರನ್ನು ಬಂಧಿಸಲಾಗಿದೆ. ಹತ್ಯೆಯಾದ ಶ್ರೀಲಕ್ಷ್ಮಿ ಅವರ ಮನೆಯಲ್ಲಿ ಪ್ರಸಾದ್ ಮತ್ತು ಸಾಕ್ಷಿ ಬಾಡಿಗೆಗೆ ಇದ್ದರು. ಪ್ರಸಾದ್ ಶ್ರೀಶೈಲ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ. ಸಾಕ್ಷಿ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಕಳೆದ ಆರು ತಿಂಗಳಿನಿಂದ ಶ್ರೀಲಕ್ಷ್ಮಿ ಮನೆಯಲ್ಲಿ ದಂಪತಿ ಬಾಡಿಗೆಗೆ ಇದ್ದರು.
ಮಂಗಳವಾರ ನ್ಯೂ ಮಿಲೇನಿಯಂ ಶಾಲಾ ರಸ್ತೆಯಲ್ಲಿರುವ ಮನೆಯೊಳಗೆ ಸಂತ್ರಸ್ತೆ ಶ್ರೀಲಕ್ಷ್ಮಿ ಶವವಾಗಿ ಪತ್ತೆಯಾಗಿದ್ದಾರೆ. ಕಾಟನ್‌ಪೇಟ್‌ನಲ್ಲಿರುವ ಧೂಪದ್ರವ್ಯದ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಆಕೆಯ ಪತಿ, ಪದೇ ಪದೇ ಕರೆ ಮಾಡಿದರೂ ಉತ್ತರಿಸಿರಲಿಲ್ಲ.
ಸಂಜೆ ಮನೆಗೆ ಬಂದ ನಂತರ ಆಕೆ ಶವ ನೋಡಿದ್ದಾರೆ. ಆಕೆಯ ಕುತ್ತಿಗೆ, ತುಟಿ ಮತ್ತು ಮುಖದ ಮೇಲೆ ಗಾಯಗಳಾಗಿದ್ದು, ಹಾಲ್‌ನಲ್ಲಿ ಶವ ಬಿದ್ದಿರುವುದು ಕಂಡುಬಂದಿದ್ದು, ಆಕೆಯ ಚಿನ್ನದ ಮಂಗಳಸೂತ್ರ ಕಾಣೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಶ್ರೀಲಕ್ಷ್ಮಿ ಪತಿ ನೀಡಿದ ದೂರಿನ ಆಧಾರದ ಮೇಲೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಸುಳಿವುಗಳ ಮೇರೆಗೆ, ಸಂತ್ರಸ್ತೆ ಮನೆಯಲ್ಲಿ ಬಾಡಿಗೆ ಪಡೆದು ವಾಸಿಸುತ್ತಿದ್ದ ದಂಪತಿಗಳಾದ ಪ್ರಸಾದ್ ಶ್ರೀಶೈಲ್ ಮಕೈ ಅವರ ಪತ್ನಿ ಸಾಕ್ಷಿ ಹನುಮಂತ್ ಹೊದ್ದೂರ್ ಎಂಬುವರನ್ನು ಬಂಧಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ, ದಂಪತಿಗಳು ಶ್ರೀಲಕ್ಷ್ಮಿಯನ್ನು ಕೊಂದು ಆಭರಣಗಳೊಂದಿಗೆ ಪರಾರಿಯಾಗಿರುವುದಾಗಿ ಒಪ್ಪಿಕೊಂಡರು.
ಶ್ರೀ ಲಕ್ಷ್ಮಿ ಕೊಲೆ ನಂತರವೂ ಮನೆಯಲ್ಲಿಯೇ ಪ್ರಸಾದ್ ಮತ್ತು ಸಾಕ್ಷಿ ಇದ್ದರು. ತಮಗೇನೂ ಗೊತ್ತಿಲ್ಲದಂತೆ ನಾಟಕ ಮಾಡಿದ್ದರು. ಸ್ಥಳಕ್ಕೆ ಪೊಲೀಸರ ಭೇಟಿಯ ವೇಳೆ ತಮಗೇನೂ ಗೊತ್ತಿಲ್ಲವೆಂದು ಹೇಳಿದ್ದರು. ವಿಚಾರಣೆಯ ವೇಳೆ ಗೊಂದಲದ ಹೇಳಿಕೆ ನೀಡಿದ್ದರಿಂದ ಅವರನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರ ವಿಚಾರಣೆ ವೇಳೆ ತಾವೇ ಕೊಲೆ ಮಾಡಿ ಚಿನ್ನಾಭರಣ ದೋಚಿರುವುದಾಗಿ ದಂಪತಿ ತಪ್ಪೊಪ್ಪಿಗೆ ನೀಡಿದ್ದಾರೆ.
Advertisement