

ಬೆಂಗಳೂರು: ಜಪಾನಿನ ಕಂಪನಿಗಳು ರಾಜ್ಯದಲ್ಲಿ ತಮ್ಮ ಕಂಪನಿ ಸ್ಥಾಪಿಸಲು 300 ಎಕರೆಗಳಿಗೂ ಹೆಚ್ಚು ಭೂಮಿಯನ್ನು ಮೀಸಲಿಡಲಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ (ಕರ್ನಾಟಕ ಸರ್ಕಾರ) ಪ್ರಧಾನ ಕಾರ್ಯದರ್ಶಿ ಡಾ. ಸೆಲ್ವ ಕುಮಾರ್ ಘೋಷಿಸಿದರು.
ತುಮಕೂರಿನಲ್ಲಿರುವ ಜಪಾನೀಸ್ ಕೈಗಾರಿಕಾ ಪಟ್ಟಣದಂತಹ ಯೋಜನೆಗಳು ಭವಿಷ್ಯದ ಬೆಳವಣಿಗೆಗೆ ಬೆಂಬಲ ನೀಡಲು ನಮ್ಮನ್ನು ಪ್ರೇರೇಪಿಸುತ್ತವೆ ಎಂದು ಅವರು ಹೇಳಿದರು. ಜಪಾನಿನ ಕಂಪನಿಗಳಿಗೆ ಕರ್ನಾಟಕ ಸಂಪೂರ್ಣ ಬೆಂಬಲ ಕೊಡುವುದಾಗಿ ಭರವಸೆ ನೀಡಿದರು. ಜಪಾನ್ ನ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೂ ಈ ಭರವಸೆಯನ್ನು ವಿಸ್ತರಿಸಲಾಯಿತು.
ಬೆಂಗಳೂರಿನ ಬಲವಾದ ಮಾಹಿತಿ ತಂತ್ರಜ್ಞಾನ (IT) ಪರಿಸರ ವ್ಯವಸ್ಥೆಯು ನಗರದಲ್ಲಿ (ಮತ್ತು ರಾಜ್ಯದಲ್ಲಿ) ಜಪಾನಿನ ಕಂಪನಿಗಳ ಹೂಡಿಕೆಗೆ ಸೂಕ್ತಸ್ಥಳವಾಗಿದೆ. ಜಪಾನಿನ ಸರ್ಕಾರವು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು (MSME) ಭಾರತೀಯ ಮಾರುಕಟ್ಟೆಗೆ ತರಲು ಉದ್ದೇಶಿಸಿದೆ ಎಂದು ಬೆಂಗಳೂರಿನಲ್ಲಿರುವ ಜಪಾನ್‌ನ ಕಾನ್ಸುಲ್ ಜನರಲ್ ನಕಾನೆ ಟ್ಸುಟೊಮು ಹೇಳಿದರು.
ಬೆಂಗಳೂರು ಕೈಗಾರಿಕಾ ಮತ್ತು ವಾಣಿಜ್ಯ ಮಂಡಳಿ (BCIC) ಆಯೋಜಿಸಿದ್ದ 3ನೇ ಭಾರತ-ಜಪಾನ್ ವ್ಯವಹಾರ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಕೇವಲ ತಿಳುವಳಿಕೆ ಪತ್ರಗಳಿಗೆ ಸಹಿ ಹಾಕುವುದನ್ನು ಮೀರಿ ಭಾರತ ಮತ್ತು ಜಪಾನ್ ನಡುವಿನ ಪಾಲುದಾರಿಕೆಯನ್ನು ಪ್ರದರ್ಶಿಸಲು ಸ್ಪಷ್ಟವಾದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ವರ್ಷದ ಆರಂಭದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಜಪಾನಿನ ಕಂಪನಿಗಳ ವಿಸ್ತರಣೆಗೆ ಬೆಂಗಳೂರು ಪ್ರಮುಖ ಸ್ಥಳವಾಗಿ ಹೊರಹೊಮ್ಮಿದೆ ಎಂದು SMRJ ಕಾರ್ಯನಿರ್ವಾಹಕ ಉಪಾಧ್ಯಕ್ಷ ಟೊಮೊಹಿರೊ ಕನೆಕೊ ಹೇಳಿದರು.
Advertisement