

ಬೆಂಗಳೂರು: ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಹೈಕೋರ್ಟ್ ಕೊನೆಗೂ ಗುರುವಾರ ಅನುಮತಿ ನೀಡಿದೆ. ಆದರೆ ಕೆಲವು ಷರತ್ತುಗಳನ್ನು ವಿಧಿಸಿದೆ.
ಪಥಸಂಚಲನಕ್ಕೆ ಅನುಮತಿ ಕೋರಿ ಆರ್ ಎಸ್ಎಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ. ಶುಕುರೆ ಕಮಲ್ ಅವರು, ನವೆಂಬರ್ 16 ರಂದು 300 ಜನರು ಮತ್ತು 50 ಸದಸ್ಯರ ಬ್ಯಾಂಡ್‌ನೊಂದಿಗೆ ರೂಟ್ ಮಾರ್ಚ್ ನಡೆಸಲು ಅನುಮತಿ ನೀಡಿದ್ದಾರೆ.
ನವೆಂಬರ್ 16 ರಂದು ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ನಿರ್ದಿಷ್ಟ ಷರತ್ತುಗಳಿಗೆ ಒಳಪಟ್ಟು ಚಿತ್ತಾಪುರದ ತಹಶೀಲ್ದಾರ್ ಈಗಾಗಲೇ ಅನುಮತಿ ನೀಡಿದ್ದಾರೆ ಎಂದು ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರು ತಿಳಿಸಿದ್ದಾರೆ.
ನವೆಂಬರ್ 16ರ ಮಧ್ಯಾಹ್ನ 3.30ರಿಂದ ಸೂರ್ಯಾಸ್ತದವರೆಗೆ ಪಥ ಸಂಚಲನಕ್ಕೆ ಅವಕಾಶ ನೀಡಲಾಗಿದೆ. ಪಥಸಂಚಲನದಲ್ಲಿ 300 ಕಾರ್ಯಕರ್ತರು ಹಾಗೂ 50 ಬ್ಯಾಂಡ್ ವಾದಕರಿಗೆ ಅವಕಾಶ ನೀಡಲಾಗಿದ್ದು, ಒಟ್ಟು 350 ಜನ ಮಾತ್ರ ಭಾಗಿಯಾಗಬೇಕು ಎಂದು ತಿಳಿಸಿದೆ.
ವಿಚಾರಣೆಯ ಸಮಯದಲ್ಲಿ, ಅರ್ಜಿದಾರರನ್ನು ಪ್ರತಿನಿಧಿಸುವ ಹಿರಿಯ ವಕೀಲ ಅರುಣಾ ಶ್ಯಾಮ್, ಕಾರ್ಯಕ್ರಮಕ್ಕೆ ಅವಕಾಶ ನೀಡಿದ್ದಕ್ಕಾಗಿ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಆದರೆ ತಹಶೀಲ್ದಾರ್ ಅವರ ಆದೇಶದಲ್ಲಿನ ಎರಡು ಷರತ್ತುಗಳನ್ನು ಮಾರ್ಪಡಿಸುವಂತೆ ನ್ಯಾಯಾಲಯವನ್ನು ಕೋರಿದರು.
ಸಂಘದ ಶತಮಾನೋತ್ಸವ ಆಚರಣೆ ಮತ್ತು ಈ ಸಂದರ್ಭಕ್ಕೆ ಸಂಬಂಧಿಸಿದ ಸಾರ್ವಜನಿಕ ಭಾವನೆಗಳನ್ನು ಉಲ್ಲೇಖಿಸಿ, ಭಾಗವಹಿಸುವವರ ಮಿತಿಯನ್ನು 300 ರಿಂದ 600ಕ್ಕೆ ಮತ್ತು ಬ್ಯಾಂಡ್ ಸದಸ್ಯರ ಸಂಖ್ಯೆಯನ್ನು 25 ರಿಂದ 50 ಕ್ಕೆ ಹೆಚ್ಚಿಸಬೇಕೆಂದು ಅವರು ಕೋರಿದರು.
ರಾಜ್ಯದ ಪರವಾಗಿ ಹಾಜರಾದ ಅಡ್ವೊಕೇಟ್ ಜನರಲ್ ಶಶಿ ಕಿರಣ್ ಶೆಟ್ಟಿ, ಭಾಗವಹಿಸುವವರ ಸಂಖ್ಯೆಯನ್ನು ಹೆಚ್ಚಿಸುವ ಮನವಿಯನ್ನು ವಿರೋಧಿಸಿದರು, ಅರ್ಜಿದಾರರು ಹತ್ತಿರದ ಪ್ರದೇಶಗಳಲ್ಲಿ ನಡೆಸಿದ ಇದೇ ರೀತಿಯ ಮೆರವಣಿಗೆಗಳನ್ನು ನಿರ್ಣಯಿಸಿದ ನಂತರ 300 ರ ಸಂಖ್ಯೆಯನ್ನು ನಿಗದಿಪಡಿಸಲಾಗಿದೆ ಎಂದು ಹೇಳಿದರು.
ಆದಾಗ್ಯೂ, ಬ್ಯಾಂಡ್ ಬಲವನ್ನು 25 ರಿಂದ 50 ಸದಸ್ಯರನ್ನು ಹೆಚ್ಚಿಸಲು ಅವರು ಆಕ್ಷೇಪಿಸಲಿಲ್ಲ.
ಎರಡು ಬಾರಿ ಶಾಂತಿ ಸಭೆ
ಚಿತ್ತಾಪುರದಲ್ಲಿ RSS ಪಥಸಂಚಲನ ವಿಚಾರ ಸಂಬಂಧ ಎರಡು ಬಾರಿ ಶಾಂತಿ ಸಭೆ ನಡೆದಿತ್ತು. ಮೊದಲ ಬಾರಿಗೆ ಅ.28ರಂದು ಜಿಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆದಿತ್ತು. ಈ ಸಭೆ ವಿಫಲವಾಗಿದ್ದ ಹಿನ್ನಲೆಯಲ್ಲಿ ಹೈಕೋರ್ಟ್ ಸೂಚನೆಯಂತೆ 2ನೇ ಬಾರಿ ಶಾಂತಿ ಸಭೆಯನ್ನ ಬೆಂಗಳೂರಿನ ಅಡ್ವೊಕೇಟ್ ಜನರಲ್ (ಎಜಿ) ಕಚೇರಿಯಲ್ಲಿ ನವೆಂಬರ್ 5ರಂದು ನಡೆಸಲಾಗಿತ್ತು.
Advertisement