

ಕಲಬುರಗಿ: ಚಿತ್ತಾಪುರದಲ್ಲಿ ನಡೆಸಲು ಉದ್ದೇಶಿಸಲಾಗಿರುವ ಪಥಸಂಚಲನವನ್ನು ಆರ್‌ಎಸ್‌ಎಸ್ ಪ್ರತಿಷ್ಠೆಯ ವಿಷಯವಾಗಿ ಪರಿಗಣಿಸಿದೆ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.
ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಸ್ತುತ ಈ ವಿಚಾರ ಹೈಕೋರ್ಟ್ ಅಂಗಳದಲ್ಲಿದೆ. ಎಲ್ಲರೂ ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಆರ್‌ಎಸ್‌ಎಸ್‌ಗೆ ಮಾತ್ರವಲ್ಲದೆ ಇತರ ಸಂಸ್ಥೆಗಳಿಗೂ ಸರ್ಕಾರಿ ಭೂಮಿಯನ್ನು ಬಳಸದಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಸಾವಿರಾರು ಜನರನ್ನು ಒಟ್ಟುಗೂಡಿಸಲು ಯಾರೇ ಬಯಸಿದರೂ, ಅವರು ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಬೇಕು. ಆದರೆ, ಬೆಂಗಳೂರಿನಲ್ಲಿ ಪಂಥಸಂಚಲನ ನಡೆಸುವ ಮೊದಲು ಆರ್‌ಎಸ್‌ಎಸ್ ಪೊಲೀಸರಿಂದ ಅನುಮತಿ ಪಡೆದಿಲ್ಲ, ಪೊಲೀಸರಿಗೆ ಪತ್ರ ಬರೆದು ಪಥಸಂಚಲನ ನಡೆಸುವ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ. ಆರ್‌ಎಸ್‌ಎಸ್‌ನ ಈ ಕ್ರಮಕ್ಕೆ ಅನೇಕ ಜನರು ಆಕ್ಷೇಪಿಸಿದ್ದಾರೆ. ಯಾರಾದರೂ ಸಾವಿರಾರು ಜನರನ್ನು ಒಟ್ಟುಗೂಡಿಸಲು ಬಯಸಿದರೆ, ಅವರು ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಬೇಕು ಎಂದು ತಿಳಿಸಿದ್ದಾರೆ.
ಪಥಸಂಚಲನ ನಡೆಸುವ ಕುರಿತು ಆರ್‌ಎಸ್‌ಎಸ್ ಪೊಲೀಸರಿಗೆ ಮಾಹಿತಿ ನೀಡಿದೆಯೇ ವಿನಃ ಅನುಮತಿ ಪಡೆದಿಲ್ಲ. ಹೀಗಾಗಿ ನಾವೂ ಕೂಡ ಇದೇ ರೀತಿ ನಡೆಯುತ್ತೇವೆಂದು ಹಲವು ಸಂಘಟನೆಗಳು ಹೇಳುತ್ತಿವೆ. ಹೀಗಾದರೆ ಸರ್ಕಾರ ಏನು ಮಾಡಬೇಕು? ಮುಖ್ಯಮಂತ್ರಿಗೆ ಪತ್ರ ಬರೆದ ನಂತರ, ಸರ್ಕಾರವು ಸಾರ್ವಜನಿಕ ಆಸ್ತಿ ಅಥವಾ ಸರ್ಕಾರಿ ಆವರಣವನ್ನು ಕಾರ್ಯಕ್ರಮಗಳನ್ನು ನಡೆಸಲು ಬಯಸಿದರೆ ಸಂಘಟನೆಗಳು ಪೊಲೀಸರಿಂದ ಅನುಮತಿ ಪಡೆಯುವುದು ಕಡ್ಡಾಯ ಎಂದು ಆದೇಶ ಹೊರಡಿಸಿತು. ಪತ್ರ ಬರೆದ ನಂತರ ಆರ್‌ಎಸ್‌ಎಸ್ ಮತ್ತು ಬಿಜೆಪಿ ನನ್ನ ಮೇಲೆ ವಾಗ್ದಾಳಿ ನಡೆಸುತ್ತಿವೆ. ಕೆಲವರು ನನಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ. ನನ್ನ ಕುಟುಂಬ ಸದಸ್ಯರನ್ನೂ ಕೂಡ ಅವಹೇಳನಕಾರಿ ಪದಗಳಿಂದ ನಿಂದಿಸಿದ್ದಾರೆ. ಇದನ್ನು ಬಿಜೆಪಿಯ ಯಾರೂ ಖಂಡಿಸಿಲ್ಲ. ಪೊಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ಬಂಧಿಸಿದ್ದಾರೆ.
ಈ ಎಲ್ಲಾ ಸಂಗತಿಗಳನ್ನು ಪರಿಗಣಿಸಿ, ಚಿತ್ತಾಪುರ ಆಡಳಿತವು ಅಕ್ಟೋಬರ್ 19 ರಂದು ನಡೆಸಲು ಉದ್ದೇಶಿಸಿದ್ದ ಆರ್‌ಎಸ್‌ಎಸ್‌ನ ಸಂಚಲನಕ್ಕೆ ನಿಷೇಧ ಹೇರಿತು. ಬಳಿಕ ಆರ್‌ಎಸ್‌ಎಸ್ ಹೈಕೋರ್ಟ್ ಮೆಟ್ಟಿಲೇರಿತು. ಇದೀಗ ಸಂಘಟನೆಗಳು ಕೂಡ ಪಥಸಂಚಲನಕ್ಕೆ ಅನುಮತಿ ಕೇಳುತ್ತಿವೆ. ನೋಂದಾಯಿಸದ ಸಂಘಟನೆಯು ಕೈಯಲ್ಲಿ ಲಾಠಿ ಹಿಡಿದು ಪಥಸಂಚಲನ ನಡೆಸಿದರೆ ಜನರು ಭಯಪಡುವುದು ಸಹಜ. ಏನಾದರೂ ಸಂಭವಿಸಿದರೆ, ಅದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.
ವಿವಿಧ ಸ್ಥಳಗಳಲ್ಲಿ ನಡೆದ ಪಥಸಂಚಲನಗಳಲ್ಲಿ ಭಾಗವಹಿಸಿದ ಸರ್ಕಾರಿ ನೌಕರರಿಗೆ ನೋಟಿಸ್ ನೀಡಿರುವ ಕುರಿತ ಪ್ರಶ್ನೆಗೆ ಉತ್ತರಿಸಿ ಸೇವಾ ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳಲಾಗಿದೆ,. ಕೇಂದ್ರ ಸರ್ಕಾರವು ರೂಪಿಸಿದ ನಿಯಮಗಳು ರಾಜ್ಯ ಸರ್ಕಾರಿ ನೌಕರರಿಗೆ ಅನ್ವಯಿಸುತ್ತವೆ ಎಂದು ಬಿಜೆಪಿ ಮತ್ತು ಆರ್‌ಎಸ್‌ಎಸ್ ಭಾವಿಸುತ್ತವೆ, ಆದರೆ ಅದು ಸರಿಯಲ್ಲ ಎಂದರು.
ನಾನು ಯಾರ ಸಿದ್ಧಾಂತದ ಬಗ್ಗೆಯೂ ಮಾತನಾಡುವುದಿಲ್ಲ. ನನ್ನ ಸಿದ್ಧಾಂತ, ಮುಖ್ಯಮಂತ್ರಿ ಸಿದ್ಧಾಂತ, ಖರ್ಗೆ ಅವರ ಸಿದ್ಧಾಂತ, ರಾಹುಲ್ ಗಾಂಧಿ ಅವರ ಸಿದ್ಧಾಂತ ಸರಿಯಾಗಿದೆ, ಅಷ್ಟೇ ಸಾಕು ಎಂದು ಹೇಳಿದರು.
ಆರ್‌ಎಸ್‌ಎಸ್ ವಿಚಾರ ಸದ್ಯ ಹೈಕೋರ್ಟ್ ಅಂಗಳದಲ್ಲಿದ್ದು, ಕೋರ್ಟ್ ಅನುಮತಿ ನೀಡದರೆ, ನಮ್ಮ ಆಕ್ಷೇಪಣೆ ಇಲ್ಲ. ಆದರೆ, ಆರ್‌ಎಸ್‌ಎಸ್ ನೋಂದಣಿ ವಿಚಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು. ಈ ಮೂಲಕ ನೋಂದಣಿ ಸಮಸ್ಯೆಯನ್ನು ಕಾನೂನಿನ ಪ್ರಕಾರವೂ ಪರಿಹರಿಸಲಾಗುವುದು ಎಂದರು. ನವೆಂಬರ್ ತಿಂಗಳಿನಲ್ಲಿ ಕ್ರಾಂತಿಯೂ ಇಲ್ಲ. ಇದು ಊಹಾಪೋಹವಷ್ಟೇ ಎಂದು ಹೇಳಿದರು.
Advertisement