

ಹುಬ್ಬಳ್ಳಿ: ಸೌದಿ ಅರೇಬಿಯಾದ ಮದೀನಾ ಬಳಿ ಭಾನುವಾರ ರಾತ್ರಿ ಸಂಭವಿಸಿದ ಬಸ್ ಅಪಘಾತದಲ್ಲಿ ಒಟ್ಟು 45 ಮಂದಿ ಭಾರತೀಯರು ಸಾವನ್ನಪ್ಪಿದ್ದು, ಈ ಪೈಕಿ ಓರ್ವ ಕನ್ನಡಿಗ ಕೂಡ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಸೌದಿ ಅರೇಬಿಯಾದ ಮೆಕ್ಕಾ-ಮದೀನಾ ರಸ್ತೆಯಲ್ಲಿ ಬಸ್ ಹಾಗೂ ಟ್ಯಾಂಕರ್ ನಡುವೆ ಡಿಕ್ಕಿಯಾದ ರಭಸಕ್ಕೆ ಬಸ್ ಹೊತ್ತಿ ಉರಿದಿತ್ತು. ದುರ್ಘಟನೆಯಲ್ಲಿ 45 ಮಂದಿ ಭಾರತೀಯರು ಸಜೀವ ದಹನವಾಗಿದ್ದಾರೆ.
ಬಸ್ಸಿನಲ್ಲಿದ್ದ 46 ಜನರಲ್ಲಿ 43 ಮಂದಿ ಹೈದರಾಬಾದ್'ನವರು, ಇಬ್ಬರು ಸೈಬರಾಬಾದ್ ನವರು ಮತ್ತು ಓರ್ವ ಕರ್ನಾಟಕದ ಹುಬ್ಬಳ್ಳಿಯವರು ಎಂದು ತಿಳಿದುಬಂದಿದೆ. ಹುಬ್ಬಳ್ಳಿಯ ಅಬ್ದುಲ್ ಗನಿ ಶಿರಪಟ್ಟಿಯವರು ದುರ್ಘಟನೆಯಲ್ಲಿ ಸಾವನ್ನಪ್ಪಿದ್ದಾರೆಂದು ತಿಳಿದಬಂದಿದೆ.
ದುಬೈನ ಇಂಟರ್ ನ್ಯಾಷನಲ್ ಹೋಟೆಲ್ ವೊಂದರಲ್ಲಿ ಅಬ್ದುಲ್ ಅವರು ಕಳೆದ 30 ವರ್ಷಗಳಿಂದ ಚಾಲಕನಾಗಿ ಕೆಲಸ ಮಾಡುತ್ತಿದ್ದರು. 2 ತಿಂಗಳ ಹಿಂದಷ್ಟ ಹುಬ್ಭಳ್ಳಿಗೆ ವಾಪಸ್ಸಾಗಿದ್ದರು. ನ.9ರಂದು ದುಬೈನಿಂದ ಸೌದಿಗೆ ಹೋಗಿದ್ದರು.
ಭಾನುವಾರ ರಾತ್ರಿ ಕುಟುಂಬದವರ ಜೊತೆ ವಿಡಿಯೋ ಕಾಲ್ ನಲ್ಲಿ ಮಾತನಾಡಿದ್ದರು. ಅಷ್ಟೇ ಅಲ್ಲದೆ ಉಮ್ರಾ ಯಾತ್ರೆಯ ವಿಡಿಯೋವನ್ನೂ ಕೂಡ ಹಾಕಿದ್ದರು. ಖಾಬಾದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತವೂ ವಿಡಿಯೋ ಕಳುಹಿಸಿದ್ದಲ್ಲದೆ, 2-3 ದಿನದಲ್ಲಿ ಹುಬ್ಭಳ್ಳಿಗೆ ಬರುವುದಾಗಿ ತಿಳಿಸಿದ್ದರು ಎಂದು ಕುಟುಂಬದವರು ಕಣ್ಣೀರಿಟ್ಟಿದ್ದಾರೆ.
ಅಬ್ದುಲ್ ಗಣಿ ಕುಟುಂಬ ಆಧಾರವಾಗಿದ್ದು, ತಾಯಿ, ಪತ್ನಿ, ಮೂವರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ. ಅಬ್ದುಲ್ ಅವರು ಸಹೋದರನೊಂದಿಗೆ ದುಬೈನಲ್ಲಿ ಕೆಲಸ ಮಾಡುತ್ತಿದ್ದು, ಕುಟುಂಬ ಮಾತ್ರ ಹುಬ್ಭಳ್ಳಿಯಲ್ಲಿಯೇ ವಾಸವಿದೆ ಎಂದು ತಿಳಿದುಬಂದಿದೆ.
ಅಪಘಾತದ ಬಗ್ಗೆ ತಿಳಿದಾಗ, ಬೇಸರವಾಗಿತ್ತು. ಮೃತರೆಲ್ಲರೂ ತೆಲಂಗಾಣದವರು ಎಂದು ಹೇಳಲಾಗಿತ್ತು. ಆದರೆ, ಅದೇ ಬಸ್ ನಲ್ಲಿ ಅಬ್ದುಲ್ ಕೂಡ ಇದ್ದ ಎಂಬ ಸುಳಿವು ನಮಗಿರಲಿಲ್ಲ. ಸೋಮವಾರ ಬೆಳಿಗ್ಗೆ ಹೈದರಾಬಾದ್ ಪೊಲೀಸರು ಕರೆ ಮಾಡಿದಾಗಲೇ ಅಬ್ದುಲ್ ಸಾವಿನ ಬಗ್ಗೆ ತಿಳಿದಿದ್ದು. ಈಗಲೂ ನಮಗೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಕುಟುಂಬಸ್ಥರು ಹೇಳಿದ್ದಾರೆ.
ಈ ನಡುವೆ ಹುಬ್ಬಳ್ಳಿಯ ಮಾಜಿ ಕಾರ್ಪೊರೇಟರ್ ಆರಿಫ್ ಭದ್ರಾಪುರ್ ಅವರು ಮಾತನಾಡಿದ್ದು, ಕರ್ನಾಟಕ ವಕ್ಫ್ ಮಂಡಳಿ ಮತ್ತು ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಕುಟುಂಬಕ್ಕೆ ಸಹಾಯ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಮೃತದೇಹ ಸಂಪೂರ್ಣವಾಗಿ ಸುಟ್ಟುಹೋಗಿರುವುದರಿಂದ, ಸೌದಿ ಅರೇಬಿಯಾದಲ್ಲೇ ಸಮಾಧಿ ಮಾಡಲು ನಿರ್ಧರಿಸಲಾಗಿದೆ. ಕುಟುಂಬವು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸರ್ಕಾರದಿಂದ ಸಹಾಯವನ್ನು ಕೋರಿದೆ. ಅಬ್ದುಲ್ ಕುಟುಂಬದ ಮೂವರು ಸದಸ್ಯರು ಅಂತ್ಯಕ್ರಿಯೆಗಾಗಿ ಸೌದಿ ಅರೇಬಿಯಾಕ್ಕೆ ತೆರಳಲಿದ್ದಾರೆಂದು ತಿಳಿಸಿದ್ದಾರೆ
Advertisement