

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಡಾ ಮಾಜಿ ಆಯುಕ್ತರಾಗಿದ್ದ ಜಿ.ಟಿ.ದಿನೇಶ್ ಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯವು ಪ್ರಾಸಿಕ್ಯೂಷನ್ ದೂರು ದಾಖಲಿಸಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಿಸಿರುವ ಜಾರಿ ನಿರ್ದೇಶನಾಲಯವು (ಇ.ಡಿ), ‘ದಿನೇಶ್ ಕುಮಾರ್ ಅವರು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು, ಅಕ್ರಮವಾಗಿ ನೂರಾರು ನಿವೇಶನಗಳನ್ನು ಹಂಚಿಕೆ ಮಾಡಿದ್ದಾರೆ’ ಎಂದು ವಿವರಿಸಿದೆ.
ಮುಡಾ ನಿವೇಶನಗಳ ಹಂಚಿಕೆಯಲ್ಲಿ ಕಾನೂನು, ಸರ್ಕಾರಿ ಆದೇಶಗಳು ಮತ್ತು ಮಾರ್ಗಸೂಚಿಗಳ ಉಲ್ಲಂಘನೆಯಾಗಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ತಿಳಿಸಿದೆ.
ಅಕ್ರಮ ಹಂಚಿಕೆಗಳಿಗೆ ಬದಲಾಗಿ ದಿನೇಶ್ ಅವರು, ನಗದು, ಬ್ಯಾಂಕ್ ವರ್ಗಾವಣೆ ಮತ್ತು ಚರ ಮತ್ತು ಸ್ಥಿರ ಆಸ್ತಿಗಳ ರೂಪದಲ್ಲಿ ಲಂಚ ಸ್ವೀಕರಿಸಿರುವ, ಆ ಲಂಚವನ್ನು ಸಂಬಂಧಿಕರು, ಸಹಚರರ ಬ್ಯಾಂಕ್ ಖಾತೆ ಮೂಲಕ ವರ್ಗಾಯಿಸಿರುವ ಕುರಿತು ಪುರಾವೆಗಳೂ ಇವೆ ಎಂದು ತಿಳಿಸಿದೆ.
ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇಶ್ ಕುಮಾರ್ ಅವರನ್ನು ಸೆಪ್ಟೆಂಬರ್ 16, 2025 ರಂದು ಬಂಧಿಸಲಾಯಿತು. ದಿನೇಶ್ ಅವರು ಇನ್ನೂ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಪ್ರಕರಣ ಸಂಬಂಧ ಇಡಿ ಅಧಿಕಾರಿಗಳು ಇದೂವರೆಗೆ ಅಕ್ರಮವಾಗಿ ಹಂಚಿಕೆಯಾದ 283 ಮುಡಾ ನಿವೇಶನಗಳು ಮತ್ತು 450 ಕೋಟಿ ರೂ. ಮೌಲ್ಯದ ಮೂರು ಸ್ಥಿರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.
Advertisement