

ಬೆಂಗಳೂರು: ಭಾರತೀಯ ಚಿತ್ರರಂಗದ ಬ್ಲಾಕ್ಬಸ್ಟರ್ 'ಕಾಂತಾರ ಚಾಪ್ಟರ್ 1' ಚಿತ್ರದ ಸಾರಥಿ ರಿಷಬ್ ಶೆಟ್ಟಿ ಬುಧವಾರದಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಆಗಿ ಕೆಲ ಹೊತ್ತು ಚಿತ್ರರಂಗದ ಬೆಳವಣಿಗೆ ಕುರಿತು ಚರ್ಚೆ ನಡೆಸಿದರು.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಭೇಟಿಯ ಫೋಟೋ ಹಂಚಿಕೊಂಡಿದ್ದು, ನಟನ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ. ''ರಿಷಬ್ ಶೆಟ್ಟಿ ಅವರು ಇಂದು ನನ್ನ ಗೃಹಕಚೇರಿಯಲ್ಲಿ ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಈ ವೇಳೆ 'ಕಾಂತಾರ: ಒಂದು ದಂತಕಥೆ - ಅಧ್ಯಾಯ 1' ಚಿತ್ರ ಯಶಸ್ವಿಯಾಗಿರುವುದಕ್ಕೆ ಅಭಿನಂದನೆ ಸಲ್ಲಿಸಿದೆ.
ನಮ್ಮ ನೆಲಮೂಲದ ಆಚಾರ-ವಿಚಾರ, ಸಂಪ್ರದಾಯ, ಸಂಸೃತಿಯನ್ನು ಇಡೀ ಪ್ರಪಂಚಕ್ಕೆ ಪರಿಚಯಿಸಿರುವ ರಿಷಬ್ ಶೆಟ್ಟಿ ಅವರ ಕಾರ್ಯವೈಖರಿ ಶ್ಲಾಘನೀಯ. ಮುಂದಿನ ಅವರ ಚಿತ್ರರಂಗದ ಪಯಣಕ್ಕೆ ಒಳ್ಳೆಯದಾಗಲಿ, ಇನ್ನೂ ಎತ್ತರಕ್ಕೆ ಅವರು ಬೆಳೆಯಲಿ ಎಂದು ಶುಭಹಾರೈಸಿದೆ'' ಎಂದು ಬರೆದುಕೊಂಡಿದ್ದಾರೆ. ಡಿವೈನ್ ಸ್ಟಾರ್ನ ಕಾರ್ಯವೈಖರಿಗೆ ಡಿಸಿಎಂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Advertisement