

ಬೆಂಗಳೂರು: ಇಂದಿರಾ ಗಾಂಧಿ ಅವರು ದೇಶದ ಮಹಿಳಾ ಶಕ್ತಿಯ ಚಿಹ್ನೆ. ದೇಶ ಪ್ರೇಮ, ದೃಢ ನಿಶ್ಚಯ, ಧೈರ್ಯದ ಪ್ರತೀಕವಾಗಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ಬುಧವಾರ ನಡೆದ ಇಂದಿರಾ ಗಾಂಧಿ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಶಿವಕುಮಾರ್ ಅವರು ಮಾತನಾಡಿದರು.
ದೇಶದ ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಅವರ ಜನ್ಮದಿನ ಆಚರಿಸುತ್ತಿದ್ದೇವೆ. ಇಂದು ಬೆಳಗ್ಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಇಂದಿರಾ ಗಾಂಧಿ ಅವರ ಸಮಾಧಿಗೆ ಹೋಗಿ ಗೌರವ ಸಲ್ಲಿಸಿದ್ದಾರೆ. ಸೋನಿಯಾ ಗಾಂಧಿ ಅವರು ನನನ್ನು ಕರೆದು ಅವರ ಸಮಾಧಿ ಸುತ್ತಮುತ್ತಲ ಜಾಗ ಅಭಿವೃದ್ಧಿ ಪಡಿಸಲು ಸೂಚಿಸಿದ್ದರು.
ಜೊತೆಗೆ ಪೆರಂಬೂರಿನಲ್ಲಿರುವ ರಾಜೀವ್ ಗಾಂಧಿ ಅವರ ಸಮಾಧಿಗೆ ಗ್ರಾನೈಟ್ ಹಾಕುವ ಭಾಗ್ಯ ನನಗೆ ಸಿಕ್ಕಿದೆ. ನಾನು ಹಾಗೂ ನನ್ನ ಸಹೋದರ ನಮ್ಮದೇ ಕ್ವಾರೆಯಿಂದ ಗ್ರಾನೈಟ್ ಕಲ್ಲನ್ನು ತೆಗೆದುಕೊಂಡು ಹೋಗಿ ಅಲ್ಲಿ ಹಾಕಿ ನಮ್ಮ ಕೈಲಾದ ಸೇವೆ ಮಾಡುವ ಭಾಗ್ಯ ಸಿಕ್ಕಿತು ಎಂದು ಸ್ಮರಿಸಿದರು.
ಇಂದಿರಾ ಗಾಂಧಿ ಅವರ ಹತ್ಯೆಯಾದ ದಿನ ನಾವು ಯೂಥ್ ಕಾಂಗ್ರೆಸ್ ಸಮ್ಮೇಳನಕ್ಕಾಗಿ ರೈಲಿನಲ್ಲಿ ಪ್ರಯಾಣ ಬೆಳೆಸುತ್ತಿದ್ದೆವು. ಇಂದಿರಾ ಗಾಂಧಿ ಅವರ ಹತ್ಯೆ ಹಿನ್ನೆಲೆಯಲ್ಲಿ ರೈಲು ಅರ್ಧದಾರಿಯಲ್ಲೇ ನಿಂತಿತು. ಆಗ ನಾನು ಪ್ರವಾಸಿ ಚಿತ್ರಮಂದಿರ ಆರಂಭಿಸಲು ಅರ್ಜಿ ಹಾಕಿದ್ದೆ. ಅದಕ್ಕೆ ನಾನು ಇಂದಿರಾ ಜೀ ಚಿತ್ರಮಂದಿರ ಎಂದು ಹೆಸರಿಟ್ಟೆ. ಇಂದಿರಾ ಗಾಂಧಿ ಅವರ ನಿಧನದ ನಂತರ ರಾಜೀವ್ ಗಾಂಧಿ ಅವರು ನಾಯಕತ್ವ ವಹಿಸಿದರು. ನನಗೆ ಹಾಗೂ ವಿನಯ್ ಕುಮಾರ್ ಸೊರಕೆ ಅವರು ವಿದ್ಯಾರ್ಥಿ ನಾಯಕರಾಗಿದ್ದೆವು ಎಂದು ಮೆಲುಕು ಹಾಕಿದರು.
ಇಂದಿರಾ ಗಾಂಧಿ ಅವರು ಬಡತನ ನಿರ್ಮೂಲನೆಗೆ 20 ಅಂಶಗಳ ಮೂಲಕ ಹೋರಾಟ ಆರಂಭಿಸಿದರು. ಉಳುವವನಿಗೆ ಭೂಮಿ ಕೊಟ್ಟಿದ್ದರೆ ಅದು ಇಂದಿರಾ ಗಾಂಧಿ ಅವರು. ಈ ಯೋಜನೆಯಲ್ಲಿ ಲಕ್ಷಾಂತರ ಜನ ಫಲಾನುಭವಿಗಳಿದ್ದಾರೆ. ಇಂದಿರಾ ಗಾಂಧಿ ಅವರ ಕೆಲಸಗಳ ಪೈಕಿ ಬ್ಯಾಂಕುಗಳ ರಾಷ್ಟ್ರೀಕರಣ ಬಹು ದೊಡ್ಡ ನಿರ್ಧಾರ. ಅದು ಇಲ್ಲವಾಗಿದ್ದರೆ ನಮಗೆ ಸಾಲ ಕೊಡುವವರೇ ಇರುತ್ತಿರಲಿಲ್ಲ.
ನಾನು ಆರಂಭದಲ್ಲಿ ಮೊಟಾರ್ ಸೈಕಲ್ ಖರೀದಿ ಮಾಡಲು ಸೇಠುಗಳ ಬಳಿ ಹೋಗಿ ಬೇರೆಯವರ ಗ್ಯಾರಂಟಿ ನೀಡಬೇಕಿತ್ತು. ಈ ನಿರ್ಧಾರದಿಂದ ಬ್ಯಾಂಕುಗಳು ಜನರಿಗೆ ಸಾಲ ಸೌಲಭ್ಯ ನೀಡಿದರು. ಇಲ್ಲಿ ಜನಾರ್ದನ ಪೂಜಾರಿ ಅವರು ಎಲ್ಲಾ ಜನರಿಗೆ ಸಾಲ ಸಿಗುವಂತೆ ಮಾಡಿ, ಸಾಲದ ಪೂಜಾರಿ ಎಂದೇ ಹೆಸರು ಮಾಡಿದರು.
ಅದರ ಪರಿಣಾಮವಾಗಿ ಇಂದು ಬ್ಯಾಂಕುಗಳು ಜನರ ಮನೆ ಬಾಗಿಲಿಗೆ ತಲುಪುವಂತಾಗಿದೆ. ಪ್ರಪಂಚದ ಅನೇಕ ದೊಡ್ಡ ಬ್ಯಾಂಕುಗಳು ಮುಳುಗಿದರೂ ನಮ್ಮ ದೇಶದ ಬ್ಯಾಂಕುಗಳು ಮುಳುಗಿಲ್ಲ. ಮನಮೋಹನ್ ಸಿಂಗ್ ಅವರ ದಿಟ್ಟ ನಿರ್ಧಾರಗಳ ಪರಿಣಾಮ ನಮ್ಮ ಬ್ಯಾಂಕುಗಳು ಸದೃಢವಾಗಿವೆ” ಎಂದರು.
ಇನ್ನು ಮಾಲೀನ್ಯ ನಿಯಂತ್ರಣ ಮಂಡಳಿಗಳನ್ನು ಆರಂಭಿಸಿದ್ದು, ಇಂದಿರಾ ಗಾಂಧಿ ಅವರು. ಅಂಗನವಾಡಿ ಆರಂಭಿಸಿದರು. ದೇಶದಲ್ಲಿ ಅಂಗನವಾಡಿ ಕಾರ್ಯಕರ್ತರ ನೇಮಕ ಮಾಡಿದ್ದು ಇಂದಿರಾ ಗಾಂಧಿ ಅವರು. ವೃದ್ಧಾಪ್ಯ, ವಿಧವಾ ಪಿಂಚಣಿ ಕೊಟ್ಟಿದ್ದು ಇಂದಿರಾ ಗಾಂಧಿ ಅವರು. ಅವರ ಯೋಜನೆಗಳನ್ನು ಯಾವುದೇ ಸರ್ಕಾರ ಬಂದರೂ ನಿಲ್ಲಿಸಲು ಸಾಧ್ಯವಿಲ್ಲ.
ನಮ್ಮ ಕಾಂಗ್ರೆಸ್ ಸರ್ಕಾರದಲ್ಲಿ ಆಹಾರ ಭದ್ರತಾ ಕಾಯ್ದೆ, ಮಾಹಿತಿ ಹಕ್ಕು, ಶೈಕ್ಷಣಿಕ ಹಕ್ಕು, ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಲು 371ಜೆ ಜಾರಿಗೆ ತಂದಿದ್ದು ಕಾಂಗ್ರೆಸ್ ಸರ್ಕಾರ. ಕೃಷ್ಣ ಆವರ ಸರ್ಕಾರದಲ್ಲಿ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಆದರೆ ಲಾಲ ಕೃಷ್ಣಾ ಆಡ್ವಾಣಿ ಅವರು ಇದು ಸಾಧ್ಯವಿಲ್ಲ ಎಂದು ಬರೆದರು.ಆದರೆ ಕಾಂಗ್ರೆಸ್ ಸರ್ಕಾರ ಸಂವಿಧಾನದ ಮೂಲಕ ಜಾರಿಗೆ ತಂದಿತು” ಎಂದರು.
ಮಹಾಲಕ್ಷ್ಮಿಯ ಮತ್ತೊಂದು ಹೆಸರು ಇಂದಿರಾ. ಇಂದಿರಾ ಗಾಂಧಿ ಶತಮಾನ ಕಂಡ ಅತ್ಯುತ್ತಮ ನಾಯಕಿ, ಹಾಗೂ ವಿಶ್ವ ಕಂಡ ಶ್ರೇಷ್ಠ ಮಹಿಳಾ ಪ್ರಧಾನಿ. ಅವರ ಆಡಳಿತದಲ್ಲಿ ಪಾಕಿಸ್ತಾನವನ್ನು ಇಬ್ಭಾಗ ಮಾಡಿ ಬಾಂಗ್ಲಾದೇಶ ರಚನೆಗೆ ಕಾರಣರಾದರು. ಅವರ ನೀತಿಯಿಂದ ನಮ್ಮ ನೆರೆಯ ರಾಷ್ಟ್ರಗಳು ಸೇರಿದಂತೆ ವಿಶ್ವದ ಎಲ್ಲಾ ರಾಷ್ಟ್ರಗಳು ನಮ್ಮ ಮಿತ್ರರಾಗಿದ್ದವು.
ಆದರೆ ಈಗ ನಮ್ಮ ನೆರೆ ರಾಷ್ಟ್ರಗಳಾದ ಭೂತಾನ್, ಬರ್ಮಾ ದೇಶಗಳು ನಮ್ಮ ಜೊತೆ ನಿಲ್ಲುತ್ತಿಲ್ಲ. ಅಟಲ್ ಬಿಹಾರಿ ವಾಜಪೇಯಿ ಅವರು ಇಂದಿರಾ ಗಾಂಧಿ ಅವರನ್ನು ದುರ್ಗೆ ಎಂದು ಕರೆದರು. ಅಟಲ್ ಬಿಹಾರಿ ವಾಜಪೇಯಿ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದಾಗ ಅವರನ್ನು ವಿದೇಶಕ್ಕೆ ಕಳುಹಿಸಿ ಚಿಕಿತ್ಸೆ ಕೊಡಿಸಿದ್ದರು. ಇದು ಕಾಂಗ್ರೆಸ್ ಮುಖಂಡರಿಗೆ ಇದ್ದ ಹೃದಯ ವೈಶಾಲ್ಯತೆ ಎಂದು ಶ್ಲಾಘಿಸಿದರು.
Advertisement