

ನವದೆಹಲಿ/ಬೆಂಗಳೂರು: ಉದ್ಯೋಗದ ಆಸೆಗೆ ಬಿದ್ದು ಮ್ಯಾನ್ಮಾರ್‌ನಲ್ಲಿ ವಂಚಕರ ಬಲೆಯಲ್ಲಿ ಸಿಲುಕಿಕೊಂಡಿದ್ದ 25 ಮಂದಿ ಕನ್ನಡಿಗರು ಸೇರಿ ಒಟ್ಟು 125 ಮಂದಿ ಭಾರತೀಯರನ್ನು ರಕ್ಷಣೆ ಮಾಡಲಾಗಿದ್ದು, ಥೈಲ್ಯಾಂಡ್ ನಿಂದ ಭಾರತಕ್ಕೆ ಬುಧವಾರ ಕರೆತರಲಾಗಿದೆ.
ಇದರೊಂದಿಗೆ, ಈ ವರ್ಷದ ಮಾರ್ಚ್‌ನಿಂದ ಮಯನ್ಮಾರ್‌ನ ಕಳ್ಳಸಾಗಣೆ ಕೇಂದ್ರಗಳಿಂದ ಒಟ್ಟು 1,500 ಭಾರತೀಯರನ್ನು ಥೈಲ್ಯಾಂಡ್ ಮೂಲಕ ದೇಶಕ್ಕೆ ಮರಳಿ ಕರೆತರಲಾಗಿದೆ ಎಂದು ಭಾರತೀಯ ರಾಯಭಾರ ಕಚೇರಿ ಮಾಹಿತಿ ನೀಡಿದೆ.
ಆಗ್ನೇಯ ಏಷ್ಯಾದ ಕಳ್ಳಸಾಗಣೆ ಕೇಂದ್ರಗಳಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಮರಳಿ ಕರೆತರುವ ಭಾರತ ಸರ್ಕಾರದ ಪ್ರಯತ್ನಗಳ ಭಾಗವಾಗಿ, ಬ್ಯಾಂಕಾಕ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಥೈಲ್ಯಾಂಡ್‌ನ ಚಿಯಾಂಗ್ ಮಾಯ್ ಪ್ರಾಂತ್ಯದಲ್ಲಿರುವ ಭಾರತೀಯ ದೂತವಾಸವು ಭಾರತೀಯ ಪ್ರಜೆಗಳನ್ನು ಮರಳಿ ಕರೆತರಲು ಥಾಯ್ ಸರ್ಕಾರ ಮತ್ತು ಟಕ್ ಪ್ರಾಂತ್ಯದ ವಿವಿಧ ಸಂಸ್ಥೆಗಳೊಂದಿಗೆ ನಿಕಟ ಸಮನ್ವಯದೊಂದಿಗೆ ಕೆಲಸ ಮಾಡಿದೆ.
ಅಲ್ಲದೇ, ಭಾರತೀಯ ನಾಗರಿಕರು ವಿದೇಶಗಳಲ್ಲಿ ಉದ್ಯೋಗಾವಕಾಶ ಸ್ವೀಕರಿಸುವ ಮೊದಲು ವಿದೇಶಿ ಉದ್ಯೋಗದಾತರ ರುಜುವಾತುಗಳನ್ನು ಪರಿಶೀಲಿಸಲು ಮತ್ತು ನೇಮಕಾತಿ ಏಜೆಂಟ್‌ಗಳು ಮತ್ತು ಕಂಪನಿಗಳ ದಾಖಲೆಯನ್ನು ಪರಿಶೀಲಿಸಲು ಬಲವಾಗಿ ಸಲಹೆ ನೀಡಲಾಗಿದೆ.
ಇದಲ್ಲದೇ, ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ ಥೈಲ್ಯಾಂಡ್‌ಗೆ ವೀಸಾ-ಮುಕ್ತ ಪ್ರವೇಶವು ಪ್ರವಾಸೋದ್ಯಮ ಮತ್ತು ಅಲ್ಪಾವಧಿಯ ವ್ಯಾಪಾರ ಉದ್ದೇಶಗಳಿಗಾಗಿ ಮಾತ್ರ ಮತ್ತು ಥೈಲ್ಯಾಂಡ್‌ನಲ್ಲಿ ಉದ್ಯೋಗವನ್ನ ಹುಡುಕಲು ದುರುಪಯೋಗಪಡಿಸಿಕೊಳ್ಳಬಾರದು ಎಂದು ಥೈಲ್ಯಾಂಡ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹೇಳಿದೆ.
ಈ ನಡುವೆ ದೆಹಲಿಗೆ ಬಂದ ಯುವಕರಿಗೆ ಕರ್ನಾಟಕ ಭವನದಲ್ಲಿ ತಂಗಲು ರಾಜ್ಯ ಸರ್ಕಾರ ವ್ಯವಸ್ಥೆ ಮಾಡಿದೆ. ಅಲ್ಲದೇ ಅವರಿಗೆ ಬೆಂಗಳೂರಿಗೆ ಮರಳಲು ರೈಲ್ವೆ ಟಿಕೆಟ್ ವ್ಯವಸ್ಥೆ ಕೂಡಾ ಮಾಡಿದೆ.
ಭಾರತಕ್ಕೆ ಬಂದ ಬಳಿಕ ಪ್ರತಿಕ್ರಿಯೆ ನೀಡಿರುವ ವಂಚನೆಗೆ ಸಿಲುಕಿದ್ದ ಯುವಕರು, ಹೆಚ್ಚಿನ ವೇತನದ ನಿರೀಕ್ಷೆಯಲ್ಲಿ ನಾವು ವಿದೇಶಕ್ಕೆ ತೆರಳಿದ್ದೆವು. ಮೊದಲಗೆ ಫೇಸ್‌ಬುಕ್ ಮೂಲಕ ಸಂಪರ್ಕಿಸಿದ್ದರು. ಡೇಟಾ-ಎಂಟ್ರಿ ಉದ್ಯೋಗಗಳ ಆಫರ್‌ಗಳು ತಿಂಗಳಿಗೆ ಸುಮಾರು 80,000 ರೂ ಇದ್ದವು. ನಮ್ಮನ್ನು ವಿಮಾನದ ಮೂಲಕ ಬ್ಯಾಂಕಾಕ್‌ಗೆ ಕರೆದುಕೊಂಡು ಹೋಗಿದ್ದರು. ಬಳಿಕ ಮ್ಯಾನ್ಮಾರ್‌ಗೆ ರಸ್ತೆ ಮೂಲಕ ಕರೆದುಕೊಂಡು ಹೋದರು. ಪ್ರಶಅನೆ ಮಾಡಿದವರಿಗೆ ಗನ್ ತೋರಿಸಿ ಬೆದರಿಸುತ್ತಿದ್ದರು. ಜನರಿಗೆ ವಂಚನೆ ಮಾಡುವಂತೆ ಒತ್ತಡ ಹೇರುತ್ತಿದ್ದರು. ಮಾಡದಿದ್ದರೆ ಕಿರುಕುಳ ನೀಡುತ್ತಿದ್ದರು. ನಮ್ಮನ್ನು ಬಹುತೇಕ ಗುಲಾಮರಂತೆಯೇ ನಡೆಸಿಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ,
ನಾವು ನಮ್ಮ ತಾಯ್ನಾಡಿಗೆ ಮರಳುತ್ತಿರುವುದು ಸಂತಸ ತಂದಿದೆ. ಇಂತಹ ವಂಚನೆಗಳಿಗೆ ಇತರರು ಬಲಿಯಾಗಬಾರದು ಎಂದು ಮನವಿ ಮಾಡಿದ್ದಾರೆ.
ಏತನ್ಮಧ್ಯೆ ಭಾರತೀಯ ರಾಯಭಾರಿ ಅಧಿಕಾರಿಗಳು, ಉದ್ಯೋಗ ಆಫರ್ ಗಳನ್ನು ಸ್ವೀಕರಿಸುವ ಮೊದಲು ವಿದೇಶಿ ಉದ್ಯೋಗದಾತರು ಮತ್ತು ನೇಮಕಾತಿ ಏಜೆಂಟ್‌ಗಳ ಕಾನೂನುಬದ್ಧತೆಯನ್ನು ಪರಿಶೀಲಿಸುವಂತೆ ಒತ್ತಾಯಿಸಿದ್ದಾರೆ.
ಥೈಲ್ಯಾಂಡ್‌ಗೆ ವೀಸಾ-ಮುಕ್ತ ಪ್ರವೇಶವು ಪ್ರವಾಸೋದ್ಯಮ ಅಥವಾ ಸಣ್ಣ ವ್ಯಾಪಾರ ಭೇಟಿಗಳಿಗೆ ಮಾತ್ರವೇ ಆಗಿದ್ದು, ಅದನ್ನು ಉದ್ಯೋಗ ಹುಡುಕಲು ದುರುಪಯೋಗಪಡಿಸಿಕೊಳ್ಳಬಾರದು ಎಂದು ಹೇಳಿದ್ದಾರೆ.
Advertisement