

ಬೆಂಗಳೂರು: ಹಾಸನ ಜಿಲ್ಲೆಯ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಮನೆಕೆಲಸದಾಕೆ ನೀಡಿದ ದೂರಿಗೆ ಸಂಬಂಧಿಸಿದಂತೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರ ವಿರುದ್ಧ ಮ್ಯಾಜಿಸ್ಟ್ರೇಟ್ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಈ ಪ್ರಕರಣವನ್ನು ಸೆಕ್ಷನ್ 354 (ಮಹಿಳೆಯ ಘನತೆಗೆ ಧಕ್ಕೆ) ಅಡಿಯಲ್ಲಿ ದಾಖಲಿಸಿ ನಂತರ ವಿಶೇಷ ತನಿಖಾ ತಂಡಕ್ಕೆ ವರ್ಗಾಯಿಸಲಾಗಿತ್ತು.
"ದೂರು ದಾಖಲಿಸುವಲ್ಲಿನ ವಿಳಂಬವನ್ನು ಕ್ಷಮಿಸಲು ಮತ್ತು ಅರ್ಜಿದಾರ ಹೆಚ್ ಡಿ ರೇವಣ್ಣ ವಿರುದ್ಧ ಐಪಿಸಿ ಸೆಕ್ಷನ್ 354 ಎ (ಲೈಂಗಿಕ ಕಿರುಕುಳ) ಅಡಿಯಲ್ಲಿ ದಾಖಲಿಸಿದ ಅಪರಾಧಕ್ಕೆ ಸಂಬಂಧಿಸಿದಂತೆ ಸೂಕ್ತ ಆದೇಶ ನೀಡಲು ಇದು ಸೂಕ್ತವಾದ ಪ್ರಕರಣವೇ ಎಂದು ಪರಿಗಣಿಸಲು ಈ ವಿಷಯವನ್ನು ವಿಚಾರಣಾ ನ್ಯಾಯಾಲಯಕ್ಕೆ ಹಿಂತಿರುಗಿಸಲಾಗಿದೆ ಎಂದು ಹೈಕೋರ್ಟ್ ಹೇಳಿದೆ.
ಹೊಳೆನರಸೀಪುರದಲ್ಲಿ ರೇವಣ್ಣ ಅವರ ಮನೆಯಲ್ಲಿ ಕೆಲಸಕ್ಕಿದ್ದ 47 ವರ್ಷದ ಮಹಿಳೆ ಸಲ್ಲಿಸಿದ ದೂರಿನ ಆಧಾರದ ಮೇಲೆ ತಮ್ಮ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ನ್ನು ಪ್ರಶ್ನಿಸಿ ಶಾಸಕ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ ಈ ಆದೇಶವನ್ನು ನ್ಯಾಯಮೂರ್ತಿ ಎಂಐ ಅರುಣ್ ಅವರು ಹೊರಡಿಸಿದ್ದಾರೆ.
ಅರ್ಜಿದಾರರ ವಿರುದ್ಧ ಸೆಕ್ಷನ್ 354 ಮತ್ತು 354A ಅಡಿಯಲ್ಲಿ ಅಪರಾಧಗಳನ್ನು ಹೊರಿಸಲಾಗಿದೆ ಎಂದು ನ್ಯಾಯಾಲಯ ಗಮನಿಸಿತು. ಸೆಕ್ಷನ್ 354 ರ ಅಡಿಯಲ್ಲಿನ ಅಪರಾಧವು ಐದು ವರ್ಷಗಳವರೆಗೆ ಶಿಕ್ಷೆಯನ್ನು ನೀಡಬಹುದಾದ್ದರಿಂದ, ನಾಲ್ಕು ವರ್ಷಗಳ ನಂತರ ದೂರು ದಾಖಲಾಗಿದೆ ಎಂಬ ಅಂಶವನ್ನು ಪರಿಶೀಲಿಸದೆ ವಿಚಾರಣಾ ನ್ಯಾಯಾಲಯವು ಅದನ್ನು ಗಮನಕ್ಕೆ ತೆಗೆದುಕೊಂಡು ಶಿಕ್ಷೆ ಪ್ರಕಟಿಸಿತ್ತು, ಅದನ್ನು ಪ್ರಶ್ನಿಸಿ ರೇವಣ್ಣ ಅವರು ಹೈಕೋರ್ಟ್ ಮೊರೆ ಹೋಗಿದ್ದರು.
ಒಟ್ಟಾರೆಯಾಗಿ ದೂರನ್ನು ಓದಿದಾಗ, ಆರೋಪಗಳು ನಿಜವೆಂದು ಪರಿಗಣಿಸಲ್ಪಟ್ಟಿದ್ದರೂ ಸಹ, ಪೊಲೀಸ್ ವರದಿಯಲ್ಲಿ ಆರೋಪಿಸಲಾಗಿರುವಂತೆ ಸೆಕ್ಷನ್ 354 ಅಲ್ಲ, ಸೆಕ್ಷನ್ 354A ಅಡಿಯಲ್ಲಿ ಅರ್ಜಿದಾರರು ಮಾಡಿರುವ ಅಪರಾಧವಾಗಿದೆ ಎಂದು ನ್ಯಾಯಾಲಯ ಹೇಳಿದೆ.
Advertisement