ನಮ್ಮ ಮಧ್ಯೆ ಯಾವುದೇ ಮನಸ್ತಾಪವಿಲ್ಲ, HDD-HDK ನನ್ನ ನಾಯಕರು: ಹೆಚ್ ಡಿ ರೇವಣ್ಣ

ರೇವಣ್ಣ ಹಾಗೂ ಕುಮಾರಸ್ವಾಮಿ ನಡುವೆ ಮನಸ್ತಾಪವಿದೆ ಎಂದು ಯಾರಾದರೂ ಭಾವಿಸಿದರೆ ಅದು ತಪ್ಪು. ನನ್ನ ಕೊನೆಯ ಉಸಿರು ಇರುವವರೆಗೂ ಕುಮಾರಸ್ವಾಮಿ ನನ್ನ ನಾಯಕ ಮತ್ತು ನನ್ನ ಮಕ್ಕಳೂ ಅವರ ನಿರ್ಧಾರಗಳಿಗೆ ಬದ್ಧರಾಗಿದ್ದಾರೆ.
ಎಚ್ ಡಿ ರೇವಣ್ಣ
ಎಚ್ ಡಿ ರೇವಣ್ಣ
Updated on

ಬೆಂಗಳೂರು: ಉಪ ಚುನಾವಣೆ ಸೋಲು ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಂತ್ಯಕ್ಕೆ ನಾಂದಿ ಹಾಡಬಹುದು ಎಂಬ ಮಾತುಗಳು ಬರುತ್ತಿದ್ದು, ಈ ನಡುವಲ್ಲೇ ಪಕ್ಷದ ನಾಯಕತ್ವವು ಮಾಜಿ ಪ್ರಧಾನಮಂತ್ರಿ ಹೆಚ್'ಡಿ.ದೇವೇಗೌಡ ಹಾಗೂ ಕೇಂದ್ರ ಸಚಿವ ಹೆಚ್'ಡಿ.ಕುಮಾರಸ್ವಾಮಿ ಅವರ ಮೇಲೆ ವಿಶ್ವಾಸ ಪುನರುಚ್ಛರಿಸಲು ಆರಂಭಿಸಿದೆ.

ಚನ್ನಪಟ್ಟಣ ಉಪಚುನಾವಣೆ ಪ್ರಚಾರದಿಂದ ದೂರ ಉಳಿದಿದ್ದ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರು ಕುಮಾರಸ್ವಾಮಿ ಹಾಗೂ ದೇವೇಗೌಡ ಪರವಾಗಿ ಮಾತನಾಡಿದ್ದು, ಇಬ್ಬರೂ ನನ್ನ ನಾಯಕರು ಎಂದು ಹೇಳುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದ್ದಾರೆ.

ಮೂಳೆ ಮುರಿತಗೊಂಡಿತ್ತು. ಈಗಷ್ಟೇ ಚೇತರಿಸಿಕೊಂಡಿದ್ದೇನೆ. ಹೀಗಾಗಿ ಪ್ರಚಾರದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ರೇವಣ್ಣ ಹಾಗೂ ಕುಮಾರಸ್ವಾಮಿ ನಡುವೆ ಮನಸ್ತಾಪವಿದೆ ಎಂದು ಯಾರಾದರೂ ಭಾವಿಸಿದರೆ ಅದು ತಪ್ಪು. ನನ್ನ ಕೊನೆಯ ಉಸಿರು ಇರುವವರೆಗೂ ಕುಮಾರಸ್ವಾಮಿ ನನ್ನ ನಾಯಕ ಮತ್ತು ನನ್ನ ಮಕ್ಕಳೂ ಅವರ ನಿರ್ಧಾರಗಳಿಗೆ ಬದ್ಧರಾಗಿದ್ದಾರೆ. ಪಕ್ಷವನ್ನು ಹೇಗೆ ಮೇಲೆತ್ತಬೇಕೆಂಬುದು ಎಚ್‌ಡಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರಿಗೆ ಹೇಗೆ ಗೊತ್ತಿದೆ. 1989 ರಲ್ಲಿ ಜೆಡಿಎಸ್ ಎರಡು ಸ್ಥಾನಗಳನ್ನು ಗೆದ್ದಾಗ ಹಾಗೂ ದೇವೇಗೌಡರು ಸೋಲು ಕಂಡಾಗ ಅವರ ರಾಜಕೀಯ ಜೀವನಕ್ಕೆ ಅಂತ್ಯವಾಗುತ್ತದೆ ಎಂದು ಕೆಲವರು ಭವಿಷ್ಯ ನುಡಿದಿದ್ದರು. ನಂತರ ಏನಾಯಿತು ನಿಮಗೇ ಗೊತ್ತಿದೆ ಎಂದು ಹೇಳಿದರು.

ಕಾಂಗ್ರೆಸ್ ನವರು ಸಿಪಿ ಯೋಗೇಶ್ವರ್ ರನ್ನು ಕೈಕಾಲು ಕಟ್ಟಿ ಕರೆದುಕೊಂಡು ಹೋದರು. ಸಿಪಿವೈಗೆ ಉಜ್ವಲ ಭವಿಷ್ಯ ನೀಡಲಿ. ಸಿಪಿ ಯೋಗೇಶ್ವರ್ ಒಳ್ಳೆಯ ಕೆಲಸ ಮಾಡಲಿ ಅವರನ್ನ ಮಂತ್ರಿ ಮಾಡಲಿ. ನಿಖಿಲ್ ಗೆ ಭವಿಷ್ಯವಿದೆ ಅವನಿಗೆ ವಯಸ್ಸಾಗಿಲ್ಲ. ಪ್ರಾದೇಶಿಕ ಪಕ್ಷ ಕಟ್ಟಿ ಬೆಳೆಯಲಿ ಎಂದು ಶುಭಹಾರೈಸಿದರು.

ಎಚ್ ಡಿ ರೇವಣ್ಣ
ಚನ್ನಪಟ್ಟಣ ಉಪ ಚುನಾವಣೆ ಫಲಿತಾಂಶ: ನಿಖಿಲ್ ಸೋಲಿನ ಚರ್ಚೆಯಿಂದ ದೂರ ಉಳಿದ ಹೆಚ್.ಡಿ ದೇವೇಗೌಡ!

ಇದೇ ವೇಳೆ ದೇವೇಗೌಡ ಅವರು ರಾಜಕೀಯದಿಂದ ನಿವೃತ್ತಿ ಪಡೆಯುವಂತೆ ಸಲಹೆ ನೀಡಿದ ಯೋಗೇಶ್ವರ್ ವಿರುದ್ಧ ಕಿಡಿಕಾರಿದ ಅವರು, ಮಹಾರಾಷ್ಟ್ರ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿದೆ. ಮೊದಲು ಸೋನಿಯಾ ಗಾಂಧಿ ನಿವೃತ್ತಿಯಾಗಲಿ. ನಂತರ ದೇವೇಗೌಡರು ಯೋಚನೆ ಮಾಡುತ್ತಾರೆಂದು ಹೇಳಿದರು.

ಜಿಟಿ ದೇವೇಗೌಡ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿ, ಜಿಟಿ ದೇವೇಗೌಡರಿಗೆ ಅಸಮಾಧಾನ ಇರೋದು ನಿಜ. ಅವರಿಗೆ ಸ್ಥಾನಮಾನದ ಬಗ್ಗೆ ಅಸಮಾಧಾನ ಇದೆ. ಇವತ್ತು ನಾನು ಸುದ್ದಿಗೋಷ್ಠಿಗೆ ಬರೋಕೆ ಹೇಳಿದ್ದೆ ಅವರು ಬರಲಿಲ್ಲ. ಚನ್ನಪಟ್ಟಣ ಚುನಾವಣೆ ಸಮಯದಲ್ಲಿ ಪ್ರಚಾರಕ್ಕೆ ಬರುವಂತೆ ದೇವೇಗೌಡ ಕರೆ ಮಾಡಿದ್ದು ನಿಜ. ಆದರೆ ಅವರು ಬರಲಿಲ್ಲ, ಪಕ್ಷದ ಮೇಲೆ ಅವರಿಗೆ ಅಸಮಾಧಾನ ಇದೆ. ದೇವೇಗೌಡರು, ಕುಮಾರಸ್ವಾಮಿ ಜೊತೆ ಮಾತಾಡಿದ್ರೆ ಎಲ್ಲವೂ ಸರಿ ಆಗುತ್ತೆ. ಪಕ್ಷದಲ್ಲಿ ಎಲ್ಲವೂ ಸರಿ ಆಗಲಿದೆ ಅಂತ ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ತುರುವೇಕೆರೆ ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ ಅವರು, ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವ ಹುಚ್ಚು ನನಗಿಲ್ಲ, ಶೀಘ್ರದಲ್ಲೇ ಜೆಡಿಎಸ್ ಪುಟಿದೇಳಲಿದ್ದು, ತಿರುಗೇಟು ನೀಡಲಿದೆ ಎಂದರು.

ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ.ಸುರೇಶ್ ಗೌಡ ಮಾತನಾಡಿ, ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಒಕ್ಕಲಿಗ ಸಮುದಾಯದ ಪರಮೋಚ್ಚ ನಾಯಕ ಎಂದು ಹೇಳಿದರು.

ಜಿಟಿ.ದೇವೇಗೌಡ ಅವರ ಪುತ್ರ ಹಾಗೂ ಹುಣಸೂರು ಶಾಸಕ ಜಿ.ಟಿ.ಹರೀಶ್‌ಗೌಡ ಮಾತನಾಡಿ, ಎಲ್ಲಾ ಪಕ್ಷಗಳಲ್ಲಿರುವಂತೆಯೇ ಜೆಡಿಎಸ್‌ನಲ್ಲೂ ಭಿನ್ನಾಭಿಪ್ರಾಯಗಳಿವೆ. ಆದರೆ, ಅದು ಶೀಘ್ರದಲ್ಲೇ ಶಮನಗೊಳ್ಳಲಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com