

ಗದಗ: ರಾಜ್ಯದಲ್ಲಿ ಸಿಎಂ ಕುರ್ಚಿ ಕದನ ಜೋರಾಗಿ ನಡೆಯುತ್ತಿರುವಂತೆಯೇ ಡಿಸಿಎಂ ಡಿಕೆ ಶಿವಕುಮಾರ್ ಬೆಂಬಲಿಗರ ಪಟ್ಟು ಮುಂದುವರೆದಿದೆ. ಈ ಮಧ್ಯೆ ಕಾಶಿಯಿಂದ ಬಂದ ನಾಗ ಸಾಧುಗಳ ಆಶೀರ್ವಾದ ಡಿಸಿಎಂ ಡಿಕೆಶಿ ಅವರಿಗೆ ದೊರೆತಿದೆ.
ಸದಾಶಿವನಗರದಲ್ಲಿರುವ ಅವರ ನಿವಾಸಕ್ಕೆ ಬಂದ ನಾಗ ಸಾಧುಗಳು ಡಿಕೆಶಿ ತಲೆ ಮೇಲೆ ಕೈ ಇಟ್ಟು ಆಶೀರ್ವಾದ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಾಧುಗಳು, ಶಿವಕುಮಾರ್ ಸಿಎಂ ಆಗಲೆಂದು ಆಶೀರ್ವಾದ ಮಾಡಿದ್ದೇನೆ. ಅವರು ಮುಂದಿನ ಸಿಎಂ ಆಗ್ತಾರೆ ಎಂದು ಹೇಳಿ ತೆರಳಿದ್ದಾರೆ.
ಮತ್ತೊಂದೆಡೆ ಡಿಕೆ ಶಿವಕುಮಾರ್ ಅವರೇ ಮುಂದಿನ ಸಿಎಂ ಆಗಲಿದ್ದಾರೆ ಎಂದು ಗದಗದ ರಾಚೋಟೇಶ್ವರ ನಗರದ ನಿವಾಸಿ, ಹುಲಿಗೆಮ್ಮ ದೇವಿಯ ಜೋಗತಿ ಭೈಲಮ್ಮ ಬಾಳಮಣ್ಣ ಭವಿಷ್ಯ ನುಡಿದಿದ್ದಾರೆ. ಈ ಭವಿಷ್ಯ ಈಗ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಗದ್ದುಗೆ ಹಾಕಿ ದೇವಿ ಕೊಡ ಎತ್ತುವ ಮೂಲಕ ಜೋಗತಿ ಅಮ್ಮ ಭವಿಷ್ಯ ನುಡಿದಿದ್ದಾರೆ. ಹುಲಿಗೆಮ್ಮ ದೇವಿ ನೀಡಿರುವ ಭವಿಷ್ಯ ಸುಳ್ಳು ಆಗುವುದಿಲ್ಲ ಎಂದು ಜೋಗತಿ ಹೇಳಿದ್ದಾರೆ. ಡಿಕೆ ಶಿವಕುಮಾರ್ ಅವರೇ ನೀವು ಚಿಂತೆ ಮಾಡಬೇಡಿ ಸಿಎಂ ಆಗುತ್ತೀರಿ. ಎರಡೂವರೆ ತಿಂಗಳ ಒಳಗಾಗಿ ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ. ಆದರೆ, ಹುಲಿಗೆಮ್ಮ ದೇವಿ ನೆನೆಪಿಸಿಕೊಂಡು ಮುಂದಿನ ಹೆಜ್ಜೆ ಇಡಬೇಕು. ಖುಷಿ ಖುಷಿಯಿಂದ ಡಿಕೆಶಿಗೆ ಸಿದ್ದರಾಮಯ್ಯ ಸ್ಥಾನ ಬಿಟ್ಟುಕೊಡುತ್ತಾರೆ ಎಂದು ಜೋಗತಿ ಭವಿಷ್ಯ ಹೇಳಿದ್ದಾರೆ.
ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಅಯ್ಯಪ್ಪ ಮಾಲಾಧಾರಿಗಳು ಡಿಕೆ ಶಿವಕುಮಾರ್ ಮುಂದಿನ ಸಿಎಂ ಆಗಲಿ ಎಂದು ವಿಶೇಷ ಪೂಜೆ ಸಲ್ಲಿಸಿದ್ದಾರೆ.
Advertisement