

ಹಳಿಯಾಳ: ಹೆಣ್ಣು ಮಕ್ಕಳಿಲ್ಲದ ದಂಪತಿಯೊಬ್ಬರು ತಮ್ಮ ಮನೆಯ ಶ್ವಾನವನ್ನೇ ತಮ್ಮ ಮಗಳು ಎಂದು ಸಾಕಿ ಅದರ ಚೊಚ್ಚಲ ಸೀಮಂತವನ್ನು ಅದ್ದೂರಿಯಾಗಿ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ನಡೆದಿದೆ.
ಹಳಿಯಾಳ ನಗರದ ಪ್ರೇಮಾ ಮತ್ತು ಪ್ರಭು ಶಿಗ್ಲಿ ದಂಪತಿಗೆ ಹೆಣ್ಣು ಮಕ್ಕಳಿರಲಿಲ್ಲ. ಹೀಗಾಗಿ ಸ್ಥಳೀಯ ಬೀದಿ ನಾಯಿ ಮರಿಯೊಂದನ್ನು ತಂದು ಮನೆಯಲ್ಲಿ ತಮ್ಮ ಮಕ್ಕಳಂತೆ ಸಾಕಿದ್ದಾರೆ. ಅದಕ್ಕೆ ಸೋನಿ ಎಂದು ಹೆಸರಿಟ್ಟಿದ್ದರು.
ಇದೀಗ ಅದು ದೊಡ್ಡದಾಗಿದ್ದು ಗರ್ಭಧರಿಸಿದೆ. ಹೀಗಾಗಿ ತಮ್ಮ ಸಂತಸ ಹಂಚಿಕೊಳ್ಳಲು ಸೀಮಂತವನ್ನು ಅದ್ದೂರಿಯಾಗಿ ಆಚರಿಸಿದ್ದು, ಮನೆಯಲ್ಲಿ ಅದರ ಇಷ್ಟದ ತಿನಿಸು ಜೊತೆ ಆಭರಣ, ಸೀರೆಗಳಿಂದ ಸಿಂಗರಿಸಿ, ಆಪ್ತರನ್ನು ಕರೆದು ಮನುಷ್ಯರಿಗೆ ಸೀಮಂತ ಮಾಡುವಂತೆ ಸೀಮಂತ ನೆರವೇರಿಸಿದ್ದಾರೆ.
ಒಂದುವರೆ ವರ್ಷ ವಯಸ್ಸಿನ ಸೋನಿ ಸದ್ಯ ಈ ಮನೆಯ ಮುದ್ದಿನ ಮಗಳಾಗಿದ್ದು, ಚೊಚ್ಚಲ ಗರ್ಭಿಣಿಯಾಗಿದ್ದಾಳೆ. ಇನ್ನು ಕೆಲವೆ ದಿನಗಳಲ್ಲಿ ಮರಿಗಳಿಗೆ ಜನ್ಮ ನೀಡಲಿದ್ದಾಳೆ.
ಸೋನಿಯ ಪ್ರೀತಿ ಮತ್ತು ಸ್ವಭಾವಕ್ಕೆ ಮಾರುಹೋದ ಶಿಗ್ಲಿ ಕುಟುಂಬವು ಶುಕ್ರವಾರ ರಾತ್ರಿ ಪ್ರೀತಿಯ ಸಾಕು ನಾಯಿಗೆ ಸಾಂಪ್ರದಾಯಿಕವಾಗಿ ಸೀಮಂತ ಕಾರ್ಯ ನೆರವೆರಿಸಿದೆ.
ಇದು ಅವಳ ಮೊದಲ ಗರ್ಭಧಾರಣೆ. ನಮಗೆ ಹೆಣ್ಣು ಮಗುವಿಲ್ಲ. ಸೋನಿ ನಮ್ಮ ಮಗಳಂತೆ. ನಮಗೆ ಹೆಣ್ಣು ಮಗುವಿದ್ದರೆ, ನಾವು ಅದೇ ರೀತಿಯಲ್ಲಿ ಸೀಮತ ಮಾಡುತ್ತಿದ್ದೆವು. ಹೀಗಾಗಿ ಸೋನಿಯನ್ನು ನಮ್ಮ ಮಗಳಂತೆ ಎಂದುಕೊಂಡು ಸೀಮಂತ ಮಾಡಿದ್ದೇವೆ. ಸೋನಿ ನಮ್ಮ ಕುಟುಂಬದ ಭಾಗವಾಗಿದ್ದಾಳೆ. ಅವಳು ನಮ್ಮ ಮನೆಗೆ ಬಂದ ಬಳಿಕ ಎಲ್ಲವೂ ಬದಲಾಯಿತು. ನಮಗೆ ಸಂತೋಷ ತಂದಿದ್ದಾಳೆ. ನಾವು ಅವಳ ತಾಯ್ತನವನ್ನು ಆಚರಿಸಲು ಬಯಸಿದ್ದೇವೆಂದು ಪ್ರೇಮಾ ಅವರು ಹೇಳಿದ್ದಾರೆ.
Advertisement