

ಬೆಂಗಳೂರು: ರಾಜ್ಯದಲ್ಲಿ ಒಂಬತ್ತು ಕೈಗಾರಿಕಾ ಪಾರ್ಕ್‌ಗಳನ್ನು ಸ್ಥಾಪಿಸುವ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌ಡಿ ಕುಮಾರಸ್ವಾಮಿ ಅವರ ಪ್ರಸ್ತಾವನೆಗೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.
ಸ್ಥಾಪಿತ ನಿಯಮಗಳ ಅಡಿಯಲ್ಲಿ ಅಗತ್ಯ ಕ್ರಮಕ್ಕಾಗಿ ಈ ವಿಷಯವನ್ನು ಸಂಬಂಧಪಟ್ಟ ಇಲಾಖೆಗೆ ಕಳುಹಿಸಲಾಗಿದೆ ಎಂದು ಗೋಯಲ್ ದೃಢಪಡಿಸಿದ್ದಾರೆಂದು ಕುಮಾರಸ್ವಾಮಿ ಅವರ ಕಚೇರಿಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ನವೆಂಬರ್ 13 ರಂದು, ಕುಮಾರಸ್ವಾಮಿ ಅವರು ಬೀದರ್, ರಾಯಚೂರು, ಹುಬ್ಬಳ್ಳಿ-ಧಾರವಾಡ, ಮೈಸೂರು, ಹಾಸನ, ಕೋಲಾರ, ಮಂಗಳೂರು, ಚಾಮರಾಜನಗರ ಮತ್ತು ಮಂಡ್ಯದಲ್ಲಿ ಕೈಗಾರಿಕಾ ಪಾರ್ಕ್‌ಗಳನ್ನು ಸ್ಥಾಪಿಸುವಂತೆ ಮನವಿ ಮಾಡಿ ಗೋಯಲ್ ಅವರಿಗೆ ಮನವಿ ಸಲ್ಲಿಸಿದ್ದರು.
ಈ ಕಾರಿಡಾರ್ ನಿರ್ಮಾಣದಿಂದ ರಾಜ್ಯದಾದ್ಯಂತ ಉದ್ಯಮ ವಲಯ ಬೆಳೆಯಲು ಮತ್ತು ಉದ್ಯೋಗಾವಕಾಶ ಹೆಚ್ಚಲು ಸಾಧ್ಯವಾಗುತ್ತದೆ ಎಂಬಿತ್ಯಾದಿ ಪ್ರಯೋಜನಗಳನ್ನು ಗೋಯಲ್ ಅವರಿಗೆ ಕುಮಾರಸ್ವಾಮಿ ಅಂದು ವಿವರಿಸಿದ್ದರು.
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕೈಗಾರಿಕಾ ಪಾರ್ಕ್‌ಗಳನ್ನು ನಿರ್ಮಿಸಲು ಪೂರಕವಾಗುವಂತಹ ಹಲವು ಪೂರಕ ಸಂಪನ್ಮೂಲಗಳು, ಸಾಗಣೆ ವ್ಯವಸ್ಥೆ ಇತ್ಯಾದಿ ಅಂಶಗಳಿವೆ. ಈ ಜಿಲ್ಲೆಗಳಲ್ಲಿ ಬೃಹತ್ ಮಟ್ಟದಲ್ಲಿ ಕೈಗಾರಿಕಾ ಅಭಿವೃದ್ಧಿ ಸಾಧಿಸಲು ಅವಕಾಶ ಇದೆ. ಹಾಗೆಯೇ, ರಾಜ್ಯದಲ್ಲಿ ಸಮತೋಲಿತವಾದ ಪ್ರಾದೇಶಿಕ ಬೆಳವಣಿಗೆಯೂ ಆಗುತ್ತದೆ ಎಂದು ಕುಮಾರಸ್ವಾಮಿ ಅಂದು ವಾಣಿಜ್ಯ ಸಚಿವರಿಗೆ ಮನದಟ್ಟು ಮಾಡಿದ್ದರು.
ಕೈಗಾರಿಕಾ ಪಾರ್ಕ್‌ಗಳನ್ನು ಸ್ಥಾಪಿಸಲು 9 ಜಿಲ್ಲೆಗಳನ್ನು ಪ್ರಸ್ತಾಪಿಸಿರುವ ಕುಮಾರಸ್ವಾಮಿ, ಕೇಂದ್ರ ಪ್ರಾಯೋಜಿತ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆಯ ಚೌಕಟ್ಟಿನಡಿ ಪರಿಗಣಿಸಬೇಕು ಎಂದೂ ಕುಮಾರಸ್ವಾಮಿ ಕೋರಿಕೊಂಡಿದ್ದರು.
ಈ ಪ್ರಸ್ತಾವನೆಯನ್ನು ಸ್ವೀಕರಿಸಿರುವ ಪೀಯೂಶ್ ಗೋಯಲ್ ಅವರು, ಕರ್ನಾಟಕದ ಅಭಿವೃದ್ದಿಗೆ ಇದು ಪರಿವರ್ತನಾತ್ಮಕ ಪರಿಕಲ್ಪನೆ ಎಂದು ಶ್ಲಾಘಿಸಿದ್ದರು.
ರಾಜ್ಯದ ಪ್ರಾದೇಶೀಕ ಸಮತೋಲಿತ ಕೈಗಾರಿಕಾ ಅಭಿವೃದ್ಧಿಗೆ ಇದು ಪೂರಕವಾಗಿದೆ. ರಚನಾತ್ಮಕವಾದ ಕೇಂದ್ರದ ನೀತಿಗಳನ್ನು ಕಾರ್ಯರೂಪಕ್ಕೆ ತರಲು ಈ ಯೋಜನೆ ಪೂರಕವಾಗಿದೆ ಎಂದು ಕುಮಾರಸ್ವಾಮಿ ಅವರಿಗೆ ಪತ್ರದ ಮೂಲಕ ಗೋಯಲ್ ಉತ್ತರಿಸಿದ್ದಾರೆ. ಈ ಮೂಲಕ ರಾಜ್ಯದ 9 ಜಿಲ್ಲೆಗಳಲ್ಲಿ ಕೈಗಾರಿಕಾ ಪಾರ್ಕ್ ನಿರ್ಮಿಸುವ ಆಶಯ ಈಡೇರುವ ಸಾಧ್ಯತೆ ಇದೆ.
Advertisement