

ಹಾವೇರಿ : ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ತೀವ್ರವಾದ ಚರ್ಚೆ ನಡೆಯುತ್ತಿರುವಂತೆಯೇ ಮಠಾಧೀಶರು ಇದೀಗ ಅಖಾಡ ಪ್ರವೇಶಿಸಿದ್ದಾರೆ.ಡಿಕೆ ಶಿವಕುಮಾರ್ ಪರ ಒಕ್ಕಲಿಗ ಸಮುದಾಯದ ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಬ್ಯಾಟಿಂಗ್ ಮಾಡುತ್ತಿದ್ದಂತೆಯೇ ಇದೀಗ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಬೆಂಬಲ ಘೋಷಿಸಿದ್ದಾರೆ.
ನಿರ್ಮಲಾನಂದ ಸ್ವಾಮೀಜಿ ಹೇಳಿಕೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ನಿರಂಜನಾನಂದಪುರಿ ಸ್ವಾಮೀಜಿ, ಮಠಾಧೀಶರು ಹೇಳಿದ ತಕ್ಷಣ, ಅವರನ್ನು ಹೇಳಿದವರನ್ನು ಮುಖ್ಯಮಂತ್ರಿ ಮಾಡಲು ಸಂವಿಧಾನದಲ್ಲಿ ಅವಕಾಶ ಇದೆಯಾ? ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಬದಲಾವಣೆ ಮಾಡುವುದು ಹಾಗೂ ಆಯ್ಕೆ ಮಾಡುವುದು ಶಾಸಕರಿಗೆ ಇರುವ ಅಧಿಕಾರ. ಯಾರು ಸಿಎಂ ಆಗಬೇಕು ಎಂದು ಶಾಸಕರು ನಿರ್ಣಯ ಮಾಡುತ್ತಾರೆ. ಮುಖ್ಯಮಂತ್ರಿ ಯಾರಾಗಬೇಕು ಎಂಬ ಬಗ್ಗೆ ಕಾಂಗ್ರೆಸ್ ಪಕ್ಷದ ನಾಯಕರು ಚರ್ಚೆ ಮಾಡಿ ಸೂಕ್ತ ನಿರ್ಣಯ ಕೈಗೊಳ್ಳುತ್ತಾರೆ. ಪಕ್ಷದ ವಿಚಾರಗಳಲ್ಲಿ ಸ್ವಾಮೀಜಿಗಳು ಮಧ್ಯ ಪ್ರವೇಶಿಸಿ ಗೊಂದಲ ಸೃಷ್ಟಿಸುವುದು ಯಾವ ಮಠಾಧೀಶರಿಗೂ ಸೂಕ್ತವಲ್ಲ ಎಂದರು.
ಸಿದ್ದರಾಮಯ್ಯನವರನ್ನು ಕುರುಬ ಸಮುದಾಯದ ವ್ಯಕ್ತಿಯಾಗಿ ನೋಡುತ್ತಿಲ್ಲ. ರಾಜ್ಯದ ಪ್ರತಿನಿಧಿಯಾಗಿ ಸಮರ್ಥವಾಗಿ ಆಡಳಿತವನ್ನು ಅವರು ಮಾಡಿದ್ದಾರೆ. ಪಕ್ಷದ ತೀರ್ಮಾನಕ್ಕೆ ಬದ್ಧರಾಗಿ ಇರುತ್ತೇವೆ ಎಂದೂ ಸಹ ಹೇಳಿದ್ದಾರೆ. ಮಠಾಧೀಶರು ಧಾರ್ಮಿಕ ಪ್ರತಿನಿಧಿಗಳು.ಈ ರಾಜ್ಯದಲ್ಲಿ ಹಲವಾರು ಸಮುದಾಯಗಳಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ. ಹಲವಾರು ಸಮುದಾಯಗಳು ಉನ್ನತ ಹುದ್ದೆಯ ಹಪಾಹಪಿಯಲ್ಲಿದ್ದಾರೆ. ಪಕ್ಷದವರು ಸೂಕ್ತ ತೀರ್ಮಾನ ಕೈಗೊಳ್ಳಲು ನಾವು ಅವಕಾಶ ಕೊಡಬೇಕು ಎಂದರು.
ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ನಾವು ಸಿದ್ದರಾಮಯ್ಯ ಅವರ ಪರವಾಗಿ ಸದಾ ಇರುತ್ತೇವೆ. ಸಾಮಾಜಿಕ ನ್ಯಾಯ ಕಾಪಾಡುವ ರಾಜಕಾರಣಿ ಬಂದರೆ ಅವರ ಜತೆ ನಮ್ಮವರು ಇರುತ್ತಾರೆ. ಸ್ವಾಮೀಜಿಯವರು ಜಾತಿ ಹಿನ್ನೆಲೆಯಲ್ಲಿ ಮಾತನಾಡಬಾರದಿತ್ತು. ಅದು ಅವರ ಸ್ಥಾನಕ್ಕೆ ಒಳ್ಳೆಯದಲ್ಲ. ಇತರ ಸಮುದಾಯಗಳನ್ನು ಅವಮಾನಿಸಿದಂತೆ ಆಗುತ್ತದೆ ಎಂದು ಕುಟುಕಿದರು.
Advertisement