ಉಡುಪಿಯಲ್ಲಿ ಪ್ರಧಾನಿ 'ನವ ಸಂಕಲ್ಪ': ದೇಶದ ಅಭಿವೃದ್ಧಿಗೆ 9 ಸೂತ್ರಗಳ ಪಾಲಿಸುವಂತೆ ಮೋದಿ ಕರೆ
ಉಡುಪಿ: ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಹಮ್ಮಿಕೊಂಡ ಲಕ್ಷ ಕಂಠ ಗೀತಾ ಪಠಣ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನವ ಸಂಕಲ್ಪ ಮಾಡಿದ್ದು, ದೇಶದ ಅಭಿವೃದ್ಧಿಗೆ 9 ಸೂತ್ರಗಳನ್ನು ಒತ್ತಿ ಹೇಳಿದ್ದಾರೆ.
ಕೃಷ್ಣನ ದರ್ಶನ ಪಡೆದು, ನೆರೆದಿದ್ದ ಜನರನ್ನುದ್ದೇಶಿಸಿ ಭಾಷಣ ಮಾಡಿದ ಅವರು, ಎಲ್ಲರೂ ಈ ಒಂಬತ್ತು ಸಂಕಲ್ಪ ಮಾಡಿ, ವರ್ತಮಾನ ಮತ್ತು ಭವಿಷ್ಯಕ್ಕೆ ಇವು ಅಗತ್ಯ ಎಂದು ಒತ್ತಿ ಹೇಳಿದರು.
ಮೋದಿಯವರು ಹೇಳಿದ ಮೊದಲ ಮೂರು ಸಂಕಲ್ಪ ಪರಿಸರಕ್ಕೆ ಸಂಬಂಧಿಸಿದ್ದಾಗಿದೆ. 'ಜಲ ಸಂರಕ್ಷಣೆ'. ನೀರಿಲ್ಲದೆ ಜೀವನ ಇಲ್ಲ, ಹಾಗಾಗಿ ಪ್ರತಿ ಹನಿ ನೀರನ್ನೂ ಉಳಿಸೋದು ನಮ್ಮ ಆದ್ಯತೆ ಆಗಬೇಕು. ಎರಡನೇದು ಮರ ಬೆಳೆಸುವುದು, ತಾಯಿಯ ಹೆಸರಲ್ಲಿ ಒಂದು ಮರ ಅಭಿಯಾನ ಆರಂಭಿಸಿ. ಮೂರನೇ ಸಂಕಲ್ಪ, ಪ್ರತಿಯೊಬ್ಬರೂ ಒಂದೊಂದು ಗಿಡ ನೆಟ್ಟರೆ ದೇಶ ಹಸಿರಾಗುತ್ತೆ.
ಇದೇ ವೇಳೆ ರೈತರಿಗೆ ಒಂದು ಕಿವಿಮಾತು ಹೇಳಿದರು. ನಾಲ್ಕನೇ ಸಂಕಲ್ಪವಾಗಿ ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳಿ ಎಂದು ಹೇಳಿದರು. 'ನ್ಯಾಚುರಲ್ ಫಾರ್ಮಿಂಗ್'. ಕೆಮಿಕಲ್ ಹಾಕಿ ಮಣ್ಣು ಹಾಳು ಮಾಡೋ ಬದಲು, ನೈಸರ್ಗಿಕ ಕೃಷಿಗೆ ಒತ್ತು ಕೊಡಿ. ವೋಕಲ್–ಲೋಕಲ್ ಮಂತ್ರ ನಮ್ಮದಾಗಲಿದೆ ಎಂದು ಹೇಳಿದರು.
5ನೇ ಸಂಕಲ್ಪ 'ಸ್ವದೇಶಿ ವಸ್ತುಗಳ ಬಳಕೆ'ಗೆ ಒತ್ತು ಕೊಡಿ ಎಂದು ತಿಳಿಸಿದರು. ಇದು ನಮ್ಮ ದುಡ್ಡು ನಮ್ಮಲ್ಲೇ ಇರುತ್ತದೆ. ಹೀಗಾದರೆ 'ಬಡವರ ಬದುಕು ಬದಲಾವಣೆ' ಆಗಲು ಸಾಧ್ಯ. ಬಡವರು ಉದ್ದಾರ ಆದರೆ, ದೇಶ ತಾನಾಗೇ ಮೇಲೆ ಬರುತ್ತದೆ ಎಂದು ತಿಳಿಸಿದರು.
ಆರನೇ ಸಂಕಲ್ಪ, ಆರೋಗ್ಯಪೂರ್ಣ ಜೀವನ ಶೈಲಿ ಅಳವಡಿಸಿಕೊಳ್ಳೋಣ. ಊಟದಲ್ಲಿ ಎಣ್ಣೆ ಕಡಿಮೆ ಮಾಡೋಣ, ಸಿರಿಧಾನ್ಯ ಬಳಸೋಣ. ಏಳನೇ ಸಂಕಲ್ಪ: ಯೋಗ ಅಳವಡಿಸಿಕೊಳ್ಳಿ, ಎಲ್ಲರೂ ಯೋಗಿಗಳಾಗಿ. ಆರೋಗ್ಯವೇ ಭಾಗ್ಯ ಅಲ್ವಾ? ಅದ್ಕೆ ಫಿಟ್ ಆಗಿರೋಕೆ 'ಯೋಗ' ಮಾಡಿ, ಫಿಟ್ನೆಸ್ ಕಡೆ ಗಮನ ಕೊಡಿ ಎಂದು ಕರೆ ನೀಡಿದರು.
ಎಂಟನೇ ಸಂಕಲ್ಪ: ಹಸ್ತಪ್ರತಿ ಸಂರಕ್ಷಣೆಗೆ ಸಹಯೋಗ ನೀಡಿ. ಒಂಬತ್ತನೇ ಸಂಕಲ್ಪ: ಕನಿಷ್ಠ ಪಕ್ಷ ದೇಶದ 25 ಪುಣ್ಯ ಕ್ಷೇತ್ರಗಳ ದರ್ಶನ ಮಾಡುತ್ತೇನೆ ಎಂಬ ಸಂಕಲ್ಪ ಮಾಡಿ. 2047 ಅಮೃತ ಕಾಲದ ಗುರಿಯನ್ನು ನನಸಾಗಿಸಲು ಭಾರತೀಯರು ಎಲ್ಲರೂ ತಮ್ಮ ಕರ್ತವ್ಯ ನಿಭಾಯಿಸಬೇಕು. ವಿಕಸಿತ ಕರ್ನಾಟಕ; ವಿಕಸಿತ ಭಾರತ ಸಂಕಲ್ಪ ನಮ್ಮದಾಗಲಿ ಎಂದರು.
ಇದೇ ವೇಳೆ ತಮ್ಮ ಭಾವಚಿತ್ರ ಹಿಡಿದು ನಿಂತಿದ್ದವರಿಂದ ಅವುಗಳನ್ನು ಪಡೆದುಕೊಳ್ಳುವಂತೆ ಎಸ್‌ಪಿಜಿ ಅವರಿಗೆ ಪ್ರಧಾನಿ ಮೋದಿಯವರು ಸೂಚಿಸಿದರು. ಫೋಟೋ ಹಿಂದೆ ವಿಳಾಸ ಬರೆಯಿರಿ. ನಾನು ಅಭಿನಂದನಾ ಪತ್ರ ಕಳಿಸುವೆ ಎಂದು ಹೇಳುವ ಮೂಲಕ ನೆರೆದಿದ್ದವರ ಮನಸ್ಸನ್ನು ಗೆದ್ದರು.
ಲಕ್ಷ ಕಂಠ ಗೀತಾ ಪಠಣ ಅಭಿಯಾನ ಹಮ್ಮಿಕೊಂಡಿರುವ ಸುಗುಣೇಂದ್ರ ಶ್ರೀಗೆ ಅಭಿನಂದನೆ. ಈದು ಸನಾತನ ಸಂಸ್ಕೃತಿ ಅಭಿಯಾನ. ಇದರಿಂದ ನನಗೆ ಬಹಳ ಪ್ರೇರಣೆ ಸಿಕ್ಕಿದೆ. ಭಗವದ್ಗೀತೆಯೊಂದಿಗೆ ನವಪೀಳಿಗೆಯನ್ನು ಜೋಡಿಸುವ ಸತ್ಕಾರ್ಯ ಇದು.
25 ನವೆಂಬರ್‌ರಂದು ನಾನು ಅಯೋಧ್ಯೆಯಲ್ಲಿದ್ದೆ. ಅಯೋಧ್ಯೆಯ ರಾಮಮಂದಿರದ ಮೇಲೆ ಧರ್ಮಧ್ವಜದ ಸ್ಥಾಪನೆಯಾಗಿದೆ. ಅಯೋಧ್ಯೆಯಿಂದ ಉಡುಪಿ ವರೆಗೆ ಅಸಂಖ್ಯ ರಾಮಭಕ್ತರು ಸಂತುಷ್ಟರಾಗಿದ್ದಾರೆ. ರಾಮಮಂದಿರ ಹೋರಾಟದ ಹಾದಿ ಎಲ್ಲರಿಗೂ ಗೊತ್ತಿದೆ ಎಂದು ತಿಳಿಸಿದರು.


