
ಬೆಂಗಳೂರು: ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ಶೀಘ್ರಗತಿಯಲ್ಲಿ ಪೂರ್ಣಗೊಳಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಸಮೀಕ್ಷೆಗಾಗಿ ಅರಣ್ಯ, ಆರೋಗ್ಯ, ಶಿಕ್ಷಣ ಇಲಾಖೆ ಸಿಬ್ಬಂದಿಗಳನ್ನು ನಿಯೋಜನೆಗೊಳಿಸಿದೆ.
ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (HRMS) ಪೋರ್ಟಲ್‌ನಲ್ಲಿ ಲಭ್ಯವಿರುವ ಸರ್ಕಾರಿ ಸಿಬ್ಬಂದಿಗಳ ಮಾಹಿತಿಯನ್ನು ಬಳಸಿಕೊಂಡಿರುವ ಸರ್ಕಾರ, ಕಚೇರಿಯ ಸಿಬ್ಬಂದಿಗಳಿಗೆ ಪ್ರತ್ಯೇಕ ಸಂದೇಶ ಹಾಗೂ ಇ-ಮೇಲ್ ಗಳನ್ನು ರವಾನಿಸಿದ್ದು, ಸಮೀಕ್ಷೆಗೆ ನಿಯೋಜನೆಗೊಂಡಿರುವ ಹಾಗೂ ಹಾಜರಾಗದಿದ್ದರೆ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದೆ ಎಂದು ತಿಳಿಸಿದೆ.
ಸಂದೇಶದಲ್ಲಿ ಅಕ್ಟೋಬರ್ 3 ರಂದು ತರಬೇತಿಯಲ್ಲಿ ಭಾಗವಹಿಸಲು ಮತ್ತು ಅಕ್ಟೋಬರ್ 4 ರಿಂದ ಜನಗಣತಿ ಸಮೀಕ್ಷೆಯಲ್ಲಿ ಭಾಗವಹಿಸುವಂತೆ ಸಿಬ್ಬಂದಿಗಳಿಗೆ ಆದೇಶಿಸಿದೆ. ಅಲ್ಲದೆ, ಸಮೀಕ್ಷೆಗೆ ಹಾಜರಾಗುವಲ್ಲಿ ವಿಫಲವಾಗಿದ್ದೇ ಆದರೆ, ಬಿಎನ್ಎಸ್'ನ ಸೆಕ್ಷನ್ 223ರ ಅಡಿಯಲ್ಲಿ ಎಫ್ಐಆರ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆಯುಕ್ತರು ಲಿಖಿತವಾಗಿ ಒಪ್ಪಿಗೆ ನೀಡದ ಹೊರತು ಯಾವುದೇ ವಿನಾಯಿತಿಗಳನ್ನು ನೀಡುವುದಿಲ್ಲ ಎಂದೂ ತಿಳಿಸಿದೆ.
ಸರ್ಕಾರದ ಈ ಸೂಚನೆ ಸರ್ಕಾರಿ ಅಧಿಕಾರಿಗಳಲ್ಲಿ ಬೇಸರ ಹಾಗೂ ಕಳವಳವನ್ನುಂಟು ಮಾಡಿದೆ. ಜನಗಣತಿಗಾಗಿ ಎಲ್ಲಾ ಖಾಯಂ ಸಿಬ್ಬಂದಿಗಳನ್ನು ನಿಯೋಜನೆಗೊಳಿಸಿರುವುದರಿಂದ, ಸರ್ಕಾರಿ ಕೆಲಸವನ್ನು ಗುತ್ತಿಗೆ ನೌಕರರೇ ಮಾಡುವಂತಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅರಣ್ಯ ಸಿಬ್ಬಂದಿಗೆ ಚುನಾವಣಾ ಕರ್ತವ್ಯ ಸೇರಿದಂತೆ ಇತರೆ ಕರ್ತವ್ಯಗಳಿಂದ ವಿನಾಯಿತಿ ನೀಡಲಾಗಿದೆ. ಆದರೂ ಇದೀಗ ಜಾತಗಣತಿಗೆ ನಿಯೋಜನೆಗೊಳಿಸಲಾಗಿದ್ದು, ಮಾನವ-ಪ್ರಾಣಿ ಸಂಘರ್ಷ ಅಥವಾ ಯಾವುದೇ ಅಹಿತಕರ ಘಟನೆ ನಡೆದರೆ, ನಾವು ಜವಾಬ್ದಾರರಲ್ಲ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆಯುಕ್ತರು, ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯುತ್ತಿದ್ದೇವೆ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾವಲುಗಾರರು, ವೀಕ್ಷಕರು, ರೇಂಜ್ ಫಾರೆಸ್ಟ್ ಅಧಿಕಾರಿಗಳು (ಆರ್‌ಎಫ್‌ಒ), ಉಪ ಆರ್‌ಎಫ್‌ಒ, ಬೇಟೆ ನಿಗ್ರಹ ತಂಡಗಳು, ಚಿರತೆ ಮತ್ತು ಆನೆ ಕಾರ್ಯಪಡೆ ಸಿಬ್ಬಂದಿ ಸೇರಿದಂತೆ ಎಲ್ಲಾ ಖಾಯಂ ಸಿಬ್ಬಂದಿಯನ್ನು ಜನಗಣತಿ ಕಾರ್ಯಕ್ಕಾಗಿ ನಿಯೋಜಿಸಲಾಗಿದೆ. ಸಮೀಕ್ಷೆ ಬಳಿಕ ಕರ್ತವ್ಯ ನಿರ್ವಹಿಸುವಂತೆ ಪಾಲಿಕೆ ಸಲಹೆ ನೀಡಿದೆ. ಆದರೆ, ಅರಣ್ಯ ಇಲಾಖೆಯ ಕೆಲಸಗಳು ಕುರ್ಚಿ ಮೇಲೆ ಕುಳಿತು ಮಾಡುವಂತಹ ಕೆಲಸವಲ್ಲ. 24/7 ಗ್ರೌಂಡ್ ವರ್ಕ್ ಆಗಿರುತ್ತದೆ ಎಂದು ಹೇಳಿದ್ದಾರೆ.
ಇನ್ನು ಆರೋಗ್ಯಯ ಇಲಾಖೆಯ ಅಧಿಕಾರಿಗಳೂ ಕೂಡ ಇದೇ ರೀತಿಯ ಕಳವಳ ವ್ಯಕ್ತಪಡಿಸಿದ್ದಾರೆ. ತಂತ್ರಜ್ಞರು, ಔಷಧಿಕಾರರು, ಕ್ಲೆರಿಕಲ್ ಮತ್ತು ತಾಂತ್ರಿಕ ಸಿಬ್ಬಂದಿ ಸೇರಿದಂತೆ ಸಿಬ್ಬಂದಿಯನ್ನು ಜನಗಣತಿಗಾಗಿ ನಿಯೋಜಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಈಗಾಗಲೇ ಹಲವು ಸಮಸ್ಯೆಗಳಿದ್ದು, ಸಾಕಷ್ಟು ದೂರುಗಳೂ ಇವೆ. ಇದೀಗ ಕರ್ತವ್ಯದಿಂದ ಸಿಬ್ಬಂದಿಗಳನ್ನು ದೂರಾಗಿಸುವುದರಿಂದ ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ. ಈಗಾಗಲೇ ಸಿಬ್ಬಂದಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ, ವಿನಾಯಿತಿಗಾಗಿ ಮುಖ್ಯ ಕಾರ್ಯದರ್ಶಿಗೆ ಹಸ್ತಾಂತರಿಸಲಾಗುವುದು" ಎಂದು ಹಿರಿಯ ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದು, ಸರ್ಕಾರ ಶಿಕ್ಷಕರು, ಉಪನ್ಯಾಸಕರ ಕೊರತೆ, ಅತಿಥಿ ಶಿಕ್ಷಕರ ದುಃಸ್ಥಿತಿಯ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಲಿದ್ದಾರೆ,
ದಸರಾ ರಜೆಯ ನಂತರ ಶಾಲೆಗಳು ಮತ್ತೆ ಪುನರಾರಂಭವಾಗುತ್ತಿದ್ದು, ಪರಿಸ್ಥಿತಿ ನಿಭಾಯಿಸುವುದು ಕಷ್ಟಕರವಾಗಲಿದೆ ಎಂದು ಹೇಳಿದ್ದಾರೆ.
ಸಮೀಕ್ಷೆ ಹನ್ನೆಲೆಯಲ್ಲಿ ಈಗಾಗಲೇ "ಶಿಕ್ಷಕರಿಗೆ ರಜಾದಿನಗಳನ್ನು ರದ್ದುಪಡಿಸಲಾಗಿದೆ. ಶಿಕ್ಷಣದ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಲು, ಪ್ರಾಥಮಿಕ ಶಾಲಾ ಶಿಕ್ಷಕರನ್ನು ಮಾತ್ರ ಬಳಸಿಕೊಳ್ಳಬೇಕೆಂದು ನಾವು ಮನವಿ ಮಾಡಿದ್ದೇವೆ. ಆದರೂ ಮಧ್ಯಮ ಮತ್ತು ಪ್ರೌಢಶಾಲಾ ಶಿಕ್ಷಕರನ್ನು ಜನಗಣತಿಗೆ ನಿಯೋಜಿಸಲಾಗಿದೆ. ಎಲ್ಲಾ ಸರ್ಕಾರಿ ಕೆಲಸಗಳಿಗೆ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಶಿಕ್ಷಕರನ್ನು ಬಳಸಲಾಗುತ್ತದೆ. ಶಿಕ್ಷಣದಲ್ಲಿ ಈ ಎರಡು ವಿಭಾಗಗಳು ಬಹಳ ಮುಖ್ಯ ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಮಾತನಾಡಿ, ಸರ್ಕಾರಿ ನೌಕರರನ್ನು ಒಳಗೊಳ್ಳುವ ಬಗ್ಗೆ ಸರ್ಕಾರಿ ಆದೇಶಗಳು ಸ್ಪಷ್ಟವಾಗಿವೆ. ಎರಡು ವಾರಗಳಲ್ಲಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕನಿಷ್ಠ 20,000 ಸಿಬ್ಬಂದಿ ಅಗತ್ಯವಿದೆ, ಸರ್ಕಾರಿ ಸಿಬ್ಬಂದಿ ಭಾಗಿಯಾಗಿದ್ದೇ ಆದರೆ, ಅದು ವಿಶ್ವಾಸಾರ್ಹತೆಯನ್ನು ಖಚಿತಪಡಿಸುತ್ತದೆ ಎಂದು ತಿಳಿಸಿದ್ದಾರೆ.
Advertisement