
ಬೆಂಗಳೂರು: ದಸರಾ ಜಂಬೂ ಸವಾರಿ ಆರಂಭವಾಗುವ ಮುನ್ನ ನಡೆದ ದಸರಾಮೆರವಣಿಗೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಸಚಿವ ಡಾ. ಎಚ್.ಸಿ. ಮಹದೇವಪ್ಪ ಜೀಪ್ನಲ್ಲಿ ಪರೇಡ್ ನಡೆಸಿದ್ದು, ಅದೇ ಜೀಪ್ನಲ್ಲಿ ಮಹದೇವಪ್ಪ ಮೊಮ್ಮಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪ್ರೋಟೋಕಾಲ್ ಉಲ್ಲಂಘನೆ ಆರೋಪ ಕೇಳಿ ಬಂದಿದೆ.
ಆರೋಪಗಳನ್ನು ಸಮಾಜ ಕಲ್ಯಾಣ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್‌ಸಿ ಮಹದೇವಪ್ಪ ಅವರು ನಿರಾಕರಿಸಿದ್ದು, ಯಾವುದೇ ಉಲ್ಲಂಘನೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಲ್ಲಿ ಯಾವ ಪ್ರೋಟೊಕಾಲ್ ಕೂಡ ಉಲ್ಲಂಘನೆಯಾಗಿಲ್ಲ. ಅದು ಪ್ರೋಟೊಕಾಲ್ ವ್ಯಾಪ್ತಿಗೆ ಬರುವುದೇ ಇಲ್ಲ. ಅದು ಪೇರೆಡ್ ಅಲ್ಲ. ಅಲ್ಲಿ ಯಾವ ಧ್ವಜ ವಂದನೆಯೂ ಇರಲಿಲ್ಲ. ಕೇವಲ ಜನರಿಗೆ ವಂದನೆ ಸಲ್ಲಿಸಲು ಎಲ್ಲರೂ ಒಟ್ಟಾಗಿ ಹೋದೆವು ಎಂದು ಹೇಳಿದ್ದಾರೆ.
'ಜನರ ದಸರಾ' ಅದ್ಧೂರಿ ಯಶಸ್ಸು ಕಂಡಿದೆ. 11 ದಿನಗಳ ಉತ್ಸವದಲ್ಲಿ 1,000 ಟನ್‌ಗಳಿಗೂ ಹೆಚ್ಚು ಕಸವನ್ನು ಸಂಗ್ರಹಿಸಲಾಗಿದ್ದು, ಸಿಬ್ಬಂದಿಗಳು ಕಠಿಣ ಪರಿಶ್ರಮದಿಂದ ಇಡೀ ಮೈಸೂರು ನಗರವನ್ನು ಸ್ವಚ್ಛಗೊಳಿಸಿದ್ದಾರೆಂದು ತಿಳಿಸಿದರು.
ನಾಯಕತ್ವ ಬದಲಾವಣೆ ವಿಚಾರ ಕುರಿತು ಮಾತನಾಡಿದ ಅವರು, ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ. ನಮ್ಮ ಹೈಕಮಾಂಡ್ ಅಗತ್ಯವಿದ್ದಾಗ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ನಾಯಕತ್ವದ ಜವಾಬ್ದಾರಿ ಪಕ್ಷದ ಹೈಕಮಾಂಡ್‌ನ ಮೇಲಿದೆ ಎಂದು ಹೇಳಿದರು.
ಬಲ್ಲ ಮೂಲಗಳ ಪ್ರಕಾರ, ಮಹಾದೇವಪ್ಪ ಅವರ ಮೊಮ್ಮಗನನ್ನು ತೆರೆದ ಜೀಪಿನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಮತ್ತು ಶಾಸಕ ತನ್ವೀರ್ ಸೇಠ್ ಅವರೊಂದಿಗೆ ಕರೆದುಕೊಂಡು ಹೋಗಿರುವುದನ್ನು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದ್ದು, ಮಾಹಿತಿ ನೀಡುವಂತೆ ನಾಯಕರಿಗೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.
Advertisement