
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಭದ್ರತಾ ವೈಫಲ್ಯ ಮತ್ತೊಮ್ಮೆ ಬಯಲಾಗಿದೆ. ಕುಖ್ಯಾತ ರೌಡಿ ಶೀಟರ್ ಗುಬ್ಬಚ್ಚಿ ಸೀನ ಜೈಲಿನೊಳಗೆಯೇ ಕೇಕ್ ಕತ್ತರಿಸಿ, ಆಪಲ್ ಹಾರ ಹಾಕಿಕೊಂಡು ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಈ ಕುರಿತ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಬೆಳವಣಿಗೆಗೆ ಜೈಲಾಧಿಕಾರಿಗಳ ಕಾರ್ಯವೈಖರಿ ಮತ್ತು ಕೈದಿಗಳಿಗೆ ಸಿಗುತ್ತಿರುವ ರಾಜಾತಿಥ್ಯ ಕುರಿತು ತೀವ್ರ ಆಕ್ರೋಶಗಳು ವ್ಯಕ್ತವಾಗುತ್ತಿವೆ.
ಸರ್ಜಾಪುರ ಠಾಣೆ ರೌಡಿಶೀಟರ್ ಶ್ರೀನಿವಾಸ್ ಅಲಿಯಾಸ್ ಗುಬ್ಬಚ್ಚಿ ಸೀನನ ಹುಟ್ಟು ಹಬ್ಬ ಆಚರಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕುರಿತು ವಿಚಾರಣೆ ನಡೆಸಿ ವರದಿ ನೀಡುವಂತೆ ದಕ್ಷಿಣ ವಲಯ ಡಿಐಜಿ (ಕಾರಾಗೃಹ) ಕೆ.ಸಿ.ದಿವ್ಯಶ್ರೀ ಅವರಿಗೆ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಬಿ.ದಯಾನಂದ್ ಸೂಚಿಸಿದ್ದಾರೆ.
ಹಳೇ ವೈಷಮ್ಯ ಹಿನ್ನೆಲೆಯಲ್ಲಿ ಕಳೆದ ಜನವರಿಯಲ್ಲಿ ಮಾಜಿ ರೌಡಿ ವೆಂಕಟೇಶ್ ನನ್ನು ರೌಡಿ ಗುಬ್ಬಚ್ಚಿ ಸೀನ ಹಾಗೂ ಆತನ ಸಹಚರರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದರು. ಈ ಸಂಬಂಧ ಸೀನನ ತಂಡವನ್ನು ಸರ್ಜಾಪುರಠಾಣೆ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದರು.
ಜೈಲಿನಲ್ಲಿ ತನ್ನ ಸಹಚರರ ಜತೆ ಸೀನ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ 'ಸಾಗರ್' ಹೆಸರಿನ ಖಾತೆಯಲ್ಲಿ ಹಂಚಿಕೊಂಡಿದ್ದನು.
ಜೈಲಿನಲ್ಲಿ ನನ್ನ ಪತಿ ಕೊಲೆ ಪ್ರಕರಣದ ಆರೋಪಿ ಸೀನ ಹಾಗೂ ಆತನ ಬೆಂಬಲಿಗರಿಗೆ ವಿಶೇಷ ಸೌಲಭ್ಯ ನೀಡಲಾಗಿದೆ ಎಂದು ಆರೋಪಿಸಿ ಎಡಿಜಿಪಿ ದಯಾನಂದ್ ಅವರಿಗೆ ಮೃತ ವೆಂಕಟೇಶ್ ಪತ್ನಿ ದೂರು ನೀಡಿದ್ದರು. ಈ ದೂರು ಆಧರಿಸಿ ಎಡಿಜಿಪಿ ಅವರು, ಡಿಐಜಿ ನೇತೃತ್ವದಲ್ಲಿ ವಿಚಾರಣೆಗೆ ಸೂಚಿಸಿದ್ದಾರೆ.
ಕಳೆದ ವರ್ಷ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್ ಹಾಗೂ ಅವರ ಸಹಚರರಿಗೆ ವಿಶೇಷ ಸೌಲಭ್ಯ ನೀಡಿದ ಆರೋಪಕ್ಕೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಅಧಿಕಾರಿ ಮತ್ತು ಸಿಬ್ಬಂದಿ ತುತ್ತಾಗಿದ್ದರು. ಅಲ್ಲದೆ, ದರ್ಶನ್ ಅವರ ಜಾಮೀನು ರದ್ದತಿ ಆದೇಶದಲ್ಲಿ ಜೈಲಿನ ವಿಶೇಷ ಸೌಲಭ್ಯ ವ್ಯವಸ್ಥೆ ಕಲ್ಪಿಸಿದ್ದ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಪ್ರಕರಣ ಮರೆಯುವ ಮುನ್ನವೇ ಕೊಲೆ ಪ್ರಕರಣದ ಆರೋಪಿ ರೌಡಿಗೆ ಹುಟ್ಟುಹಬ್ಬ ಆಚರಣೆಗೆ ಅವಕಾಶ ನೀಡಿದ ಆರೋಪ ಬಂದಿದೆ.
ಏತನ್ಮಧ್ಯೆ ಜೈಲು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತಿಳಿಯದೆ ಜೈಲಿನೊಳಗೆ ಹುಟ್ಟುಹಬ್ಬವನ್ನು ಆಚರಿಸುವುದು ಅಸಾಧ್ಯ ಎಂದು ಜೈಲು ಮೂಲಗಳು ತಿಳಿಸಿವೆ.
ಹಿರಿಯ ಜೈಲು ಅಧಿಕಾರಿಗಳು ಮಾತನಾಡಿ, ರೌಡಿ ಹುಟ್ಟುಹಬ್ಬದ ಆಚರಣೆ ಸಂಬಂಧ ವಿಡಿಯೋ ಎರಡೂರು ತಿಂಗಳ ಹಳೆಯದ್ದಾಗಿರಬಹುದು. ಎಡಿಜಿಪಿ ಅವರಿಗೆ ವೆಂಕಟೇಶ್ ಪತ್ನಿ ದೂರು ಕೊಟ್ಟು 10 ದಿನಗಳು ಕಳೆದಿವೆ. ಹೀಗಾಗಿ ಘಟನೆ ಯಾವಾಗ ನಡೆದಿದೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
Advertisement