
ಬೆಂಗಳೂರು: ಭಾರೀ ಮಳೆ ಮತ್ತು ಬಲವಾದ ಗಾಳಿ ವೇಳೆ ಬೀಳುವ ಸಾಧ್ಯತೆ ಇರುವ ದುರ್ಬಲ ಮರಗಳು ಮತ್ತು ಕೊಂಬೆಗಳನ್ನು ಹುಡುಕಲು ಮತ್ತು ಕತ್ತರಿಸುವ ಕೆಲಸಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ)ಕ್ಕೆ ಇದೀಗ ಸಿಬ್ಬಂದಿಗಳ ಕೊರತೆ ಎದುರಾಗಿದೆ.
ನಗರದಲ್ಲಿ ಭಾರೀ ಮಳೆಯಾದಾಗಲೆಲ್ಲಾ ಮರಗಳು ಧರೆಗುರುಳುವುದು, ಕೊಂಬೆಗಳು ಮುರಿದು ಬೀಳುವುದು ಸಾಮಾನ್ಯವಾಗಿ ಹೋಗಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಮನಸ್ಸು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಇದ್ದರೂ, ಕೆಲಸ ಮಾಡಲು ಸಿಬ್ಬಂದಿಗಳ ಕೊರತೆ ಎದುರಾಗಿದೆ. ಜಿಬಿಎ ಅರಣ್ಯ ವಿಭಾಗದಲ್ಲಿ ಈ ಸಮಸ್ಯೆ ಮೇಲ್ವಿಚಾರಣೆ ಮಾಡಲು ಕೇವಲ 18 ಮಂದಿ ಸಿಬ್ಬಂದಿಗಳಿದ್ದಾರೆಂದು ತಿಳಿದುಬಂದಿದೆ.
ಕೇವಲ 18 ಮಂದಿ ಸಿಬ್ಬಂದಿ ಇಡೀ ನಗರದ ಸಮಸ್ಯೆಗಳನ್ನು ಮೇಲ್ವಿಚಾರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೆಲವು ಪ್ರದೇಶಗಳು ದುರ್ಘಟನೆಗಳಿಗೆ ಸಾಕ್ಷಿಯಾಗುತ್ತಿವೆ.
ನಗರದ ಅನೇಕ ಸ್ಥಳಗಳಲ್ಲಿ ಮರಗಳನ್ನು ಕತ್ತರಿಸದ ಕಾರಣ, ಕೆಲವೆಡೆ ಸಂಚಾರ ಸಿಗ್ನಲ್ ಗಳು ಕಾಣದೆ ಸಮಸ್ಯೆಯಾಗುತ್ತಿದೆ. ಇದು ಸವಾರರು ಹಾಗೂ ಪಾದಚಾರಿಗಳಿಗೆ ಸಂಕಷ್ಟಗಳನ್ನು ಎದುರು ಮಾಡುತ್ತಿದೆ.
ಜಿಬಿಎ ಅರಣ್ಯ ವಿಭಾಗದ ಮಾಹಿತಿಯ ಪ್ರಕಾರ, ಜನವರಿ 2025 ರಿಂದ ನಗರದಲ್ಲಿ 1,122 ಮರಗಳು ಧರೆಗುರುಳಿದ್ದು,. 3,547 ಕೊಂಬೆಗಳು ಬಿದ್ದಿವೆ ಎಂದು ತಿಳಿದುಬಂದಿದೆ. ಭಾನುವಾರ ಓರ್ವ ಮಹಿಳೆ ಕೂಡ ಸಾವನ್ನಪ್ಪಿದ್ದಾರೆ.
ಸ್ಥಳೀಯರ ಮನವಿ ಮೇರೆಗೆ ಸಿಬ್ಬಂದಿಗಳನ್ನು ಮರಗಳ ಕತ್ತರಿಸಲು ಕಳುಹಿಸಲಾಗುತ್ತಿದೆ. ಹೆಚ್ಚಿನ ಸಿಬ್ಬಂದಿಗಳಿದ್ದರೆ, ದೈನಂದಿನ ಕಾರ್ಯಾಚರಣೆ ನಡೆಸಬಹುದು. ಮರ ಬೀಳುವ ಮೊದಲೇ ಕತ್ತರಿಸಬಹುದು. ಅದರಿಂದ ಸಾವು-ನೋವುಗಳನ್ನೂ ತಡೆಯಬಹುದು ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಬಿಎಂಪಿ ಅರಣ್ಯ ವಿಭಾಗದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ತುಷಾರ್ ಗಿರಿನಾಥ್ ಮುಖ್ಯ ಆಯುಕ್ತರಾಗಿದ್ದಾಗ 45-50 ಅರಣ್ಯ ಸಿಬ್ಬಂದಿಯನ್ನು ಕೋರಿದ್ದರು. ಈಗ ಪಾಲಿಕೆಯನ್ನು 5 ಭಾಗಗಳಾಗಿ ವಿಭಜಿಸಲಾಗಿದೆ. ಇದೀಗ ತುಷಾರ್ ಗಿರಿನಾಥ್ ನಗರಾಭಿವೃದ್ಧಿ ಇಲಾಖೆಯ ನೇತೃತ್ವ ವಹಿಸಿರುವುದರಿಂದ ಹೆಚ್ಚಿನ ಸಿಬ್ಬಂದಿ ಸೇರ್ಪಡೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.
"40 ರಿಂದ 50 ವರ್ಷಗಳ ಹಿಂದೆ ನೆಟ್ಟ ಮರಗಳು ದೊಡ್ಡದಾಗಿ ಬೆಳೆದಿವೆ. ಹಳೆಯ ಮತ್ತು ಒಣ ಮರಗಳು ಬೀಳುವ ಸಾಧ್ಯತೆಯಿದೆ. ಹೀಗಾಗಿ ಅವುಗಳನ್ನು ತೆಗೆದುಹಾಕಬೇಕು. ಮರಗಳನ್ನು ಕತ್ತರಿಸಿದ ಬಳಿಕ ಮತ್ತೊಂದು ಮರಗಳನ್ನು ನೆಡುವ ಕೆಲಸವಾಗಬೇಕು. ಮರ ಬಿದ್ದು ಅವಘಡಗಳು ಸಂಭವಿಸಿದಾಗ ಅರಣ್ಯ ಅಧಿಕಾರಿಗಳಿಗೆ ಪಾಲಿಕೆ ಅಧಿಕಾರಿಗಳಿಗೆ ಕಿರುಕುಳ ನೀಡುವ ಬದಲು ಪೊಲೀಸ್ ಇಲಾಖೆ ಕೂಡ ಸಮಸ್ಯೆಯನ್ನು ಬುದ್ಧಿವಂತಿಕೆಯಿಂದ ನಿರ್ವಹಿಸುವಂತೆ ಸೂಚಿಸಬೇಕು.
ನಿಯೋಜನೆ ನಿಮಿತ್ತ ಅರಣ್ಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ಸೀಮಿತಿ ಅವಧಿಗೆ ಮಾತ್ರವೇ ಅವರು ಸೇವೆ ಸಲ್ಲಿಸುತ್ತಾರೆ. ರಸ್ತೆ ಮತ್ತು ಸ್ಥಳದಲ್ಲಿರುವ ಮರಗಳ ನಿಜವಾದ ಪಾಲಕರು ವಾರ್ಡ್ ಎಂಜಿನಿಯರ್‌ಗಳಾಗಿರುತ್ತಾರೆ. ಅವರು ದುರ್ಬಲ ಮರಗಳನ್ನು ಪಟ್ಟಿ ಮಾಡಬೇಕು ಎಂದು ಜಿಬಿಎಯಲ್ಲಿ ಸೇವೆ ಸಲ್ಲಿಸುತ್ತಿರುವ ರೇಂಜ್ ಫಾರೆಸ್ಟ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
Advertisement