
ಬೆಂಗಳೂರು: ಮುಡಾ ಹಗರಣ ಪ್ರಕರಣದಲ್ಲಿ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ 40 ಕೋಟಿ ರೂ. ಮೌಲ್ಯದ ಹೊಸ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಜಾರಿ ನಿರ್ದೇಶನಾಲಯ (ಇಡಿ) ತಿಳಿಸಿದೆ. ಕೆಲವು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸೈಟ್‌ಗಳನ್ನು ಒಳಗೊಂಡಂತೆ 34 ಸ್ಥಿರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅಕ್ಟೋಬರ್ 4ರಂದು ತಾತ್ಕಾಲಿಕ ಆದೇಶ ಹೊರಡಿಸಲಾಗಿತ್ತು ಎಂದು ಇಡಿ ಹೇಳಿದೆ.
ಈ ಆಸ್ತಿಗಳ ಮಾರುಕಟ್ಟೆ ಮೌಲ್ಯ 40.08 ಕೋಟಿ ರೂ. ಎಂದು ಜಾರಿ ನಿರ್ದೇಶನಾಲಯ ಹೇಳಿಕೆಯಲ್ಲಿ ತಿಳಿಸಿದೆ. ಕರ್ನಾಟಕ ಲೋಕಾಯುಕ್ತ ಪೊಲೀಸರ ಎಫ್‌ಐಆರ್ ನಂತರ ಅಖಾಡಕ್ಕೆ ಇಳಿದ ಜಾರಿ ನಿರ್ದೇಶನಾಲಯ ಹಣ ವರ್ಗಾವಣೆ ಕುರಿತಂತೆ ತನಿಖೆ ಶುರು ಮಾಡಿತ್ತು. ಜಾರಿ ನಿರ್ದೇಶನಾಲಯ ಈ ಹಿಂದೆಯೂ ಇದೇ ರೀತಿಯ ಆಸ್ತಿಗಳ ಮುಟ್ಟುಗೋಲು ಆದೇಶಗಳನ್ನು ಹೊರಡಿಸಿತ್ತು. ಈ ತನಿಖೆಯ ಭಾಗವಾಗಿ ಇದುವರೆಗೆ 400 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಕಳೆದ ಸೆಪ್ಟೆಂಬರ್‌ನಲ್ಲಿ ಮಾಜಿ ಮುಡಾ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ನನ್ನು ಇಡಿ ಬಂಧಿಸಿದ್ದು ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿ ಜೈಲಿನಲ್ಲಿದ್ದಾರೆ. ದಿನೇಶ್ ಕುಮಾರ್ ಬಳಿಯ 40.8 ಕೋಟಿ ರೂ. ಮೌಲ್ಯದ 32 ಸೈಟ್‌ಗಳನ್ನು ಇದೀಗ ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ನಕಲಿ ದಾಖಲೆಗಳನ್ನು ದಿನೇಶ್ ಸೃಷ್ಟಿ ಮಾಡಿ ಆ ಮೂಲಕ ಸೈಟ್‌ಗಳನ್ನು ಮರುಹಂಚಿಕೆ ಮಾಡಿ ದಿನೇಶ್ ಲಾಭ ಮಾಡಿಕೊಂಡಿದ್ದರು. ಇದಕ್ಕೆ ಸಾಕ್ಷ್ಯ ಎಂಬಂತೆ ಹಣ ಪಡೆದು ಆಸ್ತಿ ಗಳಿಕೆ ಮಾಡಿರುವುದಕ್ಕೆ ದಾಖಲೆ ಪತ್ತೆಯಾಗಿದೆ ಎಂದು ಇಡಿ ಹೇಳಿದೆ.
Advertisement