
ಬೆಂಗಳೂರು: ಮಧ್ಯಪ್ರದೇಶ ಸಿರಪ್ ದುರಂತ ಪ್ರಕರಣದ ಬಳಿಕ ನಮ್ಮ ರಾಜ್ಯದಲ್ಲಿ ಕೂಡ ಈ ಬಗ್ಗೆ ಕ್ರಮ ವಹಿಸಲಾಗಿದೆ. ಔಷಧ ಮಾದರಿ ಪರೀಕ್ಷೆಯಲ್ಲಿ ರಾಜ್ಯ ನಂಬರ್ ಒನ್ ಇದೆ. ಈ ಕಾಫ್ ಸಿರಪ್ ನಮ್ಮ ರಾಜ್ಯದಲ್ಲಿ ಸರಬರಾಜು ಆಗಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಧ್ಯಪ್ರದೇಶದ ಘಟನೆ ಅತ್ಯಂತ ಆಘಾತಕಾರಿ. ಮಕ್ಕಳಿಗೆ ಔಷಧ ಕೊಡುವಾಗ ಎಚ್ಚರಿಕೆ ವಹಿಸಬೇಕು. ಇಂದು ಈ ಬಗ್ಗೆ ಒಂದು ಮಾರ್ಗಸೂಚಿ ಕೂಡ ಬಿಡುಗಡೆ ಮಾಡುತ್ತೇವೆ. ಈ ಹಿಂದೆ ಆರೋಗ್ಯ ಸುರಕ್ಷತೆ ಬಗ್ಗೆ ಯಾರೂ ಗಮನ ಹರಿಸಿರಲಿಲ್ಲ. ನಮ್ಮ ಸರ್ಕಾರ ಬಂದ ಬಳಿಕ ಆಹಾರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಜನರಿಗೆ ಆಹಾರ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಬಗ್ಗೆ ಕ್ರಮ ವಹಿಸಲಾಗಿದೆ.
ಕರ್ನಾಟಕದಲ್ಲೂ ಎರಡು ಸಿರಪ್ ಪತ್ತೆ ಪ್ರಕರಣ ಕುರಿತು ಮಾತನಾಡಿ, ಇದೇ ತರಹ ಬೇರೆ ಕಂಪನಿಗಳು ಕಾಫ್ ಸಿರಪ್ ತಯಾರಿಕೆ ಮಾಡಿದರೆ ಅದರ ಮಾದರಿ ಸಂಗ್ರಹಣೆ ಮಾಡಿ ತಪಾಸಣೆ ಮಾಡಬೇಕು ಎಂದು ಸೂಚನೆ ಕೊಟ್ಟಿದ್ದೇನೆ. ಈಗಾಗಲೇ ಪ್ರಕ್ರಿಯೆ ಆರಂಭವಾಗಿದೆ. ಒಂದೆರಡು ದಿನದಲ್ಲಿ ಅದರ ರಿಪೋರ್ಟ್ ಬರುತ್ತದೆ, ಎಚ್ಚರಿಕೆ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದರು.
ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕೆಮ್ಮಿನ ಸಿರಪ್‌ಗಳ ಸೇವನೆಯಿಂದ ಮಕ್ಕಳ ಸಾವು ಸಂಭವಿಸಿದ ವರದಿಗಳ ನಂತರ, ಕರ್ನಾಟಕ ಸರ್ಕಾರವು ಎಲ್ಲಾ ಜಾರಿ ಅಧಿಕಾರಿಗಳಿಗೆ ಕೆಲವು ಕೆಮ್ಮಿನ ಸಿರಪ್‌ಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇಡಲು ನಿರ್ದೇಶನ ನೀಡಿದೆ.
ನಾವು ಬಂದ ಮೇಲೆ ನಮ್ಮ ಇಲಾಖೆಯನ್ನು ಚುರುಕುಗೊಳಿಸಿದ್ದೇವೆ. ಸಾಕಷ್ಟು ತಪಾಸಣೆ ಮಾಡಿಸುತ್ತಿದ್ದೇವೆ. ಕರ್ನಾಟಕ ಈಗ ಬಹಳ ಮುಂಚೂಣಿಯಲ್ಲಿದೆ. ಔಷಧ ವಿಚಾರದಲ್ಲಿ ಪಾರದರ್ಶಕತೆ ತರುವ ಅವಶ್ಯಕತೆ ಇದೆ ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೆ.
ಈ ವಿಚಾರದಲ್ಲಿ ಬೇರೆ ಬೇರೆ ರಾಜ್ಯಗಳ ಜೊತೆ ಮಾಹಿತಿಗಳನ್ನು ಹಂಚಿಕೊಳ್ಳಬೇಕಾಗುತ್ತದೆ. ತಯಾರಿಕೆ ಮಾಡುವವರು ಒಂದು ಕಡೆ ಇರುತ್ತಾರೆ, ಸರಬರಾಜು ಮಾಡುವವರು ಮತ್ತೊಂದು ಕಡೆ ಇರುತ್ತಾರೆ. ಕರ್ನಾಟಕದಲ್ಲಿ ಮಾದರಿ ಸರಿ ಇಲ್ಲ ಎಂದು ಗೊತ್ತಾದಾಗ ಇಡೀ ದೇಶಕ್ಕೆ ಗೊತ್ತಾಗಬೇಕು. ಈ ಕಾಫ್ ಸಿರಪ್ ನಮ್ಮಲ್ಲಿ ಎಲ್ಲೂ ಸರಬರಾಜು ಆಗಿಲ್ಲ ಎಂದು ಹೇಳಿದರು.
ಇನ್ನೂ ಯಾವುದೇ ವಿತರಕ, ಚಿಲ್ಲರೆ ವ್ಯಾಪಾರಿ ಅಥವಾ ಸರ್ಕಾರಿ ಸಂಸ್ಥೆಯು ಈ ಉತ್ಪನ್ನಗಳನ್ನು ಹೊಂದಿದ್ದರೆ, ಪರೀಕ್ಷೆ ಮತ್ತು ವಿಶ್ಲೇಷಣೆಗಾಗಿ ಮಾದರಿಗಳನ್ನು ತೆಗೆದುಕೊಳ್ಳಬೇಕು. ಔಷಧಗಳು ಮತ್ತು ಸೌಂದರ್ಯವರ್ಧಕ ಕಾಯ್ದೆ, 1940 ರ ಪ್ರಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಿದೆ.
ಕೆಮ್ಮಿನ ಸಿರಪ್‌ಗಳ ಗುಣಮಟ್ಟದ ಬಗ್ಗೆ ಕಳವಳಗಳ ನಡುವೆ, ಕೇಂದ್ರ ಆರೋಗ್ಯ ಸಚಿವಾಲಯವು ಭಾನುವಾರ ಎಲ್ಲಾ ಔಷಧ ತಯಾರಕರು ಪರಿಷ್ಕೃತ ವೇಳಾಪಟ್ಟಿ M ಅನ್ನು ಅನುಸರಿಸುವ ಅಗತ್ಯವನ್ನು ಒತ್ತಿಹೇಳಿದೆ ಮತ್ತು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.
ಔಷಧ ಗುಣಮಟ್ಟದ ಮಾನದಂಡಗಳ ಅನುಸರಣೆಯನ್ನು ಪರಿಶೀಲಿಸಲು ಮತ್ತು ಕೆಮ್ಮು ಸಿರಪ್‌ಗಳ ತರ್ಕಬದ್ಧ ಬಳಕೆಯನ್ನು ಉತ್ತೇಜಿಸಲು, ವಿಶೇಷವಾಗಿ ಮಕ್ಕಳ ಜನಸಂಖ್ಯೆಯಲ್ಲಿ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಚಿವಾಲಯವು ಉನ್ನತ ಮಟ್ಟದ ಸಭೆಯನ್ನು ಕರೆದಿದೆ.
Advertisement