
ಬೆಂಗಳೂರು: ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಕಾರ್ಯಕ್ಕೆ ಗಣತಿದಾರರು 7ನೇ ತರಗತಿಯ ಮಕ್ಕಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆಂಬ ಗಂಭೀರ ಆರೋಪವೊಂದು ಕೇಳಿ ಬಂದಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಬೆಂಗಳೂರು ಪಶ್ಚಿಮ ವ್ಯಾಪ್ತಿಯಲ್ಲಿನ ಚಿಕ್ಕಲಸಂದ್ರದಲ್ಲಿ ಸಮೀಕ್ಷೆ ನಡೆಸುತ್ತಿರುವ ಗಣತಿದಾರರು, ಸಮೀಕ್ಷೆಗೆ 7ನೇ ತರಗತಿಯ ವಿದ್ಯಾರ್ಥಿಗಳನ್ನು ಬಕೆ ಮಾಡಿಕೊಂಡಿದ್ದಾರೆಂದು ಆರೋಪಿಸಲಾಗಿದೆ.
ಈ ಕುರಿತ ವಿಡಿಯೋವನ್ನು ಸ್ಥಳೀಯರು ತಮ್ಮ ಮೊಬೈಲ್ ಗಳಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಸಮೀಕ್ಷೆ ವೇಳೆ ಮಕ್ಕಳು ಮೊಬೈಲ್ ಫೋನ್ ಹಿಡಿದ್ದು, ಜನರಿಗೆ ಪ್ರಶ್ನೆಗಳನ್ನು ಕೇಳುತ್ತಿರುವುದು ಕಂಡು ಬಂದಿದೆ. ಮನೆಯ ಮಾಲೀಕರೊಬ್ಬರು ವಿದ್ಯಾರ್ಥಿಗಳನ್ನು ಯಾವ ಕ್ಲಾಸ್ ನಲ್ಲಿ ಓದುತ್ತಿದ್ದೀರಿ ಎಂದು ಪ್ರಶ್ನಿಸಿದಾಗ ವಿದ್ಯಾರ್ಥಿಗಳು 7ನೇ ತರಗತಿ ಎಂದು ಉತ್ತರಿಸಿರುವುದೂ ಕಂಡು ಬಂದಿದೆ.
ಆದರೆ, ಗಣತಿದಾರರು ಮಾತ್ರ ಆರೋಪವನ್ನು ನಿರಾಕರಿಸಿದ್ದು, ಸ್ಥಳ ಹುಡುಕಲು ಮಾತ್ರ ವಿದ್ಯಾರ್ಥಿಗಳ ಸಹಾಯವನ್ನು ಕೋರಲಾಗಿತ್ತು ಎಂದು ಹೇಳಿದ್ದಾರೆ.
ಮಕ್ಕಳೊಂದಿಗೆ ಸ್ಥಳ ಹುಡುತ್ತಿದ್ದೆ. ಸಮೀಕ್ಷೆಯಲ್ಲಿ ಅವರನ್ನು ಭಾಗಿ ಮಾಡಿಲ್ಲ. ಯುಹೆಚ್‌ಐಡಿ ಸಂಖ್ಯೆಯನ್ನು ಕಂಡುಹಿಡಿಯುವಲ್ಲಿಯೂ ಸಮಸ್ಯೆಗಳು ಎದುರಾಗುತ್ತಿದೆ ಎಂದು ತಿಳಿಸಿದ್ದಾರೆ.
ಸಮೀಕ್ಷೆಗೆ ವಿದ್ಯಾರ್ಥಿಗಳ ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ವಿರೋಧಗಳು ವ್ಯಕ್ತವಾಗುತ್ತಿದ್ದು, ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸರ್ಕಾರ ಸಮೀಕ್ಷೆ ಮಾಡುವ ಮೂಲಕ ಜಾತಿವಾದವನ್ನು ಪ್ರೋತ್ಸಾಹಿಸುತ್ತಿದೆ ಮತ್ತು ಮಕ್ಕಳನ್ನು ತೊಡಗಿಸಿಕೊಳ್ಳುವ ಮೂಲಕ ಚಿಕ್ಕ ವಯಸ್ಸಿನಲ್ಲಿಯೇ ಅವರಲ್ಲಿ ಧಾರ್ಮಿಕ ವ್ಯತ್ಯಾಸಗಳ ಬೀಜಗಳನ್ನು ಬಿತ್ತುತ್ತಿದ್ದಾರೆಂದು ಹೇಳಿದ್ದಾರೆ.
ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಅವರು, ಘಟನೆಯ ಬಗ್ಗೆ ನನಗೆ ಮಾಹಿತಿಯಿಲ್ಲ. ಈ ಬಗ್ಗೆ ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ.
ಇದೇ ವೇಳೆ ಸಮೀಕ್ಷೆಗೆ ಯಾವುದೇ ಕಾರಣವಿಲ್ಲದೆ ಗೈರುಹಾಜರಾದ ಗಣತಿದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದೂ ತಿಳಿಸಿದರು.
ಹೆರಿಗೆ, ಆರೋಗ್ಯ ಮತ್ತು ಇತರ ಕಾರಣಗಳಿಗಾಗಿ ಸುಮಾರು 2,000 ಮಂದಿಗೆ ವಿನಾಯಿತಿ ನೀಡಲಾಗಿದೆ ಎಂದು ಹೇಳಿದ್ದಾರೆ.
ಸಮೀಕ್ಷೆಯ ಸಮಯದಲ್ಲಿ ದೋಷಗಳು ಕಂಡುಬಂದಿವೆ. ಇಲ್ಲಿಯವರೆಗೆ 2.66 ಲಕ್ಷ ಮನೆಗಳನ್ನು ಸಮೀಕ್ಷೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ 2 ಲಕ್ಷ ದೈನಂದಿನ ಗುರಿಯನ್ನು ನಿಗದಿಪಡಿಸಲಾಗುವುದು ಎಂದರು.
ಬಳಿಕ ಶಾಲೆಗಳ ಪುನರಾರಂಭ ಮತ್ತು ಶಾಲೆಗಳಲ್ಲಿ ಶಿಕ್ಷಕರ ಲಭ್ಯತೆಯ ಬಗ್ಗೆ ಎದುರಾಗಿರುವ ಕಳವಳಕಾರಿ ಕುರಿತ ಪ್ರಶ್ನೆಗೆ ಉತ್ತರಿಸಿ, ಸಮೀಕ್ಷೆಯ ಕುರಿತು ಸರ್ಕಾರದ ಆದೇಶವನ್ನು ಪಾಲಿಸುವುದು ನಮ್ಮ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.
Advertisement