ಪರಿಶಿಷ್ಟ ಜಾತಿಯವರು ಬೌದ್ಧ ಧರ್ಮಕ್ಕೆ ಮತಾಂತರ ಆದ್ರು 'SC ಜಾತಿ ಪ್ರಮಾಣಪತ್ರ': ರಾಜ್ಯ ಸರ್ಕಾರದ ಆದೇಶ!

ಪರಿಶಿಷ್ಟ ಜಾತಿ ಪ್ರಮಾಣಪತ್ರಗಳ ಅರ್ಜಿಗಳ ಧರ್ಮದ ಕಾಲಂನಲ್ಲಿ 'ಬೌದ್ಧ ಧರ್ಮ' ಎಂದು ನಮೂದಿಸಲು ಆದೇಶವು ಅವಕಾಶ ನೀಡುತ್ತದೆ.
CM Siddaramaiah, Dr. HC Mahadevappa Casual Images
ಸಿಎಂ ಸಿದ್ದರಾಮಯ್ಯ, ಡಾ.ಹೆಚ್.ಸಿ. ಮಹಾದೇವಪ್ಪ ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಪರಿಶಿಷ್ಟ ಜಾತಿಗೆ ಸೇರಿದವರು ಬೌದ್ಧ ಧರ್ಮಕ್ಕೆ ಮತಾಂತರಗೊಂಡರೂ ಅವರಿಗೆ SC ಜಾತಿ ಪ್ರಮಾಣಪತ್ರ ನೀಡಲು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. 101 ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ಯಾರೇ ಆದರೂ ಬೌದ್ಧ ಧರ್ಮಕ್ಕೆ ಮತಾಂತರಗೊಂಡರೂ ಇದು ಅನ್ವಯವಾಗುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ತನ್ನ ಆದೇಶದಲ್ಲಿ ತಿಳಿಸಿದೆ.

ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿ ಇತ್ಯಾದಿಗಳಲ್ಲಿ ಮೀಸಲಾತಿ) ಕಾಯ್ದೆ 1990, 2024ರ ತಿದ್ದುಪಡಿ ಕಾಯ್ದೆ ಮತ್ತು 1992ರ ನಿಯಮದಂತೆ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಕರ್ನಾಟಕ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಪರಿಶಿಷ್ಟ ಜಾತಿಗಳಿಗೆ ಸೇರಿದ ವ್ಯಕ್ತಿಗಳಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ನೀಡಲು ಆಕ್ಟೋಬರ್ 6 ರಂದು ಹೊರಡಿಸಿದ ಆದೇಶದಲ್ಲಿ ಹೇಳಲಾಗಿದೆ.

ಧರ್ಮದ ಕಾಲಂನಲ್ಲಿ ಬೌದ್ಧ ಧರ್ಮ ನಮೂದಿಸಲು ಅವಕಾಶ:

ಪರಿಶಿಷ್ಟ ಜಾತಿ ಪ್ರಮಾಣಪತ್ರಗಳ ಅರ್ಜಿಗಳ ಧರ್ಮದ ಕಾಲಂನಲ್ಲಿ 'ಬೌದ್ಧ ಧರ್ಮ' ಎಂದು ನಮೂದಿಸಲು ಆದೇಶವು ಅವಕಾಶ ನೀಡುತ್ತದೆ.

ಶೈಕ್ಷಣಿಕ ದಾಖಲೆಗಳಲ್ಲಿ ಬೌದ್ಧ ಧರ್ಮ ಸೇರಿಸಲು ಅವಕಾಶ:

ಅಲ್ಲದೆ, ಅರ್ಜಿದಾರರು, ಪೋಷಕರು ಅವರು ಬಯಸಿದಲ್ಲಿ ಸರ್ಕಾರಿ ಶಾಲೆ, ಖಾಸಗಿ ಶಾಲೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧಿಕಾರ ವ್ಯಾಪ್ತಿಯಲ್ಲಿರುವ ಎಲ್ಲಾ ಇತರ ಶಿಕ್ಷಣ ಸಂಸ್ಥೆಗಳ ದಾಖಲೆಗಳಲ್ಲಿ ಧರ್ಮದ ಕಾಲಂನಲ್ಲಿ ಬೌದ್ಧಧರ್ಮವನ್ನು ನಮೂದಿಸಲು ಅವಕಾಶ ನೀಡುತ್ತದೆ. ಕರ್ನಾಟಕ ಸರ್ಕಾರದ ಎಲ್ಲಾ ಇಲಾಖೆಗಳು, ಮಂಡಳಿಗಳು ಮತ್ತು ನಿಗಮಗಳು, ಇತರ ಸಂಸ್ಥೆಗಳು ಆದೇಶದಂತೆ ಕಾರ್ಯನಿರ್ವಹಿಸುತ್ತವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕೇಂದ್ರ ಸರ್ಕಾರ 1990ರಲ್ಲಿ ಬರೆದಿದ್ದ ಪತ್ರದ ಆಧಾರದ ಮೇಲೆ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಪರಿಶಿಷ್ಟ ಜಾತಿಯವರಿಗೆ ಎಸ್ ಸಿ ಪ್ರಮಾಣ ಪತ್ರ ನೀಡಲು ರಾಜ್ಯಸರ್ಕಾರ 2013 ರಲ್ಲಿ ಸುತ್ತೋಲೆಯೊಂದನ್ನು ಹೊರಡಿಸಿತ್ತು.

2016 ರಲ್ಲಿ ಬೌದ್ಧರಾಗುವ ಪರಿಶಿಷ್ಟ ಜಾತಿಯ ಜನರು ಎಸ್‌ಸಿ ಪ್ರಮಾಣಪತ್ರಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವಂತೆ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಕೇಂದ್ರ ಸರ್ಕಾರ ಸೂಚಿಸಿತ್ತು ‘ಸುತ್ತೋಲೆ ಹೊರಡಿಸಿದ್ದರೂ ಈ ಕುರಿತು ಸ್ಪಷ್ಟನೆ ಹಾಗೂ ಸೂಕ್ತ ಆದೇಶ ಕೋರಿ ಹಲವು ಸಂಘಟನೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಿವೆ ಎಂದು ಸಮಾಜ ಕಲ್ಯಾಣ ಇಲಾಖೆ ತಿಳಿಸಿದೆ.

ಕರ್ನಾಟಕದಲ್ಲಿ ಮುಸ್ಲಿಮರು, ಕ್ರಿಶ್ಚಿಯನ್ನರು, ಸಿಖ್ಖರು, ಪಾರ್ಸಿಗಳು ಮತ್ತು ಜೈನರೊಂದಿಗೆ ಬೌದ್ಧರು ಧಾರ್ಮಿಕ ಅಲ್ಪಸಂಖ್ಯಾತರ ಪಟ್ಟಿಗೆ ಬರುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com