ಹಿಂದೂ ಸಮಾಜದಲ್ಲಿ ಸಮಾನತೆ ಇದ್ದಿದ್ದರೆ ಜನ ಯಾಕೆ ಮತಾಂತರ ಆಗ್ತಿದ್ರು? ಹೇಳಿಕೆ: ಸಿಎಂ ಸಿದ್ದರಾಮಯ್ಯ ವಿರುದ್ದ ಬಿಜೆಪಿ ತೀವ್ರ ಕಿಡಿ

ಹಿಂದೂ ಧರ್ಮದಲ್ಲಿ ಸಮಾನತೆ ಇದ್ದಿದ್ದರೆ ಏಕೆ ಬೇರೆ ಧರ್ಮಕ್ಕೆ ಮತಾಂತರ ಆಗುತ್ತಿದ್ದರು? ಎಂಬ ಮುಖ್ಯಮಂತ್ರಿಗಳ ಉತ್ತರ ಹಿಂದೂ ಧರ್ಮದ ಬಗೆಗೆ ಅವರಿಗಿರುವ ತಾತ್ಸಾರ ಹಾಗೂ ಅಸಹನೆಯನ್ನು ಪ್ರತಿಬಿಂಬಿಸುತ್ತದೆಯಲ್ಲದೇ ತಾವೊಬ್ಬ ಹಿಂದೂ ವಿರೋಧಿ ಎನ್ನುವುದನ್ನು ಬಿಂಬಿಸಿಕೊಂಡಿದ್ದಾರೆ.
Siddaramaiah,
ಸಿದ್ದರಾಮಯ್ಯ
Updated on

ಬೆಂಗಳೂರು: ಹಿಂದೂ ಸಮಾಜದಲ್ಲಿ ಸಮಾನತೆ ಇದ್ದಿದ್ದರೆ ಜನ ಯಾಕೆ ಬೇರೆ ಧರ್ಮಕ್ಕೆ ಮತಾಂತರ ಆಗುತ್ತಿದ್ದರು? ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಪಕ್ಷ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಹಿಂದೂ ಧರ್ಮವನ್ನು ಅವಹೇಳನ ಮಾಡುವುದು, ಧಾರ್ಮಿಕ ಶ್ರದ್ಧಾ ಕೇಂದ್ರಗಳ ವಿರುದ್ಧ ಅಪಪ್ರಚಾರ ನಡೆಸುವಂತೆ ಕುಮ್ಮಕ್ಕು ನೀಡುತ್ತಿದ್ದ ಕಾಂಗ್ರೆಸ್ ಸರ್ಕಾರ ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಹಿಂದೂ ಧರ್ಮಿಯರನ್ನು ಮತಾಂತರಗೊಳ್ಳುವಂತೆ ಪ್ರಚೋದಿಸುತ್ತಿದೆ. ನಿನ್ನೆ ಮುಖ್ಯಮಂತ್ರಿಗಳು ಹೇಳಿರುವ ಹೇಳಿಕೆ ಇದಕ್ಕೆ ಪುಷ್ಟಿ ನೀಡುತ್ತಿದೆ ಎಂದು ಹೇಳಿದ್ದಾರೆ.

ಗೋ ಹತ್ಯೆ ಹಾಗೂ ಮತಾಂತರ ನಿಷೇಧ ಕಾಯ್ದೆಗಳನ್ನು ನಿಷ್ಕ್ರಿಯಗೊಳಿಸಲು ಈಗಾಗಲೇ ಚಿಂತನೆ ನಡೆಸಿರುವ ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗ ಪ್ರಕಟಿಸಿರುವ ಪಟ್ಟಿಯಲ್ಲಿ ಹಿಂದೂ ಧರ್ಮದ ಜಾತಿಯ ಹೆಸರುಗಳೊಂದಿಗೆ 'ಕ್ರಿಶ್ಚಿಯನ್' ಎಂದು ಹೆಸರಿಸಿ ಅಧಿಕೃತ ಪ್ರಕಟಣೆ ಹೊರಡಿಸಿದೆ. ಇದನ್ನು ಪ್ರಶ್ನಿಸಿದ ಭಾರತೀಯ ಜನತಾ ಪಾರ್ಟಿ ಹಾಗೂ ಹಿಂದೂ ಪರ ಸಂಘಟನೆಗಳಿಗೆ ಸೂಕ್ತ ಸ್ಪಷ್ಟನೆ ನೀಡಿ ಆಗಿರುವ ಪ್ರಮಾದವನ್ನು ಒಪ್ಪಿಕೊಂಡು ಕ್ರಿಶ್ಚಿಯನ್ ಹೆಸರಿನಲ್ಲಿ ಸೇರ್ಪಡೆಯಾಗಿದ್ದ ಜಾತಿಗಳ ಪಟ್ಟಿಯನ್ನು ತೆಗೆಯುವ ನಿರ್ಧಾರ ಪ್ರಕಟಿಸುವ ಬದಲು, ಹಿಂದೂ ಧರ್ಮದಲ್ಲಿ ಸಮಾನತೆ ಇದ್ದಿದ್ದರೆ ಏಕೆ ಬೇರೆ ಧರ್ಮಕ್ಕೆ ಮತಾಂತರ ಆಗುತ್ತಿದ್ದರು? ಎಂಬ ಮುಖ್ಯಮಂತ್ರಿಗಳ ಉತ್ತರ ಹಿಂದೂ ಧರ್ಮದ ಬಗೆಗೆ ಅವರಿಗಿರುವ ತಾತ್ಸಾರ ಹಾಗೂ ಅಸಹನೆಯನ್ನು ಪ್ರತಿಬಿಂಬಿಸುತ್ತದೆಯಲ್ಲದೇ ತಾವೊಬ್ಬ ಹಿಂದೂ ವಿರೋಧಿ ಎನ್ನುವುದನ್ನು ಬಿಂಬಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಡಿರುವ ಈ ಮಾತುಗಳು ಮತಾಂತರಕ್ಕೆ ಪರೋಕ್ಷ ಪ್ರಚೋದನೆ ನೀಡಿದಂತಿದೆ ಎಂದು ತಿಳಿಸಿದ್ದಾರೆ.

ಹಿಂದುಳಿದ ವರ್ಗಗಳ ಆಯೋಗದ ಮುಖೇನ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಯ ಮಾಹಿತಿ ಸಂಗ್ರಹಿಸುವುದರ ಬದಲು ಮತಾಂತರದ ಹೆಸರನ್ನು ಮುಂದುಮಾಡಿ ಮಾತನಾಡುತ್ತಿರುವ ಮುಖ್ಯಮಂತ್ರಿಗಳ ನಡೆ ಶಂಖಾಸ್ಪದವಾಗಿದೆ. ಏಕೆಂದರೆ ಸಾಮಾಜಿಕ ಸಮೀಕ್ಷೆಯ ಹೆಸರಿನಲ್ಲಿ ಹಿಂದೂ ಸಮಾಜವನ್ನು ಚಿದ್ರಗೊಳಿಸುವ ಅಜೆಂಡಾವನ್ನು ಕಾಂಗ್ರೆಸ್ ಇಟ್ಟುಕೊಂಡಂತೆ ಕಾಣುತ್ತಿದೆ. ಹಿಂದೂ ಧರ್ಮದ ಅಸಮಾನತೆಯ ಬಗ್ಗೆ ಮಾತನಾಡುವ ಮುಖ್ಯಮಂತ್ರಿಗಳು ಇಸ್ಲಾಂ ಧರ್ಮದಲ್ಲಿನ ವೈರುಧ್ಯಗಳು, ಮಹಿಳೆಯರ ಮೇಲಿನ ಶೋಷಣೆ, ದೇಶಕ್ಕಿಂತ ಧರ್ಮವೇ ಮೊದಲು ಎನ್ನುವ ಅವರ ಸಿದ್ಧಾಂತವನ್ನು ಏಕೆ ಪ್ರಸ್ತಾಪಿಸುವುದಿಲ್ಲ? ಪ್ರಶ್ನಿಸುವುದಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ತ್ರಿವಳಿ ತಲಾಕ್ ರದ್ದತಿ ಕಾಯ್ದೆ ಜಾರಿಗೆ ತಂದಾಗ ಏಕೆ ಮುಖ್ಯಮಂತ್ರಿಗಳು ಏಕೆ ಸ್ವಾಗತಿಸಲಿಲ್ಲ. ಸಿದ್ದರಾಮಯ್ಯನವರ ರಾಜಕೀಯ ಸಿದ್ದಾಂತ ಹಿಂದೂ ಧರ್ಮ ಹಾಗೂ ಹಿಂದೂ ಪದ್ಧತಿಗಳನ್ನು ಅವಹೇಳನ ಮಾಡುವುದು ಇತರ ಧರ್ಮಿಯರನ್ನು ಓಲೈಸುವುದು ಮಾತ್ರ, ಅವರು ಸಮಾಜವಾದಿಯೂ ಅಲ್ಲ, ಭಾರತೀಯ ಸಂಸ್ಕೃತಿಯ ಪ್ರತಿಪಾದಕರೂ ಅಲ್ಲ, ಸನಾತನ ಹಿಂದೂ ಧರ್ಮ ಹಾಗೂ ಭಾರತೀಯ ಸಂಸ್ಕೃತಿಯನ್ನು ವಿರೋಧಿಸುವುದು ಅವರ ಮನಸ್ಥಿತಿ, ಇದು ರಾಜ್ಯದ ಆಡಳಿತದ ಮೇಲೆ ಪ್ರತಿಬಿಂಬಿತವಾಗಿದೆ. ಅದರ ಪ್ರತೀಕವಾಗಿಯೇ ಸರಣಿ ರೂಪದಲ್ಲಿ ಹಿಂದೂ ವಿರೋಧಿ ಧೋರಣೆಗಳು ಸರ್ಕಾರದಿಂದ ಅನಾವರಣಗೊಳ್ಳುತ್ತಿದೆ ಎಂದು ಕಿಡಿಕಾರಿದ್ದಾರೆ.

Siddaramaiah,
ಬಿಹಾರ ಚುನಾವಣೆ: ಸೀಟು ಹಂಚಿಕೆ ಒಪ್ಪಂದಕ್ಕೆ ಮುನ್ನ ಮೋತಿಹಾರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಘೋಷಣೆ

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಪ್ರತಿಕ್ರಿಯೆ ನೀಡಿ, ಸಮಾನತೆಯ ವಿಚಾರದಲ್ಲಿ ಹಿಂದೂ ಧರ್ಮವನ್ನು ಗುರಿಯಾಗಿಸಿ ಮಾತನಾಡುತ್ತೀರಲ್ಲ ಸಿಎಂ ಸಿದ್ದರಾಮಯ್ಯ ಅವರೇ, ಸಮಾನತೆಯ ಬಗ್ಗೆ ಮುಸ್ಲಿಮರನ್ನು ಪ್ರಶ್ನಿಸುವ ಧೈರ್ಯ ಇದೆಯಾ?

ಇಸ್ಲಾಂ ಧರ್ಮದಲ್ಲಿ ಸಮಾನತೆ ಇದ್ದಿದ್ದರೆ, ಇಸ್ಲಾಂ ಶಾಂತಿ ಪ್ರಿಯ ಮತವಾಗಿದ್ದರೆ, ಮುಸ್ಲಿಮರಲ್ಲಿ ಭ್ರಾತೃತ್ವದ ಭಾವನೆ ಇದ್ದಿದ್ದರೆ ಪಹಲ್ಗಾಮ್ ನಲ್ಲಿ ಉಗ್ರವಾದಿಗಳು ಪ್ರವಾಸಿಗರ ಹೆಸರು ಕೇಳಿ, ಹೆಣ್ಣು ಮಕ್ಕಳ ಹಣೆಯಲ್ಲಿ ಕುಂಕುಮ ನೋಡಿ, ಕಲ್ಮಾ ಪಠಣೆ ಮಾಡಲು ಹೇಳಿ, ಹಿಂದುಗಳನ್ನು ಮಾತ್ರ ಯಾಕೆ ಕೊಲ್ಲುತ್ತಿದ್ದರು, ಎಂದು ಕೇಳುವ ಧೈರ್ಯ ಇದೆಯಾ ಸಿದ್ದರಾಮಯ್ಯನವರೇ? ಇಸ್ಲಾಂ ಮತದಲ್ಲಿ ಸಮಾನತೆ ಇದ್ದಿದ್ದರೆ ಮಹಿಳೆಯರಿಗೆ ಯಾಕೆ ಮಸೀದಿಗೆ ಪ್ರವೇಶವಿಲ್ಲ, ಎಂದು ಕೇಳುವ ಧೈರ್ಯ ಇದೆಯಾ ಸಿದ್ದರಾಮಯ್ಯನವರೇ?

ಇಸ್ಲಾಂ ಮತದಲ್ಲಿ ಸಮಾನತೆ ಇದ್ದಿದ್ದರೆ, ತ್ರಿವಳಿ ತಲಾಖ್ ನಿಷೇಧ ಮಾಡಲು ವಿರೋಧವೇಕೆ ಎಂದು ಮುಸ್ಲಿಂ ಮುಖಂಡರನ್ನು ಕೇಳುವ ಧೈರ್ಯ ಇದೆಯಾ ಸಿದ್ದರಾಮಯ್ಯನವರೇ? ಇಸ್ಲಾಂ ಮತದಲ್ಲಿ ಸಮಾನತೆ ಇದ್ದಿದ್ದರೆ, ಖುರಾನ್ ನಲ್ಲಿ ಹಿಂದೂಗಳು ಸೇರಿದಂತೆ ಮುಸ್ಲಿಮೇತರರನ್ನು ಕಾಫಿರರು ಅಂತ ಯಾಕೆ ಕರೆಯುತ್ತಾರೆ ಎಂದು ಕೇಳುವ ಧೈರ್ಯ ಇದೆಯಾ ಸಿದ್ದರಾಮಯ್ಯನವರೇ?

ಹೌದು ಹಿಂದೂ ಸಮಾಜದಲ್ಲಿ ಜಾತಿ ಪದ್ಧತಿ ಎಂಬ ಪಿಡುಗು ಇರುವುದು ವಾಸ್ತವ. ಹಿಂದೂ ಸಮಾಜದಲ್ಲಿ ಇರುವ ಲೋಪದೋಷಗಳನ್ನು ತಿದ್ದಲು, ಕಾಲಕ್ಕೆ ತಕ್ಕಂತೆ ಬದಲಾಗಲು ಅನೇಕ ಯುಗ ಪುರುಷರು ಜನ್ಮ ತಾಳಿದ್ದಾರೆ. ತನ್ನನ್ನು ತಾನು ತಿದ್ದುಕೊಳ್ಳುವ, ಪರಿವರ್ತನೆ ಆಗುವ ಶಕ್ತಿ ಹಿಂದೂ ಸಮಾಜಕ್ಕೆ ಇದೆ. ಬಸವಣ್ಣನವರಿಂದ ಹಿಡಿದು ಸ್ವಾಮಿ ವಿವೇಕಾನಂದರವರೆಗೆ, ಡಾ.ಬಿ.ಆರ್.ಅಂಬೇಡ್ಕರ್ ಅವರಿಂದ ಹಿಡಿದು ಇಲ್ಲಿಯವರೆಗೆ ಅನೇಕರು ಹಿಂದೂ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದಾರೆ, ಮಾಡುತ್ತಲೂ ಇದ್ದಾರೆ. ಆದರೆ, ಇಸ್ಲಾಂ ಮತದಲ್ಲಿ ಬೇರೂರಿರುವ ಮೂಲಭೂತವಾದವನ್ನು, ಜಿಹಾದಿ ಮಾನಸಿಕತೆಯನ್ನು ಪ್ರಶ್ನಿಸುವ, ತಿದ್ದುವ ಯಾವ ಪರಿವರ್ತಕನೂ ಹುಟ್ಟಿಲ್ಲ, ಹುಟ್ಟಿದರೂ ಅಂತಹ ಪರಿವರ್ತನೆಯನ್ನು ಮುಸ್ಲಿಮರು ಒಪ್ಪುವುದೂ ಇಲ್ಲ.

ಅದಕ್ಕೆ ಮುಸ್ಲಿಮರಿಗೆ ಔರಂಗಜೇಬ್, ಟಿಪ್ಪು ಸುಲ್ತಾನನಂತಹ ಮತಾಂಧರೇ ಸದಾ ಮಾದರಿಯಾಗುತ್ತಾರೆಯೇ ಹೊರತು ಸಂತ ಶಿಶುನಾಳ ಶರೀಫರು, ಡಾ.ಅಬ್ದುಲ್ ಕಲಾಂ ಅಂತಹವರು ಮಾದರಿ ಆಗುವುದೇ ಇಲ್ಲ. ಸನಾತನ ಹಿಂದೂ ಧರ್ಮವನ್ನ, ಹಿಂದೂಗಳನ್ನು ಅವಹೇಳನ ಮಾಡುವ ನಿಮ್ಮ ಎಡಪಂಥೀಯ ಕನ್ನಡಕವನ್ನು ಒಮ್ಮೆ ಪಕ್ಕಕ್ಕಿಟ್ಟು ವಸ್ತುನಿಷ್ಠವಾಗಿ ಯೋಚನೆ ಮಾಡಿ. ನಿಮ್ಮ ಅಕ್ಕಪಕ್ಕದಲ್ಲಿರುವ ಎಡಪಂಥೀಯ ಬುದ್ಧಿಜೀವಿಗಳ ತಾಳಕ್ಕೆ ಕುಣಿಯದೆ, ಒಬ್ಬ ಜವಾಬ್ದಾರಿಯುತ ಮುಖ್ಯಮಂತ್ರಿಯಾಗಿ ಮಾತನಾಡುವುದನ್ನು ಕಲಿಯಿರಿ ಎಂದು ತಿಳಿಸಿದ್ದಾರೆ.

ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರು ಮಾತನಾಡಿ, ಕಾಂಗ್ರೆಸ್ ಒಳಗೇ ಅಸಮಾನತೆ ಇದೆ. ರಾಹುಲ್ ಗಾಂಧಿಯವರ 'ವೋಟ್ ಚೋರಿ' ಆರೋಪವನ್ನು ಒಪ್ಪದ ಕಾರಣ ಹಿರಿಯ ಕಾಂಗ್ರೆಸ್ ನಾಯಕ ಕೆ.ಎನ್. ರಾಜಣ್ಣ ತಮ್ಮ ಸಚಿವ ಸ್ಥಾನವನ್ನು ಕಳೆದುಕೊಳ್ಳಬೇಕಾಯಿತು. ಇದು ಅಸಮಾನತೆಯಲ್ಲವೇ? ವಿಧಾನಸಭೆಯಲ್ಲಿ ಆರ್‌ಎಸ್‌ಎಸ್ ಗೀತೆ ಹಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕ್ಷಮೆಯಾಚಿಸಬೇಕಾಯಿತು... ಇದು ಅಸಹಿಷ್ಣುತೆ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com