
ಮೈಸೂರು: ಕಾವೇರಿ ನದಿ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ರೆಸಾರ್ಟ್, ಕಟ್ಟಡಗಳನ್ನು ನಿರ್ಮಿಸಿದ್ದವರಿಗೆ ಅಧಿಕಾರಿಗಳು ಬುಧವಾರ ಶಾಕ್ ನೀಡಿದ್ದಾರೆ.
ಮಂಡ್ಯದ ಶ್ರೀರಂಗಪಟ್ಟಣದ ಕಾವೇರಿ ನದಿ ತೀರದಲ್ಲಿ ತಲೆ ಎತ್ತಿದ್ದ ಅಕ್ರಮ ರೆಸಾರ್ಟ್ ಹಾಗೂ ಇತರೆ ಕಟ್ಟಡಗಳನ್ನು ತಹಶೀಲ್ದಾರ್ ಚೇತನಾ ಯಾದವ್ ಅವರ ನೇತೃತ್ವದಲ್ಲಿ, ಪೊಲೀಸ್ ಬಿಗಿ ಭದ್ರತೆಯಲ್ಲಿ ಸುಮಾರು ನಾಲ್ಕು ತಾಸುಗಳ ಕಾಲ ಕಾರ್ಯಾಚರಣೆ ನಡೆಸಿ, ತೆರವುಗೊಳಿಸಲಾಗಿದೆ.
ಖಾಸಗಿ ರೆಸಾರ್ಟ್, ಇತರೆ ವಾಣಿಜ್ಯ ಉದ್ದೇಶಕ್ಕಾಗಿ ನಿರ್ಮಿಸಿದ್ದ ಕಟ್ಟಡಗಳನ್ನು ಜೆಸಿಬಿ ಯಂತ್ರಗಳನ್ನು ಬಳಸಿ ಕೆಡವಲಾಗಿದೆ.
ಕೆಲ ದಿನಗಳ ಹಿಂದಷ್ಟೇ ಶ್ರೀರಂಗಪಟ್ಟಣಕ್ಕೆ ಭೇಟಿ ನೀಡಿದ್ದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರಿಗೆ ಸ್ಥಳೀಯರು ಕಾವೇರಿ ನದಿ ಬಫರ್ ವಲಯ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಮತ್ತು ನೀರಾವರಿ ಇಲಾಖೆಗೆ ಸೇರಿದ ಜಾಗದ ಅತಿಕ್ರಮಣದ ಬಗ್ಗೆ ದೂರು ನೀಡಿದ್ದರು.
ಈ ದೂರು ಆಧರಿಸಿ ಅತಿಕ್ರಮ ತೆರವು ಮಾಡಿಸಿ ವರದಿ ಸಲ್ಲಿಸುವಂತೆ ಉಪ ಲೋಕಾಯುಕ್ತರಿಂದ ತಾಲ್ಲೂಕು ಆಡಳಿತಕ್ಕೆ ಒಂದು ತಿಂಗಳ ಹಿಂದೆ ನಿರ್ದೇಶನ ಬಂದಿತ್ತು. ಈ ಹಿನ್ನೆಲೆಯಲ್ಲಿ ಬಧವಾರ ನಸುಕಿನಲ್ಲೇ ತೆರವು ಕಾರ್ಯಾಚರಣೆ ನಡೆಯಿತು.
ರೆಸಾರ್ಟ್ ನಲ್ಲಿ ವಾರಾಂತ್ಯ ಕಾರ್ಯಕ್ರಮಗಳು ನಡೆಯುತ್ತಿದ್ದವು. ಇದು ಸೆಲೆಬ್ರಿಟಿಗಳ ಕೇಂದ್ರವಾಗಿ ಮಾರ್ಪಟ್ಟಿತ್ತು. ಜಾಗದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಲಾಗುತ್ತಿತ್ತು. ಪ್ರಭಾವಿ ವ್ಯಕ್ತಿಗಳು, ಚಿತ್ರರಂಗದ ನಟ-ನಟಿಯರ ಕಾರ್ಯಕ್ರಮಗಳು ನಡೆಯುವುದು ಸಾಮಾನ್ಯವಾಗಿ ಹೋಗಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.
ತಹಶೀಲ್ದಾರ್ ನೇತೃತ್ವದ ತಂಡವು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಈ ಕಾರ್ಯಾಚರಣೆಯನ್ನು ನಡೆಸಿದೆ ಎಂದು ಮಂಡ್ಯ ಜಿಲ್ಲಾಧಿಕಾರಿ ಕುಮಾರ್ ಅವರು ಹೇಳಿದ್ದಾರೆ.
ಇನ್ನು ಅತಿಕ್ರಮಣಗಳಿಗೆ ಅವಕಾಶ ನೀಡುವುದಿಲ್ಲ. ಇದೇ ರೀತಿ ಕಾರ್ಯಾಚರಣೆ ನಡೆಸಿ, ಅತಿಕ್ರಮಣಗಳನ್ನು ತೆರವುಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
Advertisement