
ಮಂಗಳೂರು: ಕಾಂತಾರ ಚಾಪ್ಟರ್ 1 ಸಿನಿಮಾ ಸಕಾರಾತ್ಮಕ ವಿಷಯಗಳಿಗೆ ಸುದ್ದಿಯಾಗುತ್ತಿರುವಂತೆಯೇ, ಅಭಿಮಾನಿಗಳ ಅತಿರೇಕದ ವರ್ತನೆಯ ಪರಿಣಾಮ ನಕಾರಾತ್ಮಕ ಸುದ್ದಿಗಳು ಬೆಳಕಿಗೆ ಬರುತ್ತಿವೆ.
ಸಿನಿಮಾ ವೀಕ್ಷಿಸಿ ಮನಸ್ಸಿನಲ್ಲಿ ಭಕ್ತಿ ಭಾವಗಳನ್ನು ತುಂಬಿಕೊಂಡು ಹೊರಬರುವವರು ಒಂದೆಡೆಯಾದರೆ, ಮತ್ತೊಂದೆಡೆ ಅತಿರೇಕದ ವರ್ತನೆಯಿಂದ ದೈವದ ಅನುಕರಣೆ ಮಾಡುತ್ತಿರುವ ಘಟನೆಗಳು, ಅದರ ವಿಡಿಯೋಗಳು ವೈರಲ್ ಆಗತೊಡಗಿದೆ.
ಸಿನಿಮಾ ಅಭಿಮಾನಿಗಳು ಕಂಡಕಂಡಲ್ಲಿ ದೈವದ ಅನುಕರಣೆ ಮಾಡುತ್ತಿರುವುದು ದೈವನರ್ತಕರು, ದೈವಾರಾಧಕರು ಹಾಗೂ ತುಳುನಾಡಿನ ಜನತೆಯ ಕೆಂಗಣ್ಣಿಗೆ ಗುರಿಯಾಗಿದೆ. ಈ ಬೆಳವಣಿಗೆಗಳಿಂದ ಬೇಸತ್ತ ದೈವನರ್ತಕರು ದೈವಕ್ಷೇತ್ರದ ಮೊರೆ ಹೋಗಿದ್ದು ನೊಂದು ದೂರು ನೀಡಿದ್ದಾರೆ.
ದೂರಿಗೆ ದೈವ ಪ್ರತಿಕ್ರಿಯೆ ನೀಡಿದ್ದು, ನನ್ನ ಹೆಸರಿನಲ್ಲಿ ಹಣ ಮಾಡುತ್ತಿರುವವರನ್ನು ನಾನು ನೋಡಿಕೊಳ್ಳುತ್ತೇನೆ. ಹಣವೆಲ್ಲ ಆಸ್ಪತ್ರೆ ಸೇರುವಂತೆ ಮಾಡುತ್ತೇನೆ. ಅಪಚಾರ ಮಾಡುವವರಿಗೆ ನಾನು ಬುದ್ದಿ ಕಲಿಸುತ್ತೇನೆ. ಇನ್ಮುಂದೆ ಎಲ್ಲಾ ದೈವಸ್ಥಾನಗಳಲ್ಲಿ ಚಿತ್ರೀಕರಣ ನಿಲ್ಲಿಸಿ. ನೀವು ಹೋರಾಟವನ್ನು ಮುಂದುವರಿಸಿ. ನಾನು ನಿಮ್ಮ ಬೆನ್ನ ಹಿಂದೆ ಇದ್ದೇನೆ’ ಎಂದು ಹೇಳಿದೆ.
ಮಂಗಳೂರು ಹೊರವಲಯದ ಬಜಪೆ ಸಮೀಪದ ಶ್ರೀ ಕ್ಷೇತ್ರ ಪೆರಾರದ ಬಲವಂಡಿ, ಪಿಲಿಚಂಡಿ ದೈವದ ಮುಂದೆ ದೈವ ನರ್ತಕರು ದೈವಾರಾಧನೆಯ ಅಪಹಾಸ್ಯದ ವಿರುದ್ಧ ಸಾಮೂಹಿಕ ಪ್ರಾರ್ಥನೆ ಮಾಡಿದ್ದಾರೆ. ಸಿನಿಮಾದಲ್ಲಿ ದೈವಾರಾಧನೆ ಬಳಕೆ ಬಗ್ಗೆ ದೂರು ಹೇಳಿದ್ದು, ದೈವದ ಆವೇಶವನ್ನು ಅನುಕರಣೆ ಮಾಡುತ್ತಿರುವ ಬಗ್ಗೆ ದೈವರಾಧಕರ ಬೇಸರ ವ್ಯಕ್ತಪಡಿಸಿದ್ದರು.
ದೈವವನ್ನು ಅನುಕರಣೆ ಮಾಡುವುದನ್ನು 2022 ರಲ್ಲಿ ಮೊದಲ ‘ಕಾಂತಾರ’ ಸಿನಿಮಾ ಬಿಡುಗಡೆ ಆದಾಗಿನಿಂದಲೂ ರಿಷಬ್ ಶೆಟ್ಟಿ, ಹೊಂಬಾಳೆ ವಿರೋಧಿಸುತ್ತಿದ್ದು, ಈಗಾಗಲೇ ಸಾಕಷ್ಟು ಬಾರಿ ಎಚ್ಚರಿಕೆಯನ್ನೂ ನೀಡಲಾಗಿದೆ. ಇತ್ತೀಚೆಗೆ ಸಹ ಪೋಸ್ಟ್ ಹಂಚಿಕೊಂಡಿದ್ದ ಹೊಂಬಾಳೆ ಫಿಲಮ್ಸ್, ದೈವದ ಅನುಕರಣೆ ಮಾಡುವುದು ಬೇಡ ಎಂದು ಮನವಿ ಮಾಡಿತ್ತು. ಆದರೂ ಅದು ಮುಂದುವರೆದಿರುವ ಹಿನ್ನೆಲೆಯಲ್ಲಿ ಈ ಬಾರಿ ದೈವವೇ ನೇರವಾಗಿ ಎಚ್ಚರಿಕೆ ನೀಡಿದೆ.
Advertisement