ನಿಯಮ ಉಲ್ಲಂಘನೆ ಆರೋಪದಲ್ಲಿ ಸೀಜ್ ಮಾಡಲಾಗಿದ್ದ ಬಿಗ್ ಬಾಸ್ ಕನ್ನಡ ಸೀಸನ್ 12 ಮನೆಯನ್ನು ತೆರೆಯಲಾಗಿದ್ದು, ರಾತ್ರೋ ರಾತ್ರಿಯೇ ಸ್ಪರ್ಧಿಗಳೂ ಕೂಡ ವಾಪಸ್ ಆಗಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಅವರ ಮಧ್ಯ ಪ್ರವೇಶದ ಬೆನ್ನಲ್ಲೇ ಸೀಜ್ ಮಾಡಲಾಗಿದ್ದ ಬಿಗ್ ಬಾಸ್ ಮನೆಯನ್ನು ಮಧ್ಯರಾತ್ರಿಯೇ ತೆರೆಯಲಾಗಿದೆ. ಸಿಬ್ಬಂದಿ ಓಡಾಟ ಹಾಗೂ ಅಗತ್ಯ ವಸ್ತುಗಳ ಬಳಕೆಗೆ ಮಾತ್ರ ಅವಕಾಶ ಕೊಡಲಾಗಿದೆ. ಜಾಲಿವುಡ್ ಸ್ಟುಡಿಯೋಸ್‌ಗೆ 'ಇದೊಂದು ಬಾರಿ ಅನುಮತಿ ನೀಡುವಂತೆ' ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲಾಧಿಕಾರಿಗಳಿಗೆ ನಾನು ನಿರ್ದೇಶನ ನೀಡಿದ್ದೇನೆ ಎಂದು ಡಿಕೆಶಿ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದರು. ಈ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಕಿಚ್ಚ ಸುದೀಪ್, ‘ಅಗತ್ಯ ಸಮಯದಲ್ಲಿ ಅಗತ್ಯ ನೆರವು ನೀಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಧನ್ಯವಾದಗಳು, ಬಿಗ್ಬಾಸ್ ಕನ್ನಡ ಶೋನಿಂದ ಯಾವುದೇ ತಪ್ಪು ಆಗಿಲ್ಲವೆಂದು ಗುರುತಿಸಿದ ಅಧಿಕಾರಿಗಳಿಗೂ ಧನ್ಯವಾದಗಳು. ನನ್ನ ಕರೆಗೆ ಶೀಘ್ರವೇ ಸ್ಪಂದಿಸಿದ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಹಾಗೂ ಸಹಾಯ ಮಾಡಿದ ನಲಪಾಡ್ ಅವರಿಗೆ ಧನ್ಯವಾದಗಳು. ಬಿಗ್ಬಾಸ್ ಕನ್ನಡ ಸದಾ ಇರಲಿದೆ’ ಎಂದು ಹೇಳಿದ್ದಾರೆ. ಈಮಧ್ಯೆ, ಜಿಲ್ಲಾಡಳಿತ ನಿನ್ನೆ ಸಂಸ್ಥೆಯ ಮನವಿ ಮೇರೆಗೆ ಷೋ ಮುಂದುವರಿಸಲು ಅವಕಾಶ ನೀಡಿದ್ದಕ್ಕೆ ಸ್ಟುಡಿಯೊ ಮತ್ತು ಸರ್ಕಾರ ವಿರುದ್ಧ ಕನ್ನಡ ಪರ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಬಿಗ್ ಬಾಸ್ ಶೋಗೆ ರಾತ್ರೋರಾತ್ರಿ ಅನುಮತಿ ನೀಡಿದ್ದೀರಿ ಹೇಗೆ, ಇದು ಅಕ್ರಮವಾಗಿ ನಡೆಯುತ್ತಿದೆ ಎಂದು ಸಂಘಟನೆಯ ಸದಸ್ಯರು ಆಕ್ರೋಶ ಹೊರಹಾಕಿದ್ದಾರೆ.
ಉದ್ಯೋಗಸ್ಥ ಮಹಿಳೆಯರಿಗೆ ವೇತನ ಸಹಿತ 'ಋತುಚಕ್ರ ರಜೆ'ಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಗುರುವಾರ ಅನುಮೋದನೆ ದೊರೆತಿದೆ. ದೇಶದಲ್ಲೇ ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರ ಮಾಸಿಕ ಋತುಸ್ರಾವದ ರಜೆ ನೀತಿಯನ್ನು ಜಾರಿಗೆ ತರಲು ನಿರ್ಧರಿಸಿದ್ದು, ಈ ನೀತಿಯ ಅನ್ವಯ ಮಹಿಳಾ ನೌಕರರಿಗೆ ತಿಂಗಳಿಗೆ ಒಂದು ದಿನದ ವೇತನ ಸಹಿತ ರಜೆ ಸಿಗಲಿದೆ. ಸಾರ್ವಜನಿಕ ಮತ್ತು ಖಾಸಗಿ ವಲಯದ ಎಲ್ಲ ಉದ್ಯೋಗದಾತರು ಈ ನೀತಿಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕಾಗುತ್ತದೆ. ಈ ಬಗ್ಗೆ ಕಾನೂನು ಸಚಿವ ಎಚ್‌ಕೆ ಪಾಟೀಲ್ ಮಾಹಿತಿ ನೀಡಿದ್ದು, 'ಸರ್ಕಾರಿ ಕಚೇರಿಗಳು, ಗಾರ್ಮೆಂಟ್ಸ್, ಎಂಎನ್‌ಸಿ, ಐಟಿ ಮತ್ತು ಇತರೆ ಖಾಸಗಿ ಸಂಸ್ಥೆ, ಕೈಗಾರಿಕೆಗಳು ಸೇರಿದಂತೆ ಎಲ್ಲಾ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಈ ಕಾನೂನು ಅನ್ವಯವಾಗಲಿದೆ ಎಂದು ಹೇಳಿದ್ದಾರೆ.
ವಸತಿ ಶಾಲೆಯೊಂದರಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, 2ನೇ ತರಗತಿ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಪುಷ್ಪಕ್ ಮೃತ ವಿದ್ಯಾರ್ಥಿಯಾಗಿದ್ದು, ಅಗ್ನಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ಹಾಗೂ ಶಾಲಾ ಸಿಬ್ಬಂದಿ ವಿದ್ಯಾರ್ಥಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಯತ್ನಿಸಿದರೂ, ಪುಷ್ಪಕ್ ಆ ಸಮಯದಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಶಾಲೆಯ ವಸತಿ ಗೃಹದಲ್ಲಿ ಒಟ್ಟು 53 ಮಂದಿ ವಿದ್ಯಾರ್ಥಿಗಳು ವಾಸಿಸುತ್ತಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸಿದರು. ಶಾರ್ಟ್ ಸರ್ಕ್ಯೂಟ್‌ನಿಂದ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಗ್ರೇಟರ್ ಬೆಂಗಳೂರು ಪಾಲಿಕೆ ವ್ಯಾಪ್ತಿಯ ಐದು ಪಾಲಿಕೆಗಳ ಚುನಾವಣೆಯಲ್ಲಿ ಶೇಕಡಾ 50ರಷ್ಟು ಟಿಕೆಟ್ ಅನ್ನು ಮಹಿಳೆಯರಿಗೆ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನ ಪಾಲಿಕೆಗಳಲ್ಲಿ ಅರ್ಧದಷ್ಟು ಮಹಿಳಾ ಕಾರ್ಪೊರೇಟರ್ ಗಳು ಇರುತ್ತಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಪಂಚಾಯತ್‌ನಿಂದ ಸಂಸತ್ತಿನವರೆಗೆ, ನಮಗೆ ಹೆಚ್ಚಿನ ಮಹಿಳಾ ನಾಯಕಿಯರು ಬೇಕು. ಅವರು ಕುಟುಂಬಗಳಲ್ಲಿ ನಿರ್ಧಾರ ತೆಗೆದುಕೊಳ್ಳುವವರು ಅವರು ಆಡಳಿತದ ಭಾಗವಾಗಿರಬೇಕು ಎಂದು ಶಿವಕುಮಾರ್ ಹೇಳಿದ್ದಾರೆ.
ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದೇವಿಯ ಗರ್ಭಗುಡಿ ಬಾಗಿಲನ್ನು ಇಂದು ಶಾಸ್ತ್ರೋಕ್ತವಾಗಿ ತೆರೆಯಲಾಗಿದೆ. ಹಾಸನಾಂಬ ದೇವಿ ಜಾತ್ರಾ ಮಹೋತ್ಸವವು ಇಂದಿನಿಂದ ಅಕ್ಟೊಬರ್ 23 ರವರೆಗೆ ನಡೆಯಲಿದೆ. ಜಾತ್ರೋತ್ಸವದಲ್ಲಿ ಹೆಲಿ ಟೂರಿಸಂ, ಟೂರ್ ಪ್ಯಾಕೇಜ್, ಶ್ವಾನ ಪ್ರದರ್ಶನ, ಪಾಕ ಸ್ಪರ್ಧೆ, ಜಾನಪದ ಉತ್ಸವ ಸೇರಿದಂತೆ ಹಲವು ಆಕರ್ಷಣೆ ಇರಲಿದೆ. ಹಾಸನಾಂಬ ಉತ್ಸವದಲ್ಲಿ ಪ್ರಸ್ತುತ ವರ್ಷದಿಂದ ವಿಐಪಿ ಸಂಪ್ರದಾಯಕ್ಕೆ ಬ್ರೇಕ್ ನೀಡಿ ಜನಸ್ನೇಹಿ ಉತ್ಸವಕ್ಕೆ ಕರೆ ನೀಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
Advertisement