
ಮಂಗಳೂರು: SSlC ಪರೀಕ್ಷಾ ಶುಲ್ಕ ಹೆಚ್ಚಳದ ಬಗ್ಗೆ ಬಿಜೆಪಿ ಅನಗತ್ಯವಾಗಿ ವಿವಾದ ಸೃಷ್ಟಿಸುತ್ತಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಪರೀಕ್ಷಾ ಶುಲ್ಕವನ್ನು ಶೇ. 5 ರಷ್ಟು ಹೆಚ್ಚಿಸಿದ್ದು, 2026 ರ ಪರೀಕ್ಷೆಗೆ ಹೊಸ ಶುಲ್ಕ ಜಾರಿಗೆ ಬಂದಿದೆ. ಶುಲ್ಕ ಹೆಚ್ಚಳ ಹೊಸದೇನಲ್ಲ, ನಿಯಮಿತವಾಗಿ ಮಾಡಲಾಗುತ್ತಿರುತ್ತದೆ. ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಅವರು ಶುಲ್ಕವನ್ನು ಹೆಚ್ಚಿಸಿದ್ದರು ಎಂದು ಹೇಳಿದ್ದಾರೆ.
ಎರಡನೇ ಮತ್ತು ಮೂರನೇ ಬಾರಿ SSLC ಪರೀಕ್ಷೆಗಳಿಗೆ ಹಾಜರಾಗಲು ಬಯಸುವ ವಿದ್ಯಾರ್ಥಿಗಳಿಂದ ನಾವು ಯಾವುದೇ ಶುಲ್ಕವನ್ನು ಸಂಗ್ರಹಿಸುತ್ತಿಲ್ಲ. ನಾವು ಈ ಪರೀಕ್ಷೆಗಳನ್ನು ಪರಿಚಯಿಸಿದ ನಂತರ, ಕೇಂದ್ರವು ನಮ್ಮ ಮಾದರಿಯನ್ನು ನಕಲು ಮಾಡಿದೆ ಎಂದು ಅವರು ಹೇಳಿದರು.
ಸಾಮಾಜಿಕ, ಶೈಕ್ಷಣಿಕ ಗಣತಿ ನಡೆಸಲು ಶಾಲೆಗಳ ರಜೆಯನ್ನು ಅ.18ರವರೆಗೆ ವಿಸ್ತರಿಸಿರುವುದರಿಂದ ಮಕ್ಕಳ ಪಠ್ಯ ಚಟುವಟಿಕೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಇದೇ ವೇಳೆ ತಿಳಿಸಿದ್ದಾರೆ. ಶಾಲಾ ವಾರ್ಷಿಕ ಕ್ಯಾಲೆಂಡರ್‌ನಂತೆ 240 ದಿನಗಳಿವೆ. ಆರ್‌ಟಿಇ ಕಾಯಿದೆ ಪ್ರಕಾರ 220 ದಿನಗಳನ್ನು ಕಡ್ಡಾಯವಾಗಿ ಬಳಸಬೇಕಾಗಿದೆ. ಒಂಬತ್ತು ದಿನಗಳವರೆಗೆ ಸಮೀಕ್ಷೆ ವಿಸ್ತರಿಸಿ ಸಿಎಂ ಸಿದ್ದರಾಮಯ್ಯ ಆದೇಶಿಸಿದ್ದಾರೆ. ಶಿಕ್ಷಕರ ಸಂಘದ ಸಲಹೆ ಮೇರೆಗೆ ಸಿಎಂ ಈ ನಿರ್ಧಾರ ಮಾಡಿದ್ದಾರೆ ಎಂದರು.
ಶಿಕ್ಷಕರು ವಿಸ್ತರಿತ ಅವಧಿ ವರೆಗೆ ಮಾತ್ರ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಅವಧಿಯಲ್ಲಿ ಸಮೀಕ್ಷೆ ಮುಗಿಯುವ ಭರವಸೆ ಇದೆ. ಒಂದು ವೇಳೆ ಬಾಕಿ ಆಗಿದ್ದಲ್ಲಿ ಮುಂದೆ ಆನ್‌ಲೈನ್ ಮೂಲಕ ಗ್ರಾಮ ಪಂಚಾಯಿತಿ ವಿಎ ಅಥವಾ ಪಿಡಿಒಗಳ ಮೂಲಕ ನಡೆಸುವ ಕುರಿತು ಚಿಂತನೆ ನಡೆಸಿದ್ದು, ಸರಕಾರ ನಿರ್ಧಾರ ಕೈಗೊಳ್ಳಲಿದೆ ಎಂದರು.
ರಾಜ್ಯದಲ್ಲಿ ಶೇ.81ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. ಬೆಂಗಳೂರಿನಲ್ಲಿ ಅ.4ರಿಂದ ಸಮೀಕ್ಷೆ ಆರಂಭಗೊಂಡು, ಶೇ.38ರಷ್ಟೇ ನಡೆದಿದೆ. ದ.ಕ.ದಲ್ಲಿ ಶೇ.68, ಉಡುಪಿಯಲ್ಲಿ ಶೇ.62ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. ಮಂಗಳೂರು ನಗರದ 12 ಸಾವಿರದಷ್ಟು ಮಂದಿ ವಿದೇಶದಲ್ಲಿದ್ದಾರೆ. ಅವರ ಸಮೀಕ್ಷೆಗೆ ಸೂಚನೆ ನೀಡಲಾಗಿದೆ ಎಂದರು.
Advertisement