
ಮಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಿಗೆ 13,000 ಶಿಕ್ಷಕರು ಹಾಗೂ ಅನುದಾನಿತ ಶಾಲೆಗಳಿಗೆ ಸುಮಾರು 5,500 ಶಿಕ್ಷಕರು ಸೇರಿದಂತೆ 18.500 ಕ್ಕೂ ಅಧಿಕ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗಳ ಸಿದ್ಧತೆ ನಡೆಯುತ್ತಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಸರ್ಕಾರದ ಅವಧಿಯಲ್ಲಿ ಕೇವಲ 4,700 ಶಿಕ್ಷಕರ ನೇಮಕಾತಿ ನಡೆದಿತ್ತು. ತಾನು ಶಿಕ್ಷಣ ಸಚಿವನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಈಗಾಗಲೇ 13,000 ಶಿಕ್ಷಕರ ನೇಮಕಾತಿ ನಡೆದದ್ದು, ಮತ್ತೆ 18, 500 ಶಿಕ್ಷಕರ ನೇಮಕಾತಿಗೆ ಸಿದ್ಧತೆ ನಡೆದಿದೆ ಎಂದರು.
ಪರಿಶಿಷ್ಟ ಜಾತಿಯಲ್ಲಿನ ಒಳ ಮೀಸಲಾತಿ ಕುರಿತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ವರದಿ ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ವಿಳಂಬವಾಗಿದೆ ಎಂದು ಅವರು ತಿಳಿಸಿದರು.
ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಕೆಪಿಎಸ್ ಮಾದರಿಯಡಿ ಶೇ. 80 ರಷ್ಟು ಸರಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಈ ಶಾಲೆಗಳಲ್ಲಿ ಫಲಿತಾಂಶದ ಗುಣಮಟ್ಟವನ್ನು ಹೆಚ್ಚಿಸುವ ಸಲುವಾಗಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಿ ಪರೀಕ್ಷೆಯಲ್ಲಿ ನಕಲು ಮಾಡುವುದಕ್ಕೆ ಕಡಿವಾಣ ಹಾಕಲಾಗಿದೆ ಎಂದು ಅವರು ಹೇಳಿದರು.
ಇದೇ ವೇಳೆ 3 ನೇ ಸ್ತರದ ಪರೀಕ್ಷಾ ಪದ್ಧತಿಯೂ ಕೂಡಾ ಮಕ್ಕಳ ಫಲಿತಾಂಶವನ್ನು ಉತ್ತಮ ಪಡಿಸಲು ಸಹಕಾರಿಯಾಗಿದೆ. ಈ ಪರೀಕ್ಷಾ ವ್ಯವಸ್ಥೆಯಿಂದ 2ನೇ ಸ್ತರ ಹಾಗೂ 3ನೇ ಸ್ತರದ ಎಸೆಸೆಲ್ಸಿ ಪರೀಕ್ಷೆಯಲ್ಲಿ 11,6000 ಮಕ್ಕಳು ಉತ್ತೀಣರಾಗಿದ್ದು, ಪಿಯುಸಿಯಲ್ಲಿಯೂ 56 ಸಾವಿರಕ್ಕೂ ಅಧಿಕ ಮಕ್ಕಳು ಉತ್ತೀಣರಾಗಿದ್ದಾರೆ ಎಂದವರು ತಿಳಿಸಿದರು.
Advertisement